ADVERTISEMENT

‘ಸ್ಮಾರ್ಟ್‌ ಸಮಾಜಕ್ಕೆ ತಂತ್ರಜ್ಞಾನ ಅತ್ಯಗತ್ಯ’

ವಿಟಿಯುನಲ್ಲಿ ಬೋಧಕರ ರಾಷ್ಟ್ರೀಯ ವಾರ್ಷಿಕ ಸಮ್ಮೇಳನ ಆರಂಭ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 12:43 IST
Last Updated 19 ಮಾರ್ಚ್ 2019, 12:43 IST
ಬೆಳಗಾವಿಯ ವಿಟಿಯುನಲ್ಲಿ ಮಂಗಳವಾರ ನಡೆದ ಬೋಧಕರ ಸಮ್ಮೇಳನದಲ್ಲಿ ಐಎಸ್‌ಟಿಇ ಗುಜರಾತ್‌ ವಿಭಾಗದ ಉಪಾಧ್ಯಕ್ಷ ಜಗದೀಶ ಪಟೇಲ, ಕಾರ್ಯಕಾರಿ ಮಂಡಳಿ ಸದಸ್ಯ ಎಸ್. ಶಶಿಧರ ಹಾಗೂ ರಾಜ್ಯ ತಾಂತ್ರಿಕ ಶಿಕ್ಷಣ ಮಂಡಳಿ ನಿರ್ದೇಶಕ ಎಚ್‌.ಯು. ತಳವಾರ ಅವರಿಗೆ ‘ಐಎಸ್‌ಟಿಇ ಫೆಲೋಶಿಪ್’ ನೀಡಿ ಗೌರವಿಸಲಾಯಿತು
ಬೆಳಗಾವಿಯ ವಿಟಿಯುನಲ್ಲಿ ಮಂಗಳವಾರ ನಡೆದ ಬೋಧಕರ ಸಮ್ಮೇಳನದಲ್ಲಿ ಐಎಸ್‌ಟಿಇ ಗುಜರಾತ್‌ ವಿಭಾಗದ ಉಪಾಧ್ಯಕ್ಷ ಜಗದೀಶ ಪಟೇಲ, ಕಾರ್ಯಕಾರಿ ಮಂಡಳಿ ಸದಸ್ಯ ಎಸ್. ಶಶಿಧರ ಹಾಗೂ ರಾಜ್ಯ ತಾಂತ್ರಿಕ ಶಿಕ್ಷಣ ಮಂಡಳಿ ನಿರ್ದೇಶಕ ಎಚ್‌.ಯು. ತಳವಾರ ಅವರಿಗೆ ‘ಐಎಸ್‌ಟಿಇ ಫೆಲೋಶಿಪ್’ ನೀಡಿ ಗೌರವಿಸಲಾಯಿತು   

ಬೆಳಗಾವಿ: ‘ಸ್ಮಾರ್ಟ್‌ ಸಮಾಜದ ನಿರ್ಮಾಣಕ್ಕೆ ತಂತ್ರಜ್ಞಾನ ಅತ್ಯಗತ್ಯವಾಗಿದೆ’ ಎಂದು ಐಎಸ್‌ಟಿಇ (ಭಾರತ ತಾಂತ್ರಿಕ ಶಿಕ್ಷಣ ಸಮಾಜ) ಅಧ್ಯಕ್ಷ ಪ್ರತಾಪಸಿನ್ಹಾ ಕೆ. ದೇಸಾಯಿ ಇಲ್ಲಿ ಹೇಳಿದರು.

ಐಎಸ್‌ಟಿಇ ಹಾಗೂ ವಿಟಿಯು ಸಹಯೋಗದಲ್ಲಿ ‘ಸ್ಮಾರ್ಟ್‌ ಸೊಸೈಟಿಗಾಗಿ ತಾಂತ್ರಿಕ ಶಿಕ್ಷಣ’ ವಿಷಯ ಕುರಿತು ಆಯೋಜಿಸಿರುವ ಬೋಧಕರ ರಾಷ್ಟ್ರೀಯ ವಾರ್ಷಿಕ ಸಮ್ಮೇಳನವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಐಎಸ್‌ಟಿಇ, ಶಿಕ್ಷಣ ತಜ್ಞರು, ನೀತಿ ನಿರೂಪಕರು ಹಾಗೂ ಸಂಬಂಧಿಸಿದ ಎಲ್ಲ ಸಹಭಾಗಿದಾರರಿಗೆ ತಾಂತ್ರಿಕ ಶಿಕ್ಷಣದ ಮುಂದಿರುವ ಸವಾಲುಗಳ ಬಗ್ಗೆ ಚರ್ಚಿಸಲು ಇದು ಮಹತ್ವದ ವೇದಿಕೆಯಾಗಿದೆ. ಕೈಗಾರಿಕೆಗಳ ಬೆಳವಣಿಗೆಯ ಅವಶ್ಯಕತೆಗೆ ಅನುಗುಣವಾಗಿ ತಂತ್ರಜ್ಞಾನಗಳು ಅತ್ಯಂತ ವೇಗವಾಗಿ ಬದಲಾವಣೆಯಾಗುತ್ತಿದೆ. ದೇಶದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಗುಣಮಟ್ಟ ಅತ್ಯುತ್ತಮವಾಗಿದೆ. ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಸಂಶೋಧನೆಗೆ ಮುಂದಾಗುವಂತೆ ಬೋಧಕರು ಅವರನ್ನು ಪ್ರೇರೇಪಿಸಬೇಕಾಗಿದೆ’ ಎಂದು ಅಭಿಪ್ರಾಯ‍ಪಟ್ಟರು.

ADVERTISEMENT

ಐಎಸ್‌ಟಿಇ ಉಪಾಧ್ಯಕ್ಷ ಬಿ.ಆರ್. ಶರ್ಮಾ ಮಾತನಾಡಿ, ‘ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ರೂಪಿಸುವಲ್ಲಿ ಬೋಧಕರ ಪಾತ್ರ ಮಹತ್ವದ್ದಾಗಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಟಿಯು ಕುಲಪತಿ ಕರಿಸಿದ್ದಪ್ಪ ಮಾತನಾಡಿ, ‘ಬೋಧಕರು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತೇಜನ ನೀಡಬೇಕು’ ಎಂದು ಸಲಹೆ ನೀಡಿದರು.

ವಿಪ್ರೋ ಕಂಪನಿಯ ಸೂರ್ಯಪ್ರಕಾಶ ಮಹಾಪಾತ್ರ ಮಾತನಾಡಿದರು. ಐಎಸ್‌ಟಿಇ ಕರ್ನಾಟಕ ವಿಭಾಗದ ಅಧ್ಯಕ್ಷ ಸಿ.ಕೆ. ಸುಬ್ಬರಾಯ, ವಿಟಿಯು ಕುಲಸಚಿವ ಸತೀಶ ಅಣ್ಣಿಗೇರಿ, ಐಎಸ್‌ಟಿಇ ಕಾರ್ಯಕಾರಿ ಕಾರ್ಯದರ್ಶಿ ವಿಜಯ ಡಿ. ವೈದ್ಯ, ಖಜಾಂಚಿ ಟಿ.ಎಸ್. ಇಂದುಮತಿ ಹಾಗೂ ಸಮ್ಮೇಳನದ ಕಾರ್ಯದರ್ಶಿಗಳಾದ ಆನಂದ ವಿ.ಶಿವಾಪುರ ಮತ್ತು ಎನ್.ಡಿ. ಬಿರ್ಜೆ ಇದ್ದರು.

ಐಎಸ್‌ಟಿಇ ವತಿಯಿಂದ ವಿಟಿಯುಗೆ ‘2019ನೇ ಸಾಲಿನ ಅತ್ಯುತ್ತಮ ತಾಂತ್ರಿಕ ವಿಶ್ವವಿದ್ಯಾಲಯ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2 ದಿನಗಳ ಈ ಸಮ್ಮೇಳನದಲ್ಲಿ, ದೇಶದ ವಿವಿಧ ಭಾಗಗಳಿಂದ ಸಾವಿರ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಸ್ಮಾರ್ಟ್‌ ಸೊಸೈಟಿಗೆ ಬೇಕಾಗುವ ಬೋಧನೆ–ಕಲಿಕಾ ವಿಧಾನಗಳು, ಕೈಗಾರಿಕಾ–ಶಿಕ್ಷಣ ಸಂಸ್ಥೆಗಳ ಸಂವಹನ, ಆಡಳಿತ, ಮುಂದಾಳತ್ವ ಹಾಗೂ ನಿರ್ವಹಣೆ, ಪರಿಣಾಮಕಾರಿ ಶಿಕ್ಷಣ ಪದ್ಧತಿ ಕುರಿತು ಉಪನ್ಯಾಸ, ಪ್ರಬಂಧ ಮಂಡನೆ ಕಾರ್ಯಕ್ರಮವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.