ಬೆಳಗಾವಿ: ‘11 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಶೂನ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರಿಗೆ ಕಾಮಾಲೆ ರೋಗ ಬಂದಿದೆ. ನಾವು ಮೋದಿ ಅವರ ಸಾಧನೆ ಬಿಚ್ಚಿಡುತ್ತೇವೆ. ಅವರು ಕಣ್ತೆರೆದು ನೋಡಲಿ’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
‘ಭ್ರಷ್ಟಾಚಾರವನ್ನೇ ಸಾಧನೆ ಎಂದು ಹೇಳಿಕೊಂಡು ತಿರುಗುವ ಸಿದ್ದರಾಮಯ್ಯ ಅವರಿಗೆ ಮೋದಿ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಮೋದಿ ಅವರ ಅವಧಿಯಲ್ಲಿ ದೇಶದ ಹೊಸ ಇತಿಹಾಸ ರಚನೆಯಾಗಿದೆ. ಉತ್ತಮ ಆಡಳಿತ, ಬಲಿಷ್ಠ ದೇಶ ನಿರ್ಮಾಣ, ಮೂಲಸೌಲಭ್ಯ, ಆಧುನಿಕ ಭಾರತ ನಿರ್ಮಾಣ ಸೇರಿ ಗಮನಾರ್ಹ ಸುಧಾರಣೆ ಕಂಡಿದೆ’ ಎಂದರು.
‘ಮಹಾದಾಯಿ ಯೋಜನೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದೆ. ಇದಕ್ಕೆ ತಡೆಗೋಡೆ ಕಟ್ಟಿದ್ದು ಕಾಂಗ್ರೆಸ್ ಸರ್ಕಾರ. ತಡೆಗೋಡೆ ಕಟ್ಟುವ ಅವಶ್ಯಕತೆ ಇರಲಿಲ್ಲ. ಇದರಿಂದ ನೈಸರ್ಗಿಕವಾಗಿ ಬರುತ್ತಿದ್ದ ನೀರೂ ಕರ್ನಾಟಕಕ್ಕೆ ಬರುತ್ತಿಲ್ಲ. ಮಹದಾಯಿ ಅನುಷ್ಠಾನವಾದರೆ ಎಲ್ಲರಿಗೂ ಅನುಕೂಲ. ಇದಕ್ಕೆ ಕೇಂದ್ರ ಸರ್ಕಾರವೇ ತಡೆಯೊಡ್ಡಿದೆ ಎಂದು ಸಿದ್ದರಾಮಯ್ಯ ಅವರು ಹೇಳುತ್ತಲೇ ಇದ್ದಾರೆ. ಅದು ಸುಳ್ಳು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.