ADVERTISEMENT

ದುರ್ಗಾಮಾತಾ ದೌಡ್ ಸ್ವಾಗತಿಸಿ, ಭಾವೈಕ್ಯ ಮೆರೆದ ಮುಸ್ಲಿಮರು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 9:11 IST
Last Updated 3 ಅಕ್ಟೋಬರ್ 2022, 9:11 IST
ದುರ್ಗಾಮಾತಾ ದೌಡ್
ದುರ್ಗಾಮಾತಾ ದೌಡ್   

ಬೆಳಗಾವಿ: ನವರಾತ್ರಿ ಅಂಗವಾಗಿ ಶಿವ ಪ್ರತಿಷ್ಠಾನ ಹಿಂದೂಸ್ಥಾನ ವತಿಯಿಂದ 8ನೇ ದಿನವಾದ ಸೋಮವಾರ ದುರ್ಗಾಮಾತಾ ದೌಡ್‌ ನಡೆಯಿತು. ಇಲ್ಲಿನ ಕ್ಯಾಂಪ್‌ ಪ್ರದೇಶದಲ್ಲಿ ಮುಸ್ಲಿಮರು ಇದಕ್ಕೆ ಸ್ವಾಗತ ಕೋರಿ, ಭಾವೈಕ್ಯ ಸಂದೇಶ ಸಾರಿದರು.

ದುರ್ಗಾಮಾತಾ ದೌಡ್‌ ಅಂಗವಾಗಿ ಕ್ಯಾಂಪ್‍ನ ಮಾರ್ಗಗಳಲ್ಲಿ ರಂಗೋಲಿ ಚಿತ್ತಾರ ಅರಳಿತ್ತು. ಯುವಕ–ಯುವತಿಯರು, ಮಕ್ಕಳು ಸಾಂಪ್ರದಾಯಿಕ ದಿರಿಸಿನಲ್ಲಿ ಗಮನ ಸೆಳೆದರು. ಬಾಲಕಿಯೊಬ್ಬಳು ಜೀಜಾಮಾತಾ ವೇಷ ಧರಿಸಿ, ಶಿವಾಜಿ ಮಹಾರಾಜರನ್ನು ಸ್ತುತಿಸಿದಳು.

ದಂಡು ಮಂಡಳಿ ಮಾಜಿ ಉಪಾಧ್ಯಕ್ಷ ಸಾಜೀದ್ ಶೇಖ್ ದೌಡ್‌ನಲ್ಲಿ ಪಾಲ್ಗೊಂಡವರಿಗೆ ನೀರು, ಹಣ್ಣು–ಹಂಪಲು ವಿತರಿಸಿದರು. ಬಳಿಕ ಮಾತನಾಡಿ, ‘ನಮ್ಮ ಬಡಾವಣೆಯಲ್ಲಿ ಪ್ರತಿವರ್ಷವೂ ಮುಸ್ಲಿಮರೆಲ್ಲ ಸೇರಿಕೊಂಡು ದುರ್ಗಾಮಾತಾ ದೌಡ್‍ ಸ್ವಾಗತಿಸುತ್ತೇವೆ. ಭಾವೈಕ್ಯತೆಯಿಂದ ಇಲ್ಲಿ ಎಲ್ಲರೂ ಬಾಳುತ್ತಿದ್ದೇವೆ’ ಎಂದು ತಿಳಿಸಿದರು.

ADVERTISEMENT

ಬಳಿಕ, ದುರ್ಗಾಮಾತಾ ದೌಡ್ ಕಾಂಗ್ರೆಸ್ ರಸ್ತೆ, ಖಾನಾಪುರ ರಸ್ತೆ, ಧರ್ಮವೀರ ಸಂಭಾಜಿ ಚೌಕ್, ದುರ್ಗಾಮಾತಾ ಮಂದಿರ ಮಾರ್ಗವಾಗಿ ಸಂಚರಿಸಿ ಜತ್ತಿಮಠದ ಬಳಿ ಮುಕ್ತಾಯಗೊಂಡಿತು. ಶಿವ ಪ್ರತಿಷ್ಠಾನ ಹಿಂದೂಸ್ಥಾನ ಅಧ್ಯಕ್ಷ ಕಿರಣ ಗಾವಡೆ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.