ADVERTISEMENT

ಮುಸಗುಪ್ಪಿ ಸರ್ಕಾರಿ ಶಾಲೆಗೆ ಶತಮಾನ ಸಂಭ್ರಮ

ಸ್ವಾತಂತ್ರ್ಯ ಯೋಧರ ಕನಸು ನನಸು ಮಾಡಿದ ಗ್ರಾಮಸ್ಥರು, ದಾನಿಗಳಿಂದ ಮೇಲೆದ್ದ ಸರ್ಕಾರಿ ಶಾಲೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 2:53 IST
Last Updated 26 ಡಿಸೆಂಬರ್ 2025, 2:53 IST
ನೂರು ವಸಂತ ಪೂರೈಸಿದ ಮೂಡಲಗಿ ತಾಲ್ಲೂಕಿನ ಮುಸಗುಪ್ಪಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ನೂರು ವಸಂತ ಪೂರೈಸಿದ ಮೂಡಲಗಿ ತಾಲ್ಲೂಕಿನ ಮುಸಗುಪ್ಪಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ   

ಮೂಡಲಗಿ: ತಾಲ್ಲೂಕಿನ ಮುಸಗುಪ್ಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ನೂರು ವಸಂತಗಳನ್ನು ಪೂರೈಸಿದ್ದು, ಡಿ.26 ಮತ್ತು 27ರಂದು ವಿಜೃಂಭಣೆಯಿಂದ ಶತಮಾನೋತ್ಸವ ಆಚರಿಸಲಾಗುತ್ತಿದೆ. ಶಾಲೆಯ ಹಳೆಯ ವಿದ್ಯಾರ್ಥಿಗಳೆಲ್ಲ ಗ್ರಾಮದ ‘ಜ್ಞಾನ ದೇಗುಲ’ದ ತೇರು ಎಳೆಯಲು ಸಮಾವೇಶಗೊಂಡಿದ್ದಾರೆ.

1925ರಲ್ಲಿ ಗ್ರಾಮದ ಹನುಮಂತ ದೇವರ ದೇವಸ್ಥಾನ ಪೌಳಿಯಲ್ಲಿ ಸಣ್ಣ ಬಿನ್ನೆತ್ತೆ ಮೂಲಕ ಶಾಲೆ ಪ್ರಾರಂಭಗೊಂಡಿತು. ಮೂರು ದಶಕಗಳಲ್ಲಿ ಹನುಮಂತ ದೇವರ ದೇವಸ್ಥಾನ, ಹಂಪಯ್ಯಸ್ವಾಮಿ ಮಠ, ಬಾರಕೇರ ಅವರ ಮನೆ ಹೀಗೆ ಗ್ರಾಮದ ವಿವಿದೆಡೆ ಶಾಲೆ ನಡೆಯಿತು.

ಭೂದಾನ: ಗ್ರಾಮದ ಮುತ್ಸದ್ದಿ ದಿ. ಸಿದ್ದನಗೌಡ ಎಸ್.ಪಾಟೀಲ 20 ಗುಂಟೆ ಜಮೀನು ದಾನ ಮಾಡಿದರು. ಫಲವಾಗಿ 1956ರಲ್ಲಿ ಸರ್ಕಾರ 3 ಕೊಠಡಿಗಳನ್ನು ನಿರ್ಮಿಸಲಾಯಿತು. ಆಗಿನ ಮುಸಗುಪ್ಪಿ ಸರ್ಕಾರಿ ಶಾಲೆ ‘ವಿದ್ಯಾಕಾಶಿ’ ಆಗಿತ್ತು ಎಂದು 70 ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ಕಲಿತ ಕಲ್ಲಪ್ಪ ಮಳಲಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ಸಿ.ಬಿ. ಅಂಗಡಿ, ಬಾಗಲೆ, ಎಸ್.ವಿ.ಮಿರ್ಜಿ, ಬಾರಕೆ, ಬಿ.ಪಿ.ಗಾಡವಿ, ವಾಲಿ, ಗುರುಪಾದಪ್ಪ ಗೋಟಡಕಿ, ದುಂಡಪ್ಪ ದಡ್ಡಿ ಅನೇಕ ಶಿಕ್ಷಕರು ಫಲಾಪೇಕ್ಷೆ ಇಲ್ಲದೆ ಮಕ್ಕಳಲ್ಲಿ ಅಕ್ಷರ ಬಿತ್ತಿದ್ದರು.

‘ಇದೇ ಶಾಲೆಯಲ್ಲಿ ನಾನು 1956ರಲ್ಲಿ 7ನೇ ಇಯತ್ತೆ ಮುಗಿಸಿದ್ದೆ. ನಮ್ಮದೇ ಮೊದಲನೇ ಬ್ಯಾಚ್‌’ ಎಂದು ನಿವೃತ್ತ ಶಿಕ್ಷಕ ಮೂಡಲಗಿಯ ಡಿ.ಎಂ. ಗಾಡವಿ ಅವರು ಹೆಮ್ಮೆ‍‍ಪಟ್ಟರು.

ಗ್ರಾಮ ಪಂಚಾಯಿತಿಯಿಂದ ಆವರಣ ಗೋಡೆ, ಪೇವರ್ಸ್, ನೀರಿನ ವ್ಯವಸ್ಥೆ, ಸ್ಟೀಲ್‌ ಗೇಟ್‌ ಸೇರಿ ಒಟ್ಟು ₹30 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿದ್ದಾರೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ರಂಗಮಂಟಪಕ್ಕೆ ₹2.50 ಲಕ್ಷ ಅನುದಾನ ಕೊಟ್ಟಿದ್ದಾರೆ. ಮುಖ್ಯ ಶಿಕ್ಷಕ ಶಂಕರ ಗಾಡವಿ ತಮ್ಮ ತಾಯಿ ಬಸವ್ವ ನೆನಪಿನಲ್ಲಿ ₹2.50 ಲಕ್ಷ ವೆಚ್ಚದ ವಿಜ್ಞಾನ, ಗಣಿತ ಪ್ರಯೋಗಾಲಯ ನಿರ್ಮಿಸಿದ್ದಾರೆ. ಹಳೆಯ ವಿದ್ಯಾರ್ಥಿಗಳು ₹16 ಲಕ್ಷ ಹಣ ಕೂಡಿಸಿದ್ದು ರಂಗಮಂದಿರ, ಸರಸ್ವತಿ ಮಂದಿರ, ಕ್ರೀಡಾ ಕೊಠಡಿ ನಿರ್ಮಿಸಲಾಗಿದೆ.

ಸದ್ಯ ಎಲ್‌ಕೆಜಿ ಸೇರಿದಂತೆ 1ರಿಂದ 7ನೇ ತರಗತಿವರೆಗೆ ಒಟ್ಟು 295 ಮಕ್ಕಳ ದಾಖಲಾತಿ ಇದೆ. 4 ಸ್ಮಾರ್ಟ್ ಕ್ಲಾಸ್‌, ಗ್ರಂಥಾಲಯ, ಹೈಟೆಕ್‌ ಶೌಚಾಲಯವಿದೆ’ ಎಂದು ಬಿಇಒ ಪಿ.ಬಿ. ಹಿರೇಮಠ ಹೇಳುತ್ತಾರೆ.

ಪ್ರವಾಹದಲ್ಲಿ ಮುಳು ‘ಗೆದ್ದ’ ಶಾಲೆ

2019ರಲ್ಲಿ ಘಟಪ್ರಭಾ ನದಿಗೆ ಬಂದ ಪ್ರವಾಹದಿಂದ ಇಡೀ ಗ್ರಾಮದೊಂದಿಗೆ ಶಾಲೆಯೂ ಮುಳಗಿತ್ತು. ಆಗಿನ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮತ್ತು ಆಗಿನ ಮುಖ್ಯ ಶಿಕ್ಷಕ ದಿ.ಕೆ.ಆರ್. ಡೊಳ್ಳಿ ಅವರ ಪ್ರಯತ್ನದಿಂದಾಗಿ ಬೆಂಗಳೂರಿನ ದಾನಿ ಎಂ.ಕೆ. ಸತ್ಯಪ್ರಸಾದ ಓಸಾಟ್‌ ಶೈಕ್ಷಣಿಕ ಧರ್ಮದತ್ತಿ ಸಂಸ್ಥೆಯ ಮೂಲಕ ₹50 ಲಕ್ಷ ವೆಚ್ಚದಲ್ಲಿ ಶಾಲೆಗೆ ಹೊಸ ಕಟ್ಟಡ ನಿರ್ಮಿಸಿಕೊಟ್ಟರು. ಶಾಸಕ ಬಾಲಚಂದ್ರ ಜಾರಕಿಹೊಳಿ ಕಾಳಜಿಯಿಂದ ಆರ್‌ಐಡಿಎಫ್‌ ಅಡಿಯಲ್ಲಿ ₹48 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಕೊಠಡಿಗಳು ನಿರ್ಮಾಣಗೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.