ADVERTISEMENT

ಬೆಳಗಾವಿ | ಬಳ್ಳಾರಿ ನಾಲಾ: ಒತ್ತುವರಿ ತೆರವು, ತಡೆಗೋಡೆ ನಿರ್ಮಾಣಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 12:55 IST
Last Updated 15 ಜೂನ್ 2020, 12:55 IST
ಬೆಳಗಾವಿಯಲ್ಲಿ ಬಳ್ಳಾರಿ ನಾಲೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೋಮವಾರ ಪರಿಶೀಲಿಸಿದರು
ಬೆಳಗಾವಿಯಲ್ಲಿ ಬಳ್ಳಾರಿ ನಾಲೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೋಮವಾರ ಪರಿಶೀಲಿಸಿದರು   

ಬೆಳಗಾವಿ: ಕಳೆದ ಮಳೆಗಾಲದಲ್ಲಿ ಉಕ್ಕಿಹರಿದು ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ತೀವ್ರ ಹಾನಿಯುಂಟು ಮಾಡಿದ್ದ ಬಳ್ಳಾರಿ ನಾಲೆಯನ್ನು (ದೊಡ್ಡ ಚರಂಡಿ) ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೋಮವಾರ ಪರಿಶೀಲಿಸಿದರು.

‘ಬಳ್ಳಾರಿ, ಲೇಂಡಿ ಹಾಗೂ ನಾಗಝರಿ ನಾಲಾಗಳ ಎರಡೂ ಬದಿಯಲ್ಲಿರುವ ತ್ಯಾಜ್ಯ ಮತ್ತು ಬೆಳೆದಿರುವ ಗಿಡಗಳನ್ನು ತೆರವುಗೊಳಿಸಬೇಕು. ಅಗತ್ಯವಿರುವಲ್ಲಿ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಿಸಬೇಕು’ ಎಂದು ನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು.

‘ತ್ಯಾಜ್ಯ ತೆರವುಗೊಳಿಸದಿರುವುದು, ಅತಿಕ್ರಮಣ ಆಗಿರುವುದು ಹಾಗೂ ತಡೆಗೋಡೆ ನಿರ್ಮಿಸದಿರುವುದರಿಂದ ನಾಲೆಯಲ್ಲಿ ಹಿಂದಿನ ಮಳೆಗಾಲದಲ್ಲಿ ನೀರು ಉಕ್ಕಿ ಹರಿದು ಅಪಾರ ಹಾನಿಯಾಗಿತ್ತು. ಅತಿಕ್ರಮಣ ತೆರವು ಮತ್ತು ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಅಭಯ ಪಾಟೀಲ ಒತ್ತಾಯಿಸಿದರು.

ADVERTISEMENT

‘ನಾಲಾಗಳ ಎರಡೂ ಬದಿಯಲ್ಲಿ ಭದ್ರವಾದ ಕಾಂಕ್ರೀಟ್ ತಡೆಗೋಡೆ ನಿರ್ಮಿಸಬೇಕು. ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು’ ಎಂದರು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ‘ಗುಜರಾತ್‌ನ ಕೆಲವು ಕಡೆಗಳಲ್ಲಿ ನಾಲಾಗಳ ಮೇಲೆ ಹಾಗೂ ಅಕ್ಕಪಕ್ಕದಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ. ಆ ಮಾದರಿಯನ್ನು ಬಳ್ಳಾರಿ ನಾಲಾದಲ್ಲೂ ಅನುಷ್ಠಾನಗೊಳಿಸಬೇಕು’ ಎಂದು ಸಲಹೆ ನೀಡಿದರು.

ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ‘ಬಳ್ಳಾರಿ ನಾಲಾ ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಡಲಾಗುತ್ತಿದೆ’ ಎಂದರು.

ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತ ಬಿ‌.ಎಸ್. ಲೋಕೇಶ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.