ADVERTISEMENT

‘ಪಾಕಿಸ್ತಾನಕ್ಕೆ ಜೈ ಎನ್ನುವವರಿಗೆ ಗುಂಡಿಕ್ಕಿ’

ಪೊಲೀಸರಿಗೆ ಸಂಸದ ಸುರೇಶ ಅಂಗಡಿ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2019, 19:40 IST
Last Updated 3 ಮಾರ್ಚ್ 2019, 19:40 IST
ಬೆಳಗಾವಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಧರಣಿ ನಡೆಸಿದ ಸಂಸದ ಸುರೇಶ ಅಂಗಡಿ ಅವರಿಗೆ ಎಸ್ಪಿ ಸುಧೀರ್‌ಕುಮಾರ್‌ ರೆಡ್ಡಿ ಪ್ರಕರಣದ ತನಿಖೆಯ ಮಾಹಿತಿ ನೀಡಿದರು
ಬೆಳಗಾವಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಧರಣಿ ನಡೆಸಿದ ಸಂಸದ ಸುರೇಶ ಅಂಗಡಿ ಅವರಿಗೆ ಎಸ್ಪಿ ಸುಧೀರ್‌ಕುಮಾರ್‌ ರೆಡ್ಡಿ ಪ್ರಕರಣದ ತನಿಖೆಯ ಮಾಹಿತಿ ನೀಡಿದರು   

ಬೆಳಗಾವಿ: ‘ಭಾರತದಲ್ಲಿ ಇದ್ದುಕೊಂಡು ಪಾಕಿಸ್ತಾನಕ್ಕೆ ಜೈ ಎನ್ನುವವರನ್ನು ಗುಂಡಿಕ್ಕಿ ಕೊಲ್ಲಬೇಕು’ ಎಂದು ಸಂಸದ ಸುರೇಶ ಅಂಗಡಿ ಪೊಲೀಸರಿಗೆ ಸೂಚಿಸಿದರು.

ಪಾಕಿಸ್ತಾನ ಪರ ಘೋಷಣೆಯುಳ್ಳ ಪೋಸ್ಟನ್ನು ಫೇಸ್‌ಬುಕ್‌ ಖಾತೆಯಲ್ಲಿ ಹಾಕಿರುವ ರಾಮದುರ್ದದ ಕಾಂಗ್ರೆಸ್ ಕಾರ್ಯಕರ್ತನನ್ನು ಬಂಧಿಸುವಂತೆ ಆಗ್ರಹಿಸಿ ಎಸ್ಪಿ ಕಚೇರಿ ಪ್ರವೇಶ ದ್ವಾರದಲ್ಲಿ ಭಾನುವಾರ ಧರಣಿ ನಡೆಸಿದ ಅವರು, ‘ದೇಶದ್ರೋಹಿಗಳನ್ನು ರಕ್ಷಿಸುವುದು ಸರಿಯಲ್ಲ. ಅಂಥವರಿಗೆ ಗುಂಡಿಕ್ಕಿ ಬನ್ನಿ, ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ’ ಎಂದು ತಿಳಿಸಿದರು.

‘ಪೋಸ್ಟ್‌ ಮಾಡಿದವರ ಬಗ್ಗೆ ಸಾಕ್ಷ್ಯ ಕಲೆ ಹಾಕಲಾಗುತ್ತಿದೆ’ ಎಂದ ಎಸ್ಪಿ ಸುಧೀರ್‌ಕುಮಾರ್‌ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು. ‘ನೀವು ರಾಹುಲ್ ಗಾಂಧಿ ರೀತಿ ಮಾತನಾಡಬೇಡಿ. ಆರೋಪಿ ಬಂಧಿಸಲು ಆಗುವುದಿಲ್ಲ ಎಂದು ಬರೆದುಕೊಡಿ; ನಾನು ಕೇಂದ್ರ ಸರ್ಕಾರದಿಂದ ತನಿಖೆ ಮಾಡಿಸುತ್ತೇನೆ. ಕಾಂಗ್ರೆಸ್‌ ಒತ್ತಡಕ್ಕೆ ಒಳಗಾಗಿದ್ದೀರಾ? ನಿಮ್ಮಂತಹ ಅಧಿಕಾರಿಗಳು ಇಲ್ಲಿಗೆ ಬೇಡ. ವರ್ಗಾವಣೆ ಮಾಡಿಸಿಕೊಂಡು ಹೋಗಿ’ ಎಂದರು.

ADVERTISEMENT

‘ನಮ್ಮ ಯೋಧರು ಹಗಲಿರುಳು ದೇಶ ಕಾಯುತ್ತಿದ್ದಾರೆ. ಅವರನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಹೀಗಿರುವಾಗ ಭಾರತದ ಅನ್ನ, ನೀರು ಸೇವಿಸಿ ಪಾಕಿಸ್ತಾನಕ್ಕೆ ಜೈ ಎನ್ನುವವರನ್ನು ಪೊಲೀಸರು ರಕ್ಷಿಸುವುದು ಸರಿಯಲ್ಲ. 2 ಗಂಟೆಗಳಲ್ಲಿ ಆರೋಪಿ ಬಂಧಿಸಬೇಕು’ ಎಂದು ಗಡುವು ನೀಡಿದರು.

ಪ್ರತಿಕ್ರಿಯಿಸಿದ ಎಸ್ಪಿ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದೇವೆ. ಫೇಸ್‌ಬುಕ್ ಅಕೌಂಟ್ ಅನ್ನು ಬೇರೆ ಸಾಧನ (ಡಿವೈಸ್) ಬಳಸಿ ಅಪ್‌ಲೋಡ್ ಮಾಡಿರುವುದು ತಿಳಿದುಬಂದಿದೆ. ತನಿಖೆಗೆ ಸೈಬರ್‌ ಕ್ರೈಂ ಪೊಲೀಸರ ಸಹಾಯ ಪಡೆಯಲಾಗಿದೆ. ಇನ್ನೆರಡು ದಿನಗಳಲ್ಲಿ ಆರೋಪಿ ಬಂಧಿಸಲಾಗುವುದು. ಸಾಕ್ಷಿ–ಆಧಾರ ಇಲ್ಲದೇ, ಯಾರನ್ನೂ ಬಂಧಿಸಲಾಗದು. ವಿಚಾರಣೆ ಪ್ರಗತಿಯಲ್ಲಿದ್ದು, 2 ದಿನ ಸಮಯ ಕೊಡಿ’ ಎಂದು ಕೋರಿದರು.

‘ನನಗೆ ಯಾರ ಒತ್ತಡವೂ ಇಲ್ಲ. ನೀವು ವರ್ಗಾವಣೆ ಮಾಡಿಸಿದರೆ ಈಗಲೇ ಹೋಗಲು ಸಿದ್ಧವಿದ್ದೇನೆ. ಆರೋಪಿ ತನಿಖೆಗೆ ಸಹಕರಿಸುತ್ತಿದ್ದಾರೆ; ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಪೋಸ್ಟ್‌ ಮಾಡಿದವರು ಯಾರು ಎಂದು ತಿಳಿದ ಕೂಡಲೇ ಬಂಧಿಸಲಾಗುವುದು’ ಎಂದು ತಿಳಿಸಿದರು.

‘ಬಿಜೆಪಿ ಕಾರ್ಯಕರ್ತ ತಲ್ವಾರ್‌ನಿಂದ ಕೇಕ್‌ ಕತ್ತರಿಸಿದನೆಂದು ಕೂಡಲೇ ಬಂಧಿಸಿದಿರಿ. ಆದರೆ, ಪಾಕಿಸ್ತಾನಕ್ಕೆ ಜೈ ಎಂದವರನ್ನು ಬಿಟ್ಟಿದ್ದೀರೇಕೆ? ಆರೋಪಿ ಮಹಮ್ಮದ್ ಶಫಿ ಬೆಣ್ಣಿಯನ್ನು ಬಂಧಿಸಬೇಕು. ಇಲ್ಲವಾದಲ್ಲಿ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಆಗಬೇಕಾಗುತ್ತದೆ. ಇದು ರಾಷ್ಟ್ರಮಟ್ಟದ ವಿಷಯವಾಗಲು ಅವಕಾಶ ಕೊಡಬೇಡಿ. ನಿಮಗೆ ರಾಜ್ಯ ಸರ್ಕಾರದ ಭಯವಿದ್ದರೆ ಹೇಳಿ, ಪ್ರಧಾನಿಗೆ ತಿಳಿಸುತ್ತೇನೆ’ ಎಂದು ಸಂಸದರು ಹೇಳಿದರು.

ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸಬೇಕು ಎಂದು ಗಡುವು ನೀಡಿ ಧರಣಿ ಅಂತ್ಯಗೊಳಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ದೇಶಪಾಂಡೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ನಿಖಿಲ್ ರವಿ ಮುರಕುಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.