ಬೆಳಗಾವಿ: ತಾಲ್ಲೂಕಿನ ಕರ್ಲೆ ಬಳಿ ವ್ಯಕ್ತಿಯೊಬ್ಬರ ಕೊಲೆ ಮಾಡಿದ ಪ್ರಕರಣದ ತನಿಖೆಗಾಗಿ ಎರಡು ವಿಶೇಷ ತಂಡ ರಚಿಸಲಾಗಿದೆ.
ಕರ್ಲೆ–ಬಾದರವಾಡಿ ರಸ್ತೆಯಲ್ಲಿ ಸೋಮವಾರ ಹೊರಟಿದ್ದ ಮೋಹನ ತಳವಾರ(55) ಅವರನ್ನು ದುಷ್ಕರ್ಮಿಗಳು ತಡೆದು, ಮಾರಕಾಸ್ತ್ರಗಳಿಂದ ಹೊಡೆದು ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
‘ಮೋಹನ ಕೊಲೆ ಯಾವ ಕಾರಣಕ್ಕೆ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಎರಡು ವಿಶೇಷ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಸುದ್ದಿಗಾರರಿಗೆ ತಿಳಿಸಿದರು.
‘ನಗರದಲ್ಲಿ ನಡೆಯುತ್ತಿರುವ ಸರಗಳ್ಳತನ, ಮನೆ ಹಾಗೂ ಅಂಗಡಿಗಳ ಕಳ್ಳತನ ಪ್ರಕರಣಗಳಿಗೂ ಕಡಿವಾಣ ಹಾಕಲಾಗುವುದು’ ಎಂದರು.
ಎರಡು ಅಂಗಡಿಗಳಲ್ಲಿ ಕಳವು
ಬೆಳಗಾವಿ: ಇಲ್ಲಿನ ಎಪಿಎಂಸಿ ಮಾರುಕಟ್ಟೆಯ ಎರಡು ಮಳಿಗೆಗಳಲ್ಲಿ ಬುಧವಾರ ಕಳ್ಳತನ ನಡೆದಿದೆ.
‘ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ, ಆಲೂಗಡ್ಡೆ ವ್ಯಾಪಾರಸ್ಥರು ತಮ್ಮ ಕೆಲಸದಲ್ಲಿ ನಿರತವಾಗಿದ್ದರು. ಆಗ ಕಳ್ಳರು ಎರಡು ಮಳಿಗೆಗಳ ಹಣದ ಪೆಟ್ಟಿಗೆಯಲ್ಲಿ ಇರಿಸಿದ್ದ ಸುಮಾರು ₹20 ಸಾವಿರ ಕದ್ದು ಪರಾರಿಯಾಗಿದ್ದಾರೆ’ ಎಂದು ಎಪಿಎಂಸಿ ಠಾಣೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.