ADVERTISEMENT

ಬಜೆಟ್‌: ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 15:03 IST
Last Updated 1 ಫೆಬ್ರುವರಿ 2020, 15:03 IST
   

‘ಶಿಕ್ಷಣಕ್ಕೆ ಒತ್ತು; ಸ್ವಾಗತಾರ್ಹ’

ಇಂದಿನ ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ₹ 99,300 ಕೋಟಿ ಅನುದಾನ ನೀಡಿರುವುದು ಸ್ವಾಗತಾರ್ಹ. 150 ವಿವಿಗಳಲ್ಲಿ ಹೊಸ ಕೋರ್ಸ್‌ ಆರಂಭಿಸುವುದು ಹಾಗೂ ಪ್ರತಿ ಜಿಲ್ಲೆಗೂ ವೈದ್ಯಕೀಯ ಕಾಲೇಜು ಸ್ಥಾಪಿಸುವುದರಿಂದ ಹೆಚ್ಚಿನ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ. ಯುವ ಎಂಜಿನಿಯರ್‌ಗಳಿಗೆ ಸ್ಥಳಿಯ ನಗರ ಸಂಸ್ಥೆಗಳಲ್ಲಿ ಇಂಟರ್ನ್‌ಷಿಪ್ ಮಾಡಲು ಅವಕಾಶ ಮತ್ತು ‘ಸ್ಟಡಿ ಇನ್ ಇಂಡಿಯಾ’ ಯೋಜನೆಗಳಿಂದ ಯುವಕರಿಗೆ ಲಾಭವಾಗಲಿದೆ.

- ಗಿರೀಶ ವಿ. ಬಡಿಗೇರ, ಬೆಳಗಾವಿ

ADVERTISEMENT

***

‘ಆಮದು ಸುಂಕ ಹೆಚ್ಚಿಸಿದ್ದು ಒಳ್ಳೆಯದು’

‘ವೇತನದಾರರ ಆದಾಯ ತೆರಿಗೆಯನ್ನು ಕಡಿಮೆಗೊಳಿಸಿದ್ದಕ್ಕೆ ಸಂತೋಷವಾಗಿದೆ. ಸಿಗರೇಟ್‌ ಮೇಲಿನ ಸುಂಕ ಹೆಚ್ಚಿಸಿದ್ದು ಒಳ್ಳೆಯದಾಯಿತು. ಆರೋಗ್ಯಕ್ಕೆ ಹಾನಿಕರವಾಗಿರುವ ಇಂತಹ ಪದಾರ್ಥಗಳನ್ನು ಸಂಪೂರ್ಣವಾಗಿ ನಿಷೇಧ ಹೇರುವುದೇ ಉತ್ತಮ. ಸ್ವದೇಶಿ ವಸ್ತುಗಳ ಬಳಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿದೇಶಗಳಿಂದ ಆಮದಾಗುವ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಿರುವುದು ಸ್ವಾಗತಾರ್ಹ’

- ಗಂಗಾಧರ ಶೆಟ್ಟಿ, ವ್ಯಾಪಾರಿ, ಬೆಳಗಾವಿ

***

‘ನಿರೀಕ್ಷೆಗಳು ಈಡೇರಿಲ್ಲ’

ಕೇಂದ್ರ ಸರ್ಕಾರದಿಂದ ಸಾಕಷ್ಟು ನಿರೀಕ್ಷೆ ಮಾಡಲಾಗಿತ್ತು. ಆಹಾರ ಧಾನ್ಯಗಳ ಬೆಲೆ, ವಿದ್ಯುತ್‌ ದರ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೆ ತಲುಪಿವೆ. ಇವುಗಳನ್ನು ನಿಯಂತ್ರಿಸುವಂತಹ ಯಾವುದಾದರೂ ಕ್ರಮಕೈಗೊಂಡಿದ್ದರೆ ಒಳ್ಳೆಯದಾಗುತ್ತಿತ್ತು. ಆದಾಯ ತೆರಿಗೆ ಕಡಿಮೆಗೊಳಿಸಿದ್ದರಿಂದ ಸ್ವಲ್ಪಮಟ್ಟಿನ ಲಾಭವಾಗಿದೆ. ಎಲ್ಐಸಿಯನ್ನು ಖಾಸಗೀಕರಣಗೊಳಿಸಬಾರದು. ಬಂಡವಾಳ ಹಿಂತೆಗೆತ ನಿರ್ಧಾರವನ್ನು ಕೈಬಿಡಬೇಕು.

– ಬಬಿತಾ ಖಾಂಡೇಕರ, ಉದ್ಯೋಗಿ

***

‘ಕೃಷಿಗೆ ಸಬ್ಸಿಡಿ– ಒಳ್ಳೆಯದು’

‘ಆದಾಯ ತೆರಿಗೆ ಕಡಿಮೆಗೊಳಿಸಿದ್ದು ಒಳ್ಳೆಯದಾಗಿದೆ. ಇದರ ಜೊತೆಗೆ ಕೃಷಿಗೆ ಸಾಕಷ್ಟು ಸಬ್ಸಿಡಿ ಕೂಡ ನೀಡಿದ್ದಾರೆ. ಎಲ್‌ಐಸಿ ಬಂಡವಾಳ ಹಿಂತೆಗೆಯಲು ಸರ್ಕಾರ ಮುಂದಾಗಿರುವುದು ಒಳ್ಳೆಯದು. ಇದರಿಂದ ಆಡಳಿತ ಬಿಗಿಯಾಗಿ ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಬಹುದು’

– ದಿಲೀಪ ಚನ್ನಗೊಂಡ, ಉದ್ಯೋಗಿ

***

‘ಕೌಶಲ ಅಭಿವೃದ್ಧಿಗೆ ಒತ್ತು’

ಕೌಶಲ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಆರ್ಥಿಕ ಕೊರತೆಯನ್ನು ನೀಗಿಸಲು ಹಲವು ಕ್ರಮಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ಚೇತರಿಸಿಕೊಳ್ಳಲಿದೆ. ಶಿಕ್ಷಣ, ಕೃಷಿ, ಕೈಗಾರಿಕೆಗಳಿಗೆ ಆದ್ಯತೆ ನೀಡಲಾಗಿದೆ.

– ಮುಖ್ತಾರ ಹುಸೇನ ಪಠಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.