ADVERTISEMENT

ನಗರಪಾಲಿಕೆ ಸದಸ್ಯರು ಹಕ್ಕ ಚಲಾಯಿಸಬಹುದು: ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ 8,875 ಮತದಾರರು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 15:44 IST
Last Updated 22 ನವೆಂಬರ್ 2021, 15:44 IST
ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್‌
ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್‌   

ಬೆಳಗಾವಿ: ‘ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಡಿ.10ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ 511 ಮತಗಟ್ಟೆಗಳ ವ್ಯಾಪ್ತಿಯ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. 4,229 ಹಾಗೂ 4,646 ಮಹಿಳೆಯರು ಸೇರಿದಂತೆ 8,875 ಮತದಾರರು ಇದ್ದಾರೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್‌ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಪ್ರತಿ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 511 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ಬಲಪಡಿಸಲು ಸೂಚನೆ ನೀಡಲಾಗಿದೆ. ಕೋವಿಡ್ ಪರಿಸ್ಥಿತಿ ಕೂಡ ಇರುವುದರಿಂದ ಚೆಕ್‌ಪೋಸ್ಟ್‌ಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಬೇಕು. ಗೋವಾ ಮತ್ತು ಮಹಾರಾಷ್ಟ್ರದಿಂದ ರಾಜ್ಯ ಪ್ರವೇಶಿಸುವವರನ್ನು ತಪಾಸಣೆಗೆ ಒಳಪಡಿಸಬೇಕು. ಪ್ರವೇಶ ಪಡೆಯುವವರು ಕೋವಿಡ್ ನೆಗೆಟಿವ್ ವರದಿ (ಆರ್‌ಟಿಪಿಸಿಆರ್‌) ಇರಬೇಕು ಅಥವಾ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು ಎನ್ನುವ ಮಾರ್ಗಸೂಚಿ ಇದೆ. ಇದನ್ನು ಪರಿಶೀಲಿಸಲು ಸೂಚಿಸಲಾಗಿದೆ. ಅಕ್ರಮ ಮದ್ಯ ಸಾಗಣೆ ತಡೆಗೆ ನಿಗಾ ವಹಿಸುವಂತೆ ಅಬಕಾರಿ ಇಲಾಖೆಯವರಿಗೂ ನಿರ್ದೇಶನ ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಬೆಳಗಾವಿ ಮಹಾನಗರಪಾಲಿಕೆಗೆ ಚುನಾಯಿತರಾದ ಸದಸ್ಯರ ಹೆಸರು ರಾಜ್ಯಪತ್ರದಲ್ಲಿ ಪ್ರಕಟವಾಗಿದೆ. ಹೀಗಾಗಿ. ಅವರಿಗೂ ಮತದಾನದ ಹಕ್ಕಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಅದರಂತೆ ಅವರ ಹೆಸರನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ’ ಎಂದು ಹೇಳಿದರು.

‘ನ.13ರಿಂದ ವಿಧಾನಮಂಡಲ ಚಳಿಗಾಲದ ಅಧಿವೇಶನ ಕೂಡ ಆರಂಭವಾಗಲಿದೆ. ಅದಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಸತಿ, ಊಟ, ಸಾರಿಗೆ, ಸ್ವಾಗತ ಸೇರಿದಂತೆ ಏಳು ಸಮಿತಿಗಳನ್ನು ರಚಿಸಿ ಜವಾಬ್ದಾರಿ ಕೊಡಲಾಗಿದೆ. ಡಿ.10ರಂದು ವಿಧಾನಪರಿಷತ್ ಚುನಾವಣೆ ನಡೆಯಲಿದೆ. ಮತ ಎಣಿಕೆ ಡಿ.14ರಂದು ನಡೆಯಲಿದೆ. ಈ ನಡುವೆ, ಡಿ.13ರಿಂದ ಅಧಿವೇಶನ ಆರಂಭಗೊಳ್ಳಲಿದೆ. ಹೀಗಾಗಿ, ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಪ್ರತ್ಯೇಕ ತಂಡಗಳನ್ನಾಗಿ ನಿಯೋಜಿಸಲಾಗುತ್ತಿದೆ’ ಎಂದರು.

‘ವಿಧಾನಪರಿಷತ್ ಚುನಾವಣೆ ಮತ ಎಣಿಕೆಯನ್ನು ಚಿಕ್ಕೋಡಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಅಲ್ಲಿ ಅಗತ್ಯವಾದ ಮೂಲಸೌಲಭ್ಯಗಳು ಲಭ್ಯ ಇರುವುದರಿಂದ ಚುನಾವಣಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆ ದೊರೆತರೆ ಅದರಂತೆ ಅಲ್ಲಿ ನಡೆಸಲು ಕ್ರಮ ವಹಿಸಲಾಗುವುದು’ಎಂದು ಸ್ಪಷ್ಟಪಡಿಸಿದರು.

‘ಜಿಲ್ಲೆಯಲ್ಲಿ ಒಟ್ಟು 48 ವಿಡಿಯೊ ಸರ್ವೆಲೆನ್ಸ್ ಹಾಗೂ 50 ಫ್ಲೈಯಿಂಗ್‌ ಸ್ಕ್ವಾಡ್‌ಗಳ ತಂಡ ರಚಿಸಲಾಗಿದೆ’ ಎಂದು ತಿಳಿಸಿದರು.

ಮತದಾರರ ವಿವರ
ತಾಲ್ಲೂಕು; ಪುರುಷರು; ಮಹಿಳೆಯರು; ಒಟ್ಟು

ಅಥಣಿ; 375; 422; 797
ಕಾಗವಾಡ; 94; 108; 202
ಬೈಲಹೊಂಗಲ; 271; 302; 573
ಕಿತ್ತೂರು; 112; 121; 233
ಬೆಳಗಾವಿ; 527; 570; 1097
ಚಿಕ್ಕೋಡಿ; 350; 370; 720
ನಿಪ್ಪಾಣಿ; 258; 277; 535
ಗೋಕಾಕ; 324; 363; 687
ಮೂಡಲಗಿ; 179; 190; 369
ಹುಕ್ಕೇರಿ; 452; 483; 935
ಖಾನಾಪುರ; 296; 347; 643
ರಾಯಬಾಗ; 355; 386; 741
ರಾಮದುರ್ಗ; 276; 314; 590
ಸವದತ್ತಿ; 360; 393; 753
ಒಟ್ಟು; 4,229; 4,646; 8,875

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.