ADVERTISEMENT

ಬೆಳಗಾವಿ: ಉತಾರಕ್ಕೆ ನೇಕಾರ ಕಾರ್ಮಿಕರ ಬಳಗದ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಮೇ 2022, 11:08 IST
Last Updated 10 ಮೇ 2022, 11:08 IST
ಬೆಳಗಾವಿಯಲ್ಲಿ ಬಾಂಡ್ ಮೇಲೆ ನಿರ್ಮಿಸಿದ ಮನೆಗಳಿಗೆ ಉತಾರ ನೀಡುವಂತೆ ಆಗ್ರಹಿಸಿ ನೇಕಾರ ಕಾರ್ಮಿಕರ ಬಳಗದವರು ಮಹಾನಗರಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು
ಬೆಳಗಾವಿಯಲ್ಲಿ ಬಾಂಡ್ ಮೇಲೆ ನಿರ್ಮಿಸಿದ ಮನೆಗಳಿಗೆ ಉತಾರ ನೀಡುವಂತೆ ಆಗ್ರಹಿಸಿ ನೇಕಾರ ಕಾರ್ಮಿಕರ ಬಳಗದವರು ಮಹಾನಗರಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು   

ಬೆಳಗಾವಿ: ಇಲ್ಲಿನ ಖಾಸಬಾಗ್, ವಡಗಾವಿ ಭಾಗದಲ್ಲಿ ಬಾಂಡ್ ಮೇಲೆ ಖರೀದಿಸಿದ ನಿವೇಶನ ಅಥವಾ ಮನೆಗಳಿಗೆ ಹಿಂದಿನಂತೆ ಉತಾರ ನೀಡುವಂತೆ ಆಗ್ರಹಿಸಿ ನೇಕಾರ ಕಾರ್ಮಿಕರ ಬಳಗದವರು ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

‘ನಗರದ ಬಹುತೇಕ ಪ್ರದೇಶಗಳಲ್ಲಿ ಬಾಂಡ್ ಮೇಲೆ ಖರೀದಿಸಿದ ನಿವೇಶನಗಳಲ್ಲಿ ಮನೆ ನಿರ್ಮಿಸಲಾಗಿದೆ. ಅವುಗಳಿಗೆ 30-40 ವರ್ಷಗಳಿಂದಲೂ ಪಾಲಿಕೆಯಿಂದ ಕರ ಅಕರಿಸಲಾಗುತ್ತಿದೆ. ಅದಕ್ಕಾಗಿಯೇ ಹಿಂದೆ ಪಾಲಿಕೆಯಿಂದ ಉತಾರ ಕೊಡುವ ವ್ಯವಸ್ಥೆಯೂ ಇತ್ತು. ಈ ಉತಾರದಿಂದ ಬಡವರು, ನೇಕಾರ ಕಾರ್ಮಿಕರಿಗೆ ಸೊಸೈಟಿಗಳಲ್ಲಿ ಸಾಲ ಪಡೆಯುತ್ತಿದ್ದರು; ಇತರ ಹಲವು ಸರ್ಕಾರಿ ಸೌಲಭ್ಯಗಳು ಸಿಗುತ್ತಿದ್ದವು. ಆದರೆ, 4 ವರ್ಷಗಳಿಂದ ದಿಢೀರನೆ ಉತಾರ ನೀಡುವುದನ್ನು ನಿಲ್ಲಿಸಲಾಗಿದೆ’ ಎಂದು ತಿಳಿಸಿದರು.

‘ಇದರಿಂದ ನೇಕಾರ ಕಾರ್ಮಿಕರು, ಬಡ ಕೂಲಿಕಾರ ಕುಟುಂಬಗಳಿಗೆ ಅನಾನುಕೂಲವಾಗಿದೆ. ನೇಕಾರ ಕಾರ್ಮಿಕರಿಗೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಉತಾರಗಳಿಲ್ಲದೆ ಸಾಲ ಸಿಗದಂತಾಗಿದೆ. ಇದರಿಂದಾಗಿ ಅನಿವಾರ್ಯವಾಗಿ ಹೆಚ್ಚಿನ ಬಡ್ಡಿ ದರಕ್ಕೆ ಕೈ ಸಾಲ ಮಾಡಬೇಕಾಗಿದೆ. ಇದರಿಂದ ಸಾಲದ ಹೊರೆ ಹೆಚ್ಚಾಗಿ ನೇಕಾರರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ’ ಎಂದು ಹೇಳಿದರು.

ADVERTISEMENT

‘ಇಂತಹ ಘಟನೆಗಳನ್ನು ತಪ್ಪಿಸಿ ಬಡ ನೇಕಾರ ಕುಟುಂಬಗಳ ಅನುಕೂಲಕ್ಕಾಗಿ ಈ ಹಿಂದಿನಂತೆ ಉತಾರ ಕೊಡಬೇಕು. ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಬಳಗದ ಸಾಗರ ಸಾತ್ಪುತೆ, ನಾಗರಾಜ ಬೆಟಗೇರಿ, ಮಂಜುನಾಥ ಸಾತ್ಪುತೆ, ಶೇಖರ ಕಾಮಕರ, ಆನಂದ ಬೆಟಗೇರಿ, ಸರಳಾ ಸಾತ್ಪುತೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.