ಬೆಳಗಾವಿ: ಇಲ್ಲಿನ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಗರದಲ್ಲಿ ‘ಸ್ಮೃತಿ ಭವನ’ ನಿರ್ಮಾಣಕ್ಕೆ ಮುಂದಾಗಿದ್ದು, ಯುಗಾದಿ ದಿನ (ಮಾರ್ಚ್ 31) ಭೂಮಿಪೂಜೆ ನೆರವೇರಿದೆ. ಸ್ವತಃ ಮಹಾರಾಷ್ಟ್ರ ಸರ್ಕಾರವೇ ಇದಕ್ಕೆ ಪರೋಕ್ಷ ಆರ್ಥಿಕ ನೆರವು ನೀಡುತ್ತಿದೆ ಎನ್ನಲಾಗಿದೆ.
ನಗರಕ್ಕೆ ಹೊಂದಿಕೊಂಡ ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಎಕರೆ ಜಾಗವಿದೆ. 1986ರಲ್ಲಿ ಸಂಭವಿಸಿದ ಗಲಭೆಯಲ್ಲಿ ಗೋಲಿಬಾರ್‌ನಿಂದ ಮೃತಪಟ್ಟ 9 ಮರಾಠಿಗರ ಸ್ಮರಣಾರ್ಥ ಸ್ಮಾರಕ ಕಟ್ಟಲಾಗಿದೆ. ಎಂಇಎಸ್‌ನವರು ಇಲ್ಲಿ ಪ್ರತಿ ವರ್ಷ ಜೂನ್ 1ರಂದು ‘ಹುತಾತ್ಮ ದಿನ’ ಆಚರಿಸುತ್ತಾರೆ. ಈಗ ಅದೇ ಜಾಗದಲ್ಲಿ ಸ್ಮೃತಿ ಭವನ ನಿರ್ಮಿಸಿ, ಗೋಲಿಬಾರ್‌ನಲ್ಲಿ ಸತ್ತ ಗಲಭೆಕೋರರ ಪುತ್ಥಳಿಗಳ ಪ್ರತಿಷ್ಠಾಪನೆ, ಸಾಕ್ಷ್ಯ ಪ್ರದರ್ಶನ, ಚಿತ್ರಗಳನ್ನು ಪ್ರದರ್ಶಿಸುವ ಉದ್ದೇಶ ಹೊಂದಿದ್ದಾರೆ.
1986ರಲ್ಲಿ ನಡೆದಿದ್ದೇನು?:
1986ರ ಜೂನ್ 1ರಂದು ಬೆಳಗಾವಿಯಲ್ಲಿ ಗಡಿ ಹೋರಾಟ ಭಾರೀ ಹಿಂಸಾಚಾರಕ್ಕೆ ತಿರುಗಿತು. ಅಂದು ಶರದ್ ಪವಾರ್ ನೇತೃತ್ವದಲ್ಲಿ ಮಹಾರಾಷ್ಟ್ರದಿಂದ ಬಂದು, ಬೆಳಗಾವಿಗೆ ನುಗ್ಗಿದ ಸಾವಿರಾರು ಜನ ದೊಂಬಿ ಎಬ್ಬಿಸಿದ್ದರು. ಕಲ್ಲು ತೂರಾಟ, ಹೊಡೆದಾಟ, ಬೆಂಕಿ ಹಚ್ಚುವಂಥ ಕೆಲಸ ನಡೆದಿತ್ತು. ಕುಡಿಯುವ ನೀರಿನಲ್ಲಿ ವಿಷ ಬೆರೆಸಿದ್ದರು. ಹಿಂಡಲಗಾ ಬಳಿ ಇದ್ದ ‘ಪಂಪಿಂಗ್ ಸ್ಟೇಷನ್’ಗೆ ಬೆಂಕಿ ಹಚ್ಚಲು ಮುಂದಾದರು. ಅದನ್ನು ತಡೆಯಲು ಪೊಲೀಸರು ಗೋಲಿಬಾರ್ ಮಾಡಿದರು. 9 ಮಂದಿ ಗುಂಡಿಗೆ ಬಲಿಯಾದರು. ಆ ಹಿಂಸಾಚಾರಿಗಳನ್ನೇ ಎಂಇಎಸ್ ‘ಹುತಾತ್ಮರು’ ಎಂದು ಬಿಂಬಿಸುತ್ತಾರೆ.
‘ಕರ್ನಾಟಕ ಸರ್ಕಾರ ಯಾರನ್ನು ಗಲಭೆಕೋರರು, ಅಪರಾಧಿಗಳು ಎಂದು ತೀರ್ಮಾನಿಸಿ ಗುಂಡು ಹಾರಿಸಿದೆಯೋ ಅವರ ಹೆಸರಿನಲ್ಲೇ ಭವನ ನಿರ್ಮಾಣ ಮಾಡಲು ಹೇಗೆ ಸಾಧ್ಯ’ ಎಂಬುದು ಕನ್ನಡ ಹೋರಾಟಗಾರರ ಪ್ರಶ್ನೆ.
ಪ್ರತಿಯೊಂದರಲ್ಲೂ ಕುತಂತ್ರ:
ಗಡಿ ವಿವಾದಕ್ಕೆ ಒಳಪಟ್ಟ ಕರ್ನಾಟಕದೊಳಗಿನ 865 ನಗರ– ಹಳ್ಳಿಗಳ ಜನರ ಬಗ್ಗೆ ಮಹಾರಾಷ್ಟ್ರ ಸರ್ಕಾರ ಇನ್ನಿಲ್ಲದ ಆಸಕ್ತಿ ವಹಿಸುತ್ತಿದೆ. ಈಗಾಗಲೇ ಆರೋಗ್ಯ ವಿಮೆ, ಉಚಿತ ಶಿಕ್ಷಣ ಸೌಕರ್ಯ, ಉಚಿತ ಹಾಸ್ಟೆಲ್, ಉದ್ಯೋಗದಲ್ಲಿ ಮೀಸಲಾತಿಯಂಥ ಆಮಿಷ ಒಡ್ಡಿದೆ.
‘ವಿವಾದಕ್ಕೆ ಒಳಪಟ್ಟ ಪ್ರದೇಶದ ಜನರ ಯೋಗಕ್ಷೇಮವನ್ನು ಮಹಾರಾಷ್ಟ್ರವೇ ನೋಡಿಕೊಳ್ಳುತ್ತದೆ’ ಎಂಬ ದಾಖಲೆ ನಿರ್ಮಿಸುವುದು ಇದರ ಹಿಂದಿನ ಉದ್ದೇಶ. ಸುಪ್ರೀಂಕೋರ್ಟಿನಲ್ಲಿ ಸ್ವತಃ ಜನರೇ ತನ್ನ ಪರ ಇದ್ದಾರೆ ಎಂಬುದನ್ನು ಬಿಂಬಿಸುವ ಕುತಂತ್ರವಿದು. ಇಷ್ಟಾದರೂ ಕರ್ನಾಟಕ ಸರ್ಕಾರ ಮಾತ್ರ ಯಾವುದನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಕಿಡಿ ಕಾರುತ್ತಾರೆ.
ಎಂಇಎಸ್‌ನವರು ನೇರವಾಗಿ ಕರ್ನಾಟಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಸ್ಮೃತಿ ಭವನ ನಿರ್ಮಾಣಕ್ಕೆ ಅವಕಾಶ ಕೊಟ್ಟರೆ ದೊಡ್ಡ ಪೆಟ್ಟು ತಿನ್ನಬೇಕಾಗುತ್ತದೆ. ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕುಅಶೋಕ ಚಂದರಗಿ ಅಧ್ಯಕ್ಷ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಗಡಿ ಕದನ ಜೀವಂತವಾಗಿ ಇಡಲು ಹಾಗೂ ಇತಿಹಾಸವನ್ನು ಹೊಸ ಪೀಳಿಗೆಗೆ ತಿಳಿಸಲು ಈ ಭವನ ನಿರ್ಮಿಸಲಾಗುತ್ತಿದೆ. ಮೊಂಡ ಕರ್ನಾಟಕ ಸರ್ಕಾರದ ಮುಂದೆ ನಮ್ಮ ಶಕ್ತಿ ತೋರಿಸಬೇಕಿದೆಮನೋಹರ ಕಿಣೇಕರ ಕಾರ್ಯಾಧ್ಯಕ್ಷ ಎಂಇಎಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.