ADVERTISEMENT

ಮನೆಗಳಿಗೆ ತೆರಳಿ ಪರೀಕ್ಷೆ ನಡೆಸಿ

ಕೋವಿಡ್ ನಿಯಂತ್ರಣ: ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಮೇ 2021, 13:38 IST
Last Updated 20 ಮೇ 2021, 13:38 IST
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಅವರು ಬೆಳಗಾವಿಯಲ್ಲಿ ಗುರುವಾರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದರು
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಅವರು ಬೆಳಗಾವಿಯಲ್ಲಿ ಗುರುವಾರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದರು   

ಬೆಳಗಾವಿ: ‘ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮನೆ ಮನೆಗೆ ತೆರಳಿ ರ‍್ಯಾಪಿಡ್‌ ಆಂಟಿಜೆನ್ ಟೆಸ್ಟ್‌ (ಆರ್‌ಎಟಿ) ನಡೆಸುವ ಮೂಲಕ ಸೋಂಕಿತರನ್ನು ಕೂಡಲೇ ಪತ್ತೆ ಮಾಡಬೇಕು’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ‌. ರವಿಕುಮಾರ್ ಸೂಚನೆ ನೀಡಿದರು.

ನಗರದ ಪ್ರವಾಸಿಮಂದಿರದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪರೀಕ್ಷಾ ಕಿಟ್ ಈಗ ಸಾಕಷ್ಟು ಲಭ್ಯವಿದ್ದು, ಅವುಗಳನ್ನು ಬಳಸಿಕೊಳ್ಳಬೇಕು. ಶೇ. 30ರಷ್ಟು ಆರ್‌ಎಟಿ ಮಾಡಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದಾಗ್ಯೂ ಬಹುತೇಕ ಜಿಲ್ಲೆಗಳಲ್ಲಿ ಆ ಪ್ರಮಾಣ ‌ಕಡಿಮೆ ಇದೆ. ಈ ವಿಧಾನದ ಮೂಲಕ ತಪಾಸಣೆ ಹೆಚ್ಚಿಸದ ಹೊರತು ಹಳ್ಳಿಗಳಲ್ಲಿ ಸೋಂಕಿತರ ಪತ್ತೆ ತುಂಬಾ ಕಷ್ಟ. ಆ ಪರೀಕ್ಷೆಯಲ್ಲಿ ಸೋಂಕು‌ ದೃಢಪಟ್ಟರೆ ಸಾಕು. ಲಕ್ಷಣಗಳಿದ್ದೂ ನೆಗೆಟಿವ್ ಬಂದರೆ ಮಾತ್ರ ಆರ್.ಟಿ.ಪಿ.ಸಿ.ಆರ್. ಮತ್ತಿತರ ಪರೀಕ್ಷೆ ನಡೆಸಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

ಸರಿಯಾದ ವಿಳಾಸ ಪಡೆಯಿರಿ:

‘ತಪ್ಪು ವಿಳಾಸ ನೀಡುತ್ತಿರುವುದರಿಂದ ಕೋವಿಡ್ ತಪಾಸಣೆ ಉದ್ದೇಶ ಈಡೇರುತ್ತಿಲ್ಲ. ಅದರಿಂದ ಸೋಂಕಿತರ ಚಿಕಿತ್ಸೆ ಹಾಗೂ ಐಸೊಲೇಷನ್‌ ಎರಡೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರಿಯಾದ ವಿಳಾಸದೊಂದಿಗೆ ಪರ್ಯಾಯ ದೂರವಾಣಿ ಸಂಖ್ಯೆಯನ್ನೂ ಪಡೆಯಬೇಕು. ಹೋಂ ಐಸೊಲೇಷನ್‌ನಲ್ಲಿ ಇರುವವರ ಮೇಲೆ ನಿಗಾ ವಹಿಸಬೇಕು. ಸೋಂಕು ದೃಢಪಟ್ಟ ತಕ್ಷಣವೆ ಅಗತ್ಯ ಔಷಧಿ ಕಿಟ್ ನೀಡಬೇಕು’ ಎಂದು ತಾಕೀತು ಮಾಡಿದರು.

‘ಸೋಂಕಿತರಿಗೆ ಹತ್ತು ದಿನಗಳವರೆಗೆ ಆಸ್ಪತ್ರೆಯಲ್ಲಿ ನಿಗದಿತ ಚಿಕಿತ್ಸೆ ನೀಡಿದ ಬಳಿಕ 3 ದಿನಗಳಲ್ಲಿ ಜ್ವರ ಕಂಡುಬರದಿದ್ದರೆ ಬಿಡುಗಡೆ ಮಾಡಬಹುದು. ದೊಡ್ಡ ಜಿಲ್ಲೆ ಇದಾಗಿರುವುದರಿಂದ ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸಬೇಕು’ ಎಂದು ತಿಳಿಸಿದರು.

ಕೇಂದ್ರಗಳಿಗೆ ಸೇರಿಸಿ:

‘ಈಗ ಹೋಂ ಐಸೊಲೇಷನ್‌ಗೆ ಆದ್ಯತೆ ನೀಡದೆ ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ತಾಲ್ಲೂಕು ಕೇಂದ್ರಗಳಲ್ಲಿ ಕಡ್ಡಾಯವಾಗಿ ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಬೇಕು. ‌ಪೊಲೀಸ್ ಸಿಬ್ಬಂದಿಗೆ ಪ್ರತ್ಯೇಕವಾಗಿ ತೆರೆಯಬೇಕು’ ಎಂದು ನಿರ್ದೇಶಿಸಿದರು.

‘ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಅಗತ್ಯವಿದ್ದರೆ ತಕ್ಷಣವೇ ನೇಮಕಾತಿ ನಡೆಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟಾದ ಹಾಸಿಗೆಗಳನ್ನು ಜಿಲ್ಲಾಡಳಿತದಿಂದಲೇ ಹಂಚಿಕೆ ಮಾಡಬೇಕು’ ಎಂದು ಸೂಚಿಸಿದರು.

ಜಿ.ಪಂ. ಸಿಇಒ ಎಚ್‌.ವಿ. ದರ್ಶನ್, ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್, ಉತ್ತರ ವಲಯ‌ ಐಜಿಪಿ ರಾಘವೇಂದ್ರ ಸುಹಾಸ್, ಎಸ್ಪಿ ಲಕ್ಷ್ಮಣ ನಿಂಬರಗಿ, ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ, ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಿ.ಎನ್, ತುಕ್ಕಾರ ಇದ್ದರು.

ಬೇಗ ನೀಡಲು ಕ್ರಮ

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ‘ಕೋವಿಡ್ ಪರೀಕ್ಷೆಯ ವರದಿಯನ್ನು ಆದಷ್ಟು ಬೇಗನೆ ನೀಡಲು ತಾಲ್ಲೂಕುವಾರು ಅಗತ್ಯ ವಾಹನ‌ ಹಾಗೂ ಸಿಬ್ಬಂದಿ ಒದಗಿಸಲಾಗಿದೆ. ಅನುಕೂಲ ಇರುವವರಿಗೆ ಮಾತ್ರ ಹೋಂ ಐಸೊಲೇಷನ್‌ಗೆ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಎಲ್ಲ ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರ ಮತ್ತು ಚಿಕಿತ್ಸೆ ಅಗತ್ಯವಿದ್ದವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಮನೆ ಮನೆಗೆ ತೆರಳಿ ಆರ್‌ಎಟಿ ನಡೆಸಲಾಗುವುದು’ ಎಂದು ತಿಳಿಸಿದರು.

‘ಮಾದರಿ ಸಂಗ್ರಹಿಸಿದ ಬಳಿಕ ವರದಿ ನೀಡಲು 3 ದಿನಗಳಾಗುತ್ತಿದ್ದವು. ತಾಲ್ಲೂಕುವಾರು ಡೇಟಾ ಎಂಟ್ರಿ ಸಿಬ್ಬಂದಿ ಒದಗಿಸಿದ್ದರಿಂದ ಒಂದು ದಿನ ವಿಳಂಬ ತಪ್ಪಿಸಲಾಗಿದೆ’ ಎಂದು ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.