ADVERTISEMENT

ಝೂ ಆಕರ್ಷಣೆಯಾಗಿದ್ದ ‘ನಕುಲ’ ಸಾವು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 12:15 IST
Last Updated 2 ಡಿಸೆಂಬರ್ 2021, 12:15 IST
ಬೆಳಗಾವಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಸಿಂಹ ‘ನಕುಲ’ (ಸಂಗ್ರಹ ಚಿತ್ರ)
ಬೆಳಗಾವಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಸಿಂಹ ‘ನಕುಲ’ (ಸಂಗ್ರಹ ಚಿತ್ರ)   

ಬೆಳಗಾವಿ: ತಾಲ್ಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದ ಆಕರ್ಷಣೆಗಳಲ್ಲೊಂದಾಗಿದ್ದ ಸಿಂಹ ‘ನಕುಲ’ (11) ಅನಾರೋಗ್ಯದಿಂದ ಗುರುವಾರ ಮೃತಪಟ್ಟಿದೆ.

‘ಬನ್ನೇರಘಟ್ಟ ಅಭಯಾರಣ್ಯದಿಂದ ಇದೇ ವರ್ಷ ಫೆಬ್ರುವರಿಯಲ್ಲಿ ಇಲ್ಲಿಗೆ ತರಲಾಗಿತ್ತು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಆ ಸಿಂಹಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ರಾತ್ರಿಯಿಂದ ಆರೋಗ್ಯ ಸಂಪೂರ್ಣ ಕ್ಷೀಣಿಸಿತ್ತು. ನಮ್ಮಲ್ಲಿನ ಪಶುವೈದ್ಯರೆ ಚಿಕಿತ್ಸೆ ಮುಂದುವರಿಸಿದ್ದರು. ಬೆಳಗಾವಿ ಹಾಗೂ ಗದಗದ ಪಶುವೈದ್ಯರು ಗುರುವಾರ ಬಂದು ಚಿಕಿತ್ಸೆ ನೀಡಿದರಾದರೂ ಚೇತರಿಸಿಕೊಳ್ಳಲಿಲ್ಲ’ ಎಂದು ವಲಯ ಅರಣ್ಯ ಅಧಿಕಾರಿ ರಾಕೇಶ ಅರ್ಜುನವಾಡ ‘ಪ್ರಜಾವಾಣಿ’ ತಿಳಿಸಿದರು.

ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮೃಗಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

‘ಸರಿಯಾಗಿ ಊಟದ ವ್ಯವಸ್ಥೆ ಇರಲಿಲ್ಲ. ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಿಂಹ ಮೃತಪಟ್ಟಿದೆ. ಬಂದಾಗಿನಿಂದಲೂ ಅದು ಲವಲವಿಕೆಯಿಂದ ಇರಲೇ ಇಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಸಿಂಹ ಸಾವಿಗೀಡಾಗಿದೆ’ ಎಂದು ಆರೋಪ ಕೇಳಿಬಂದಿದೆ. ಆದರೆ, ಅಧಿಕಾರಿಗಳು ಇದನ್ನು ಅಲ್ಲಗಳೆದಿದ್ದಾರೆ.

‘ಸಿಂಹಗಳ ಜೀವಿತಾವಧಿ ಸರಾಸರಿ 12ರಿಂದ 14 ವರ್ಷಗಳು. ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ‘ನಕುಲ’ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ ಎಂದು ವರದಿಯಾಗಿದೆ. ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ’ ಎಂದು ಡಿಎಫ್‌ಒ ಪಿ.ಜಿ. ಹರ್ಷಭಾನು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.