ADVERTISEMENT

ಬೆಳಗಾವಿ | ರಕ್ಷಣಾತ್ಮಕ ಅಣಕು ಪ್ರದರ್ಶನ : 24 ಕಾರ್ಮಿಕರ ರಕ್ಷಣೆ

ಆಪತ್ಕಾಲದಲ್ಲಿ ಹೇಗೆ ನಡೆದುಕೊಳ್ಳಬೇಕು: ಪ್ರಾತ್ಯಕ್ಷಿಕೆ ಮೂಲಕ ತಿಳಿವಳಿಕೆ

​ಪ್ರಜಾವಾಣಿ ವಾರ್ತೆ
Published 16 ಮೇ 2025, 16:23 IST
Last Updated 16 ಮೇ 2025, 16:23 IST
ಬೆಳಗಾವಿಯ ಹಿಂಡಾಲ್ಕೋ ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡದಲ್ಲಿ ಗಾಯಗೊಂಡಿದ್ದ ಕಾರ್ಮಿಕನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸುತ್ತಿರುವುದು   ಪ್ರಜಾವಾಣಿ ಚಿತ್ರ
ಬೆಳಗಾವಿಯ ಹಿಂಡಾಲ್ಕೋ ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡದಲ್ಲಿ ಗಾಯಗೊಂಡಿದ್ದ ಕಾರ್ಮಿಕನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸುತ್ತಿರುವುದು   ಪ್ರಜಾವಾಣಿ ಚಿತ್ರ   

ಬೆಳಗಾವಿ: ದೇಶದಲ್ಲಿ ಯುದ್ಧ, ಬಾಂಬ್ ಸ್ಫೋಟದಂಥ ಘಟನೆ ಸಂಭವಿಸಿದರೆ ತುರ್ತು ಪರಿಸ್ಥಿತಿ ನಿರ್ವಹಿಸಲು ಮತ್ತು ಭಯಮುಕ್ತ ವಾತಾವರಣ ನಿರ್ಮಿಸಲು ಅನುಕೂಲವಾಗಲೆಂದು ಇಲ್ಲಿನ ಹಿಂಡಾಲ್ಕೋ ಕಾರ್ಖಾನೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಶುಕ್ರವಾರ ರಕ್ಷಣಾತ್ಮಕ ಅಣಕು ಪ್ರದರ್ಶನ ನಡೆಸಲಾಯಿತು.

ಕಾರ್ಖಾನೆಯಲ್ಲಿ ‘ಬಯೋ ಮಾಸ್‌ ಬಾಯ್ಲರ್‌’ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದರೆ, ಪರಿಸ್ಥಿತಿ ಹೇಗೆ ನಿಯಂತ್ರಣಕ್ಕೆ ತರಬೇಕು, ಕಾರ್ಮಿಕರು ಆಪತ್ಕಾಲದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಯಿತು.

‘ಅಣಕು ಪ್ರದರ್ಶನದಲ್ಲಿ ನಡೆದ ಅವಘಡದಲ್ಲಿ ಒಬ್ಬ ಕಾರ್ಮಿಕ ಮೃತಪಟ್ಟರೆ, ಗಾಯಗೊಂಡ 24 ಕಾರ್ಮಿಕರನ್ನು ಆಂಬುಲೆನ್ಸ್‌ ಮೂಲಕ ಮೆಡಿಕಲ್‌ ಪೋಸ್ಟ್‌ಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಗಂಭೀರವಾಗಿ ಗಾಯಗೊಂಡ 10 ಜನರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಬಿಮ್ಸ್‌ನ ಜಿಲ್ಲಾ ಶಸ್ತ್ರಚಿಕಿತ್ಸಕ ವಿಠ್ಠಲ ಶಿಂಧೆ ತಿಳಿಸಿದರು.

ADVERTISEMENT

‘ಕೆಂಪು, ಹಳದಿ, ಹಸಿರು ಮತ್ತು ಕಪ್ಪು ವಲಯ ಗುರುತಿಸಲಾಗಿತ್ತು. ಕಾರ್ಮಿಕರು ಗಾಯಗೊಂಡ ಪ್ರಮಾಣ ಆಧರಿಸಿ, ಆಯಾ ವಲಯಗಳಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು. ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂದು ಸಿಬ್ಬಂದಿಗೆ ಮನದಟ್ಟು ಮಾಡಲಾಯಿತು’ ಎಂದು ಹೇಳಿದರು.

ತಹಶೀಲ್ದಾರ್‌ ಬಸವರಾಜ ನಾಗರಾಳ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಶಿಧರ ನೀಲಗಾರ ನೇತೃತ್ವದಲ್ಲಿ ಅಣಕು ಪ್ರದರ್ಶನ ನಡೆಯಿತು. 

ಎಸ್‌ಡಿಆರ್‌ಎಫ್‌ನ ಉಪ ಸಮಾಧೇಷ್ಟ ಶರಣಬಸವ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಶ್ವನಾಥ ಭೋವಿ, ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ನಿಂಗನಗೌಡ ಚನಬಸನಗೌಡರ, ಹಿಂಡಾಲ್ಕೋ ಕಾರ್ಖಾನೆಯ 8, ಅಗ್ನಿಶಾಮಕ ದಳದ 11, ಗೃಹ ರಕ್ಷಕ ದಳದ 16 ಮತ್ತು 20 ವೈದ್ಯಕೀಯ ಸಿಬ್ಬಂದಿ ಪ್ರದರ್ಶನದಲ್ಲಿ  ಪಾಲ್ಗೊಂಡಿದ್ದರು.

ಬೆಳಗಾವಿಯ ಹಿಂಡಾಲ್ಕೋ ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡದಲ್ಲಿ ಗಾಯಗೊಂಡ ಕಾರ್ಮಿಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವುದು   ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.