ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಗ್ರಾಮಾಂತರ ಪ್ರದೇಶದಲ್ಲಿ ಪ್ರಚಲಿತವಿದ್ದ ಕೆಲವು ಹಳ್ಳಿ ಹೈದರ ಮೆಚ್ಚಿನ ಆಟಗಳು ಆಧುನೀಕರಣ ಮತ್ತು ಜಾಗತೀಕರಣದ ಪ್ರಹಾರಕ್ಕೆ ಸಿಕ್ಕು ಕ್ರಮೇಣ ನೇಪಥ್ಯಕ್ಕೆ ಸರಿದಿವೆ. ಅಂತಹ ಆಟಗಳಲ್ಲಿ ‘ಮೊಣಕಾಲ ಮುರಿ’ ಅಥವಾ ‘ಏಣಿ ಕಟ್ಟು’ ಆಟವೂ ಒಂದಾಗಿದೆ.
ಹಬ್ಬಗಳು ಬಂದರೆ ಸಿಹಿ ತಿನಿಸುಗಳ ಉಡುಗೊರೆ ಜೊತೆಗೆ ಈ ಮೊಣಕಾಲ ಮುರಿ ಆಟವೂ ಪ್ರಸಿದ್ಧಿ ಪಡೆದಿತ್ತು. ಹೊಸದಾಗಿ ಮದುವೆ ಆದಾಗ ಪತ್ನಿಯ ಮನೆಗೆ ಬಂದು ಈ ಆಟವಾಡಿ ತನ್ನ ಪೌರುಷವನ್ನು ಬೀಗರ ಮುಂದೆ ತೋರ್ಪಡಿಸಬೇಕಿತ್ತು. ಆಟದ ಗಮ್ಮತ್ತೇ ಹಾಗಿದೆ. ಆಯ ತಪ್ಪಿದರೆ ಮೊಣಕಾಲು ಮತ್ತು ಮೊಣಕೈ ಮುರಿದು ಕೊಳ್ಳುವುದು ಖಚಿತ ಎನ್ನುವಂತಿರುತ್ತದೆ. ಇಂತಹ ಆಟದಲ್ಲಿ ಜಯಿಸಿದ ಅಳಿಯ ಹಿರಿಯರಿಂದ ಸೈ ಎನ್ನಿಸಿಕೊಳ್ಳುತ್ತಿದ್ದ. ಉಡುಗೊರೆ ಪಡೆದು ಬೀಗರ ಎದುರು ಮೀಸೆ ತಿರುವುತ್ತಿದ್ದ. ಬಿದ್ದರೆ ಮೊಣಕಾಲ ಕೆತ್ತಿಸಿಕೊಂಡು ಮನೆಗೆ ಸೇರುತ್ತಿದ್ದ!
ಗ್ರಾಮೀಣ ಭಾಗದಲ್ಲಿ ಈ ಮೊಣಕಾಲ ಮುರಿ ಆಟಕ್ಕೆ ‘ಮಿಂಡರ ಗಣಿ’ ಎಂಬ ವಿಚಿತ್ರ ಹೆಸರಿನಿಂದಲೂ ಕರೆಯುತ್ತಾರೆ. ಬೆಳವಲು ನಾಡಿನಲ್ಲಿ ಮೊದಲು ಈ ಆಟದ ನೋಟ ಹೆಚ್ಚಾಗಿತ್ತು. ತುರಕರ ಶೀಗಿಹಳ್ಳಿ, ಬುಡರಕಟ್ಟಿ, ಕಡಸಗಟ್ಟಿಯಲ್ಲಿ ಪಂಚಮಿ ಸಂದರ್ಭದಲ್ಲಿ ಊರ ಅಗಸಿಗಳಲ್ಲಿ ಹೆಚ್ಚಾಗಿ ಇದು ಕಂಡು ಬರುತ್ತಿತ್ತು. ಈಗಂತೂ ಕಾಣಸಿಗುವುದೇ ಅಪರೂಪವಾಗಿದೆ.
ಆಟ ಹೇಗೆ?:ಎರಡು ಬದಿಗೆ ಮೇಟಿ ಕಂಬಗಳನ್ನು ನೆಲದೊಳಗೆ ನಿಲ್ಲಿಸುತ್ತಾರೆ. ಸುಮಾರು 10 ಅಡಿ ಉದ್ದದ ಹಗ್ಗ ಕಟ್ಟಿ ಮಧ್ಯೆ ಒಂದೂವರೆ ಎರಡು ಅಡಿಗೆ ಒಂದರಂತೆ ಬಿದಿರಿನ ಗಳ ಏಣಿಯ ಮಾದರಿಯಲ್ಲಿ ಕಟ್ಟಿರುತ್ತಾರೆ. ಒಂದು ಮೇಟಿ ಕಂಬದಿಂದ ಮತ್ತೊಂದು ಕಂಬಕ್ಕೆ ಮಧ್ಯೆ ಬಿದಿರಿನ ಗಳಗಳಿರುವ ಈ ಏಣಿ ಮಾಡಿದ ಹಗ್ಗವನ್ನು ಏರಿಕೆ ಕ್ರಮಾಂಕದಲ್ಲಿ ಕಟ್ಟುತ್ತಾರೆ. ಇದೇ ‘ಮೊಣಕಾಲ ಮುರಿ’ ಆಟದ ಅಂಕಣ.
ಈ ಆಟಕ್ಕೆ ತುಂಬಾ ಸಮತೋಲನ ಬೇಕು. ಒಂದು ಬದಿಯಿಂದ ಈ ಏಣಿಯ ಮೇಲೆ ಕಾಲು ಮತ್ತು ಕೈಗಳನ್ನು ಊರಿ ಕಪ್ಪೆ ಆಕಾರದಲ್ಲಿ ಸಾಗಬೇಕು. ಹೆಚ್ಚೆಂದರೆ ನಾಲ್ಕು ಏಣಿಗೆ ತಲುಪಬಹುದು. ಸಮತೋಲನ ತಪ್ಪಿ ಕೆಳಗೆ ತಿರುವಿ ಒಗೆಯುತ್ತದೆ. ಬಿದ್ದರೆ ಸವಾಲಿನಲ್ಲಿ ಸೋತ ಹಾಗೆ. ಒಂದು ಬದಿಯ ಅಂಚಿನಿಂದ ಮತ್ತೊಂದು ಅಂಚು ತಲುಪಿದರೆ ಅವರೇ ವಿಜೇತ. ಗೆದ್ದವರಿಗೆ ಜೈಕಾರ ಹಾಕಿ ಉಡುಗೊರೆಗಳನ್ನು ನೀಡಿ ಗೌರವಿಸುವ ಸಂಪ್ರದಾಯವೂ ಇತ್ತು.
‘ಇಂತಹ ಆಸಕ್ತಿಕರ ಆಟ ಬಹುತೇಕ ಮರೆಯಾಗಿ ಹೋಗಿದೆ. ಮಣ್ಣು, ರಾಡಿಯಲ್ಲಿ ಬೆರೆತು ಯುವಕರು ಆಡುವ ಆಟಗಳು ಇಂದು ಇಲ್ಲವಾಗಿವೆ. ಈಗೇನಿದ್ದರೂ ‘ಮೊಬೈಲ್ ಫೋನ್ ಗೇಮ್’ಗಳು ಹಳ್ಳಿ ಹುಡುಗರ ಅಂಗೈ ಆಕ್ರಮಿಸಿಕೊಂಡಿವೆ’ ಎನ್ನುವ ಮೂಲಕ ತುರಕರಶೀಗಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಶೇಖರ ಕಡೇಮನಿ ಅವರು ಹಳ್ಳಿಗಳಲ್ಲಿ ಆಗಿರುವ ಬದಲಾವಣೆಯನ್ನು ಕಟ್ಟಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.