ಅಥಣಿ: ಪಟ್ಟಣದಲ್ಲಿ ಅನೇಕ ವರ್ಷಗಳಿಂದ ಅನಾಥ ಹಾಗೂ ನಿರ್ಗತಿಕ ಮಕ್ಕಳ ಸಂರಕ್ಷಣೆ ಹಾಗೂ ಶಿಕ್ಷಣ ನೀಡುತ್ತಿರುವ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಿಜಪ್ಪ ಹಿರೇಮನಿ ದಂಪತಿಗೆ ಧಾರವಾಡದ ಚೇತನ ಪೌಂಡೇಶನ್ ಕೊಡಮಾಡುವ 2025-26ನೇ ಸಾಲಿನ ಭಾರತ ಭೂಷಣ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇತ್ತೀಚಿಗೆ ಧಾರವಾಡದಲ್ಲಿ ಚೇತನ ಫೌಂಡೇಶನ್ ವಾರ್ಷಿಕೋತ್ಸವ ಹಾಗೂ ಫ್ಯಾಶನ್ ಶೋ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ನಿಜಪ್ಪ ಹಿರೇಮನಿ ದಂಪತಿ ಅಥಣಿ ಪಟ್ಟಣದಲ್ಲಿ ಕಳೆದ 15 ವರ್ಷಗಳಿಂದ ಅನಾಥ ಮಕ್ಕಳ ಸಂರಕ್ಷಣೆ, ಮಾನಸಿಕ ಅಸ್ವಸ್ಥರ ಆರೈಕೆ, ನಿತ್ಯ ನಿರ್ಗತಿಗರಿಗೆ, ಭಿಕ್ಷುಕರಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ಇವರ ನಿಸ್ವಾರ್ಥ ಸೇವೆ ಕಂಡು ಸಮಾರಂಭದಲ್ಲಿ ಧಾರವಾಡದ ಚೇತನ ಫೌಂಡೇಶನ್ ಈ ಬಾರಿ ಪ್ರಶಸ್ತಿ ನೀಡಿ ಗೌರವಿಸಿದೆ.
ಚೇತನ ಫೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಮಡಲಗೇರಿ, ಶಿಕ್ಷಣ ಪ್ರೇಮಿ ಡಾ.ರಮೇಶ್ ಮಹದೇವಪ್ಪನವರ, ಚಿತ್ರನಟ ಹಾಗೂ ರಂಗಭೂಮಿ ಕಲಾವಿದ ರಾಜು ತಾಳಿಕೋಟಿ, ಕಲಾವಿದ ಹಾಗೂ ಸಿನಿಮಾ ನಿರ್ದೇಶಕ ಎನ್.ಎ.ದೇಸಾಯಿ, ಸಮಾಜ ಸೇವಕಿ ಲಕ್ಷ್ಮಿ ಚಿಕ್ಕತೋಟದ, ಶಿಕ್ಷಣ ತಜ್ಞ ಉಮಾದೇವಿ ಹಿರೇಮಠ, ಯುವ ಮುಖಂಡ ದಶರಥ ಗಾಣಿಗೇರ ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.