ADVERTISEMENT

ವೈದ್ಯಕೀಯ ಸಲಕರಣೆ ಖರೀದಿಗೆ ಶೀಘ್ರ ಅನುದಾನ ಬಿಡುಗಡೆ: ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2023, 15:40 IST
Last Updated 4 ನವೆಂಬರ್ 2023, 15:40 IST
ಬೆಳಗಾವಿ ಜಿಲ್ಲಾಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಶನಿವಾರ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದರು
ಬೆಳಗಾವಿ ಜಿಲ್ಲಾಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಶನಿವಾರ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದರು   

ಬೆಳಗಾವಿ: ‘ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣವಾದ 250 ಹಾಸಿಗೆಗಳ ಸಾಮರ್ಥ್ಯದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಅಗತ್ಯವಿರುವ ಬೋಧಕ, ಬೋಧಕೇತರ ಸಿಬ್ಬಂದಿ ನೇಮಿಸಲಾಗುವುದು. ಪೀಠೋಪಕರಣ, ವೈದ್ಯಕೀಯ ಸಲಕರಣೆಗಳ ಖರೀದಿಗೆ ಶೀಘ್ರ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಆಶ್ವಾಸನೆ ನೀಡಿದರು.

ಇಲ್ಲಿ ಶನಿವಾರ ನಡೆದ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ, ‘ಬೆಳಗಾವಿ ಜಿಲ್ಲಾಸ್ಪತ್ರೆ ಸುಮಾರು 150 ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಹಳೆಯ ಕಟ್ಟಡ ಇದಾಗಿರುವುದರಿಂದ ಹಲವು ದುರಸ್ತಿ ಕಾಮಗಾರಿ ಬಾಕಿ ಇವೆ. ಚಿಕಿತ್ಸೆಗೆ ಜಿಲ್ಲೆಯ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಾರೆ. ಹಾಸಿಗೆಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ನಗರದಲ್ಲಿ 450 ಹಾಸಿಗೆಗಳ ಸಾಮರ್ಥ್ಯದ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಗುರುತಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 450 ಹಾಸಿಗೆಗಳ ಸಾಮರ್ಥ್ಯದ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ ರೂಪಿಸಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ. ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ, ಅಂದಾಜು ವೆಚ್ಚದ ಕುರಿತು ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು’ ಎಂದು ಹೇಳಿದರು.

ಸಮರ್ಪಕ ಬಳಕೆಯಾಗಲಿ: ಜಿಲ್ಲಾಸ್ಪತ್ರೆಯಲ್ಲಿ ವಿವಿಧ ಕಾಮಗಾರಿಗಳಿಗೆ ಬಂದಿರುವ ಅನುದಾನವನ್ನು ಅಧಿಕಾರಿಗಳು ಸರಿಯಾಗಿ ಬಳಕೆ ಮಾಡುತ್ತಿಲ್ಲ. ವಿನಾಕಾರಣ ನೆಪವೊಡ್ಡದೆ ಅನುದಾನವನ್ನು ಸಮರ್ಪಕವಾಗಿ ಬಳಸಿ, ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಬೇಕು’ ಎಂದು ಪ್ರಕಾಶ ಹುಕ್ಕೇರಿ ಸೂಚಿಸಿದರು.

‘ಸವದತ್ತಿ, ನಿಪ್ಪಾಣಿ, ಚಿಕ್ಕೋಡಿಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ 2017ರಲ್ಲಿ ಅನುಮೋದನೆ ಸಿಕ್ಕಿದ್ದು, ಅನುದಾನವನ್ನೂ ನೀಡಲಾಗಿದೆ. ಆದರೆ, ಅಧಿಕಾರಿಗಳು ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ. ಇದರಿಂದಾಗಿ ಚಿಕ್ಕೋಡಿಯ ರೋಗಿಗಳು ಚಿಕಿತ್ಸೆಗಾಗಿ ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿಗೆ ಹೋಗುತ್ತಿದ್ದಾರೆ. ಹೊಸದಾಗಿ ಟೆಂಡರ್ ಕರೆದು ಆಸ್ಪತ್ರೆಗಳ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಹಾಜರಾತಿ ಪರಿಶೀಲಿಸಿ: ‘ಬಿಮ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಹಾಜರಾತಿ ಕಡ್ಡಾಯವಾಗಿ ಪರಿಶೀಲಿಸಬೇಕು. ನಂತರವೇ ಅವರಿಗೆ ವೇತನ ಪಾವತಿಸಬೇಕು. ಸಿಬ್ಬಂದಿ ಇಎಸ್ಐ, ಪಿಎಫ್ ಕಡಿತಗೊಳಿಸಿರುವ ಕುರಿತ ದಾಖಲೆಗಳನ್ನು ಪರಿಶೀಲಿಸಬೇಕು’ ಎಂದು ಶರಣಪ್ರಕಾಶ ಪಾಟೀಲ ಸೂಚಿಸಿದರು.

ಶಾಸಕ ಆಸೀಫ್ ಸೇಠ್, ಬಿಮ್ಸ್ ನಿರ್ದೇಶಕ ಡಾ.ಅಶೋಕಕುಮಾರ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕ ಡಾ.ಎ.ಬಿ.ಪಾಟೀಲ, ಮುಖ್ಯ ಆಡಳಿತಾಧಿಕಾರಿ ಡಾ.ಸಿದ್ದು ಹುಲ್ಲೊಳ್ಳಿ, ಜಿಲ್ಲಾ ಶಸ್ತ್ರಚಿಕಿತ್ಸಕ ವಿಠ್ಠಲ ಶಿಂಧೆ, ಡಾ.ಸರೋಜಾ ತಿಗಡಿ, ನಾಮದೇವ ಮಾಳಗಿ, ಪ್ರಕಾಶ್ ಕೊಡ್ಲಿ ಇತರರಿದ್ದರು.

‘ಕರ್ತವ್ಯ ನಿರ್ವಹಿಸದವರ ವಿರುದ್ಧ ಕ್ರಮ’

ಬೆಳಗಾವಿ: ‘ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿನ ತಜ್ಞವೈದ್ಯರು ಮತ್ತು ವೈದ್ಯರು ತಮ್ಮ ಕೆಲಸದ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಜಿಲ್ಲಾಸ್ಪತ್ರೆಯಲ್ಲಿ ನೇಮಕಗೊಂಡ ಕೆಲವು ತಜ್ಞವೈದ್ಯರು ಮತ್ತು ವೈದ್ಯರು ಹಾಜರಾತಿ ದಾಖಲಿಸಿದ ನಂತರ ತಮ್ಮ ಕರ್ತವ್ಯದ ಅವಧಿಯಲ್ಲೇ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕುರಿತು ದೂರು ಬಂದಿವೆ. ಇದನ್ನು ಮುಂದೆ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ’ ಎಂದರು.

‘ಇದು ಸರ್ಕಾರಿ ಆಸ್ಪತ್ರೆಯಾಗಿದ್ದು ಇಲ್ಲಿ ತಜ್ಞವೈದ್ಯರು ಮತ್ತು ವೈದ್ಯರನ್ನು ರಕ್ಷಿಸಲು ಯಾವುದೇ ಗುಂಪುಗಳ ರಚನೆಗೆ ಅವಕಾಶವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಜಿಲ್ಲಾಸ್ಪತ್ರೆಯಲ್ಲಿ ಒಂದು ಎಂಆರ್‌ಐ ಮತ್ತು ಎರಡು ಸಿಟಿ ಸ್ಕ್ಯಾನ್ ಘಟಕಗಳಿವೆ. ಅವುಗಳನ್ನು ಹೊಸ ಕಟ್ಟಡದ ಆವರಣಕ್ಕೆ ಸ್ಥಳಾಂತರಿಸಲಾಗುವುದು. ಸ್ಕ್ಯಾನಿಂಗ್‌ ವರದಿಗಳು ರೋಗಿಗಳ ಕೈಗೆಟುಕಲು ವಿಳಂಬವಾಗುತ್ತಿರುವ ಕುರಿತು ದೂರು ಬಂದಿದೆ. ಮುಂದಿನ ದಿನಗಳಲ್ಲಿ ಆ ವರದಿಗಳನ್ನು ತ್ವರಿತವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು. ನಂತರ ಆಸ್ಪತ್ರೆ ವಿವಿಧ ವಾರ್ಡ್‌ಗಳಿಗೆ ತೆರಳಿ ಪರಿಶೀಲಿಸಿದರು. ರೋಗಿಗಳ ಆರೋಗ್ಯ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.