ಮುರಗುಂಡಿ: ಗ್ರಾಮದ ವಿದ್ಯಾರ್ಥಿಗಳು, ವ್ಯಾಪಾರಿಗಳು ಹಾಗೂ ಪ್ರಯಾಣಿಕರು ಸಂಚರಿಸಲು ಸೂಕ್ತ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ, ಗ್ರಾಮದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಬುಧವಾರ ಗ್ರಾಮಸ್ಥರು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಮುರಗುಂಡಿ ಗ್ರಾಮವು ಸುತ್ತಲಿನ ಏಳು ಗ್ರಾಮಗಳ ಕೇಂದ್ರವಾಗಿದೆ. ಇಲ್ಲಿಂದ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಪ್ರವಾಸಿಗರು ಜಿಲ್ಲಾ ಕೇಂದ್ರವಾದ ಬೆಳಗಾವಿ, ಕೊಲ್ಹಾಪುರ, ಮೀರಜ್ ಮುಂತಾದ ಕಡೆಗೆ ಪ್ರತಿ ದಿನವೂ ಹೋಗುತ್ತಾರೆ. ಆದರೆ, ಗ್ರಾಮದಲ್ಲಿ ಬಸ್ ನಿಲ್ಲದ ಕಾರಣ ಪ್ರತಿ ದಿನ ಅಥಣಿಗೆ ಹೋಗಿ ಬಸ್ ಹಿಡಿಯಬೇಕಾದ ಪರಿಸ್ಥಿತಿ ಇದೆ.
ಈ ಸಂಬಂಧ ಹಲವಾರು ಬಾರಿ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕರಿಗೆ ವಿನಂತಿಸಿದರೂ ಪ್ರಯೋಜನೆ ಆಗಿಲ್ಲ. ಆದ್ದರಿಂದ ಗ್ರಾಮದಲ್ಲಿ ಡಿವಿಪಿ ಜಿಲ್ಲಾ ಘಟಕದ ಅಧ್ಯಕ್ಷ ಆದರ್ಶ ಗಸ್ತಿ, ಮುಖಂಡರಾದ ಕುಮಾರ ಗಸ್ತಿ, ಆನಂದ ಸನದಿ, ರೋಹಿತ್ ಗಸ್ತಿ, ಅರುಣ್ ಹಾವರದ್ಧಿ, ಆಕಾಶ ಕುಂಭಾರಗುತ್ತಿ, ರೋಹಿತ ಕುಶನಾಳೆ, ಮಾರುತಿ ಸಿಂಗಣವರ ಮುಂತಾದವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೆ.ಎಸ್.ಆರ್.ಟಿ.ಸಿ ಅಥಣಿ ವಿಭಾಗದ ವ್ಯವಸ್ಥಾಪಕರಿಗೆ ಮನವಿ ಕೂಡ ನೀಡಲಾಯಿತು. ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.