ADVERTISEMENT

‘ಕಿತ್ತೂರು ಪರಂಪರೆಗೆ ₹58 ಕೋಟಿ ಅನುದಾನ’

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 16:18 IST
Last Updated 8 ಅಕ್ಟೋಬರ್ 2024, 16:18 IST
ಚನ್ನಮ್ಮನ ಕಿತ್ತೂರಿನಲ್ಲಿ ಕೋಟೆ ಆವರಣದಲ್ಲಿಯ ವಿವಿಧ ಕಾಮಗಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಮಂಗಳವಾರ ಚಾಲನೆ ನೀಡಿದರು
ಚನ್ನಮ್ಮನ ಕಿತ್ತೂರಿನಲ್ಲಿ ಕೋಟೆ ಆವರಣದಲ್ಲಿಯ ವಿವಿಧ ಕಾಮಗಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಮಂಗಳವಾರ ಚಾಲನೆ ನೀಡಿದರು   

ಚನ್ನಮ್ಮನ ಕಿತ್ತೂರು: ‘ಕಿತ್ತೂರು ಸಂಸ್ಥಾನದ ಇತಿಹಾಸ, ಪರಂಪರೆ ಉಳಿಸಲು ಮತ್ತು ಭವಿಷ್ಯದ ಪೀಳಿಗೆಗೆ ತಿಳಿಸಲು ನೆರವಾಗುವ ಕಾಮಗಾರಿಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹58 ಕೋಟಿ ಅನುದಾನ ನೀಡಿದ್ದಾರೆ’ ಎಂದು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಇಲ್ಲಿಯ ಕೋಟೆ ಆವರಣದಲ್ಲಿ ಮಂಗಳವಾರ ವಿವಿಧ ಕಾಮಗಾರಿಗಳ ಚಾಲನೆ ನೀಡಿ ಅವರು ಮಾತನಾಡಿದರು.

‘ಕಿತ್ತೂರಿಗಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರ ಮಾಹಿತಿಯನ್ನು ಈಗಿನ ಪೀಳಿಗೆಗೆ ತಿಳಿಯುವ ಹಾಗೆ ಇತಿಹಾಸ ಹೇಳಬೇಕಾಗಿದೆ. ಇದಕ್ಕೆ ತಂತ್ರಜ್ಞಾನ ಬಳಸಿಕೊಳ್ಳಲಾಗುವುದು. ಇದಕ್ಕಾಗಿ ₹30 ಕೋಟಿ ವೆಚ್ಚದಲ್ಲಿ ‘ಥೀಮ್ ಪಾರ್ಕ್’ ಕಾಮಗಾರಿಗೆ ಹಣ ಬಿಡುಗಡೆ ಆಗಿದೆ. ಟೆಂಡರ್ ಪ್ರಕ್ರಿಯೆ ಆದ ಕೂಡಲೇ ಕಾಮಗಾರಿ ಪ್ರಾರಂಭವಾಗುವುದು’ ಎಂದರು.

ADVERTISEMENT

‘ಕಿತ್ತೂರು ಕೋಟೆ ಎಂದರೆ ನಮ್ಮ ಅಸ್ತಿತ್ವ ಮತ್ತು ಇತಿಹಾಸದ ಪ್ರತಿಬಿಂಬ. ಇದನ್ನು ಉಳಿಸಲು ಮುಂದಾಗಬೇಕಿದೆ. ಮೂಲ ಇತಿಹಾಸಕ್ಕೆ ಧಕ್ಕೆ ಆಗದ ಹಾಗೆ ₹12.11 ಕೋಟಿ ಅನುದಾನದಲ್ಲಿ ಕೋಟೆ ಆವರಣ ಗೋಡೆ, ₹2.4 ಕೋಟಿ ವೆಚ್ಚದಲ್ಲಿ ಅರಮನೆ ಅವಶೇಷ ಸಂರಕ್ಷಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದೂ ಹೇಳಿದರು.

‘ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಗೆದ್ದ ಸಂಭ್ರಮದ 200ನೇ ವಿಜಯೋತ್ಸವ ಇದಾಗಿದೆ. ₹5 ಕೋಟಿ ವೆಚ್ಚದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಶಾಲೆಗಳಲ್ಲಿ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆ ಏರ್ಪಡಿಸಲಾಗುತ್ತಿದೆ’ ಎಂದು ಹೇಳಿದರು.

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ‘ಕಿತ್ತೂರು ಕೋಟೆ ಸಂರಕ್ಷಣೆ ಮತ್ತು ಅಭಿವೃದ್ಧಿ ವಿಷಯದ ದೃಷ್ಟಿಕೋನದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ನಮಗಿಂತ ಮುಂದಿದ್ದಾರೆ. ಐತಿಹಾಸಿಕ ಈ ಪಟ್ಟಣವನ್ನು ವಿಭಿನ್ನವಾಗಿ ಅಭಿವೃದ್ಧಿ ಪಡಿಸೋಣ ಎಂದು ಭರವಸೆ ನೀಡಿದ್ದಾರೆ. ನಿರೀಕ್ಷೆ ಮೀರಿ ಅನುದಾನ ಬಿಡುಗಡೆಗೊಳಿಸಲು ಕಾರಣರಾಗಿದ್ದಾರೆ’ ಎಂದು ಶ್ಲಾಘಿಸಿದರು.

ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತೆ, ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ ಇದ್ದರು. ವಿವೇಕ ಕುರಗುಂದ ಕಾರ್ಯಕ್ರಮ ನಿರೂಪಿಸಿದರು.

ವಸ್ತು ಸಂಗ್ರಹಾಲಯ ವೀಕ್ಷಣೆ

ಸಚಿವ ಕೃಷ್ಣ ಬೈರೇಗೌಡ ಅವರು ಕಾರ್ಯಕ್ರಮಕ್ಕೂ ಮುನ್ನ ಕೋಟೆ ಆವರಣದೊಳಗಿನ ವಸ್ತುಸಂಗ್ರಹಾಲಯ ವೀಕ್ಷಿಸಿದರು. ಅಲ್ಲಿಯ ವಸ್ತುಗಳ ಬಗ್ಗೆ ಕ್ಯೂರೇಟರ್ ರಾಘವೇಂದ್ರ ಸಚಿವರಿಗೆ ಪರಿಚಯ ಮಾಡಿಕೊಟ್ಟರು. ತಹಶೀಲ್ದಾರ್ ರವೀಂದ್ರ ಹಾದಿಮನಿ ಇಒ ಕಿರಣ ಘೋರ್ಪಡೆ ಇದ್ದರು. ಡೊಳ್ಳು ಬಾರಿಸುತ್ತ ಸಚಿವರನ್ನು ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಕರೆದುಕೊಂಡು ಹೋಗಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.