ADVERTISEMENT

ಸಚಿವೆ ಹೆಬ್ಬಾಳಕರ ಅವರಿಂದ ಭ್ರಷ್ಟ ಅಧಿಕಾರಿಗಳ ರಕ್ಷಣೆ: ಓಂಪ್ರಕಾಶ ರೊಟ್ಟೆ ಆರೋಪ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 7:23 IST
Last Updated 21 ಜೂನ್ 2025, 7:23 IST
<div class="paragraphs"><p>ಓಂಪ್ರಕಾಶ ರೊಟ್ಟೆ ಮದನೂರೆ</p></div>

ಓಂಪ್ರಕಾಶ ರೊಟ್ಟೆ ಮದನೂರೆ

   

ಬೆಳಗಾವಿ: ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಬೀದರ್‌ ಉಪನಿರ್ದೇಶಕರಾಗಿ ಈ ಹಿಂದೆ ಕೆಲಸ ಮಾಡಿದ್ದ ತಿಪ್ಪಣ್ಣ ಸಿರ್ಸಿಗೆ ಮತ್ತು ರವೀಂದ್ರ ರತ್ನಾಕರ್‌ ಅವರ ಮೇಲೆ ಕ್ರಮವಾಗಿ ₹26 ಕೋಟಿ ಮತ್ತು ₹6 ಕೋಟಿ ದುರುಪಯೋಗದ ಆರೋಪಗಳಿವೆ. ಆ ಇಬ್ಬರೂ ಅಧಿಕಾರಿಗಳನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಕ್ಷಿಸುತ್ತಿದ್ದಾರೆ’ ಎಂದು ಬೀದರ್‌ನ ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಮದನೂರೆ ಆರೋಪಿಸಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2023ರ ಜುಲೈ 14ರಂದು ಕಾಂಗ್ರೆಸ್‌ನ ವಿಧಾನ ಪರಿಷತ್‌ ಸದಸ್ಯರಾಗಿದ್ದ ಅರವಿಂದಕುಮಾರ್ ಅರಳಿ ವಿಧಾನ ಪರಿಷತ್‌ನಲ್ಲಿ ದುರುಪಯೋಗದ ವಿಷಯ ಪ್ರಸ್ತಾಪಿಸಿದ್ದರು. ಆಗ ಹಿರಿಯ ಅಧಿಕಾರಿಗಳ ತಂಡವನ್ನು ವಿಚಾರಣೆಗೆ ರಚಿಸಿದ್ದ ಸರ್ಕಾರ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಆದರೂ, ಕ್ರಮವಾಗದ್ದರಿಂದ ಹುಮ್ನಾಬಾದ್ ಶಾಸಕ ಸಿದ್ದು ಪಾಟೀಲ 2024ರ ಏಪ್ರಿಲ್ 6ರಂದು ವಿಧಾನಸಭೆಯಲ್ಲಿ ಮತ್ತೆ ಈ ವಿಷಯ ಪ್ರಸ್ತಾಪಿಸಿದ್ದರು. ವಿಚಾರಣೆ ನಂತರ ಇಬ್ಬರೂ ಅಧಿಕಾರಿಗಳ ವಿರುದ್ಧ ದೋಷಾರೋಪ ಸಲ್ಲಿಸಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು’ ಎಂದು ತಿಳಿಸಿದರು.

ADVERTISEMENT

‘ಬೆಂಗಳೂರಿನ ವಿಧಾನಸೌಧದಲ್ಲಿ 2025ರ ಮೇ 14ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಅದಾದ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಶಾಮಲಾ ಇಕ್ಬಾಲ್ ಅವರು, ಇಬ್ಬರೂ ಅಧಿಕಾರಿಗಳ ಅಮಾನತು ಕಡತವನ್ನು ಅನುಮೋದನೆಗಾಗಿ ಹೆಬ್ಬಾಳಕರ ಅವರಿಗೆ ಕಳುಹಿಸಿದ್ದಾರೆ. ಆದರೆ, ಈವರೆಗೂ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಬೇರೆ ಬೇರೆ ಸ್ಥಳಗಳಲ್ಲಿ ಈಗಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ಆಪಾದಿಸಿದರು.

‘ದುರುಪಯೋಗದ ಆರೋಪ ಹೊತ್ತಿರುವ ಅಧಿಕಾರಿಗಳನ್ನು ರಕ್ಷಿಸುತ್ತಿರುವುದರಿಂದ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸಿದ್ದರಾಮಯ್ಯ ತಮ್ಮ ಸಂಪುಟದಿಂದ ಕೈಬಿಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.