ADVERTISEMENT

ಸದ್ಯಕ್ಕೆ ಪ್ರವಾಹ ಭೀತಿ ಇಲ್ಲ: ಡಿ.ಸಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 15:36 IST
Last Updated 24 ಜುಲೈ 2024, 15:36 IST

ಬೆಳಗಾವಿ: ‘ಕೃಷ್ಣಾ ಮತ್ತು ಘಟಪ್ರಭಾ ನದಿಗಳ ತೀರದಲ್ಲಿ ಯಾವುದೇ ರೀತಿಯ ಪ್ರವಾಹದ ಭೀತಿ ಇಲ್ಲ. ಆದರೆ, ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನ ಮೇಲೆ ನಿಗಾ ಇರಿಸಿದ್ದೇವೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1.35 ಲಕ್ಷ ಕ್ಯುಸೆಕ್‌, ದೂಧಗಂಗಾ ನದಿಯಿಂದ 32,500 ಕ್ಯುಸೆಕ್ ಸೇರಿದಂತೆ 1,67,500 ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಹರಿದುಬರುತ್ತಿದೆ. ಮತ್ತೊಂದೆಡೆ ಹಿಪ್ಪರಗಿ ಬ್ಯಾರೇಜ್‌ನಿಂದ 1.50 ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. ಮಹಾರಾಷ್ಟ್ರದಿಂದ ಬರುತ್ತಿರುವ ನೀರಿನ ಪ್ರಮಾಣ ಈಗ ನಿಯಂತ್ರಣದಲ್ಲಿದೆ. ಆದರೆ, ನಾವು ಕಟ್ಟೆಚ್ಚರ ವಹಿಸಬೇಕಾಗಿದೆ. ಇನ್ನೂ ಪ್ರವಾಹ ಭೀತಿ ಎದುರಾಗಿಲ್ಲ’ ಎಂದರು.

‘51 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಜಲಾಶಯದಲ್ಲಿ ಶೇ 80ರಷ್ಟು ನೀರು ಸಂಗ್ರಹವಾಗಿದೆ. ಹಿಡಕಲ್ ಅಣೆಕಟ್ಟಿನಿಂದ ನೀರು ಬಿಡುವುದನ್ನು 10 ಸಾವಿರ ಕ್ಯುಸೆಕ್‌ಗೆ ಹೆಚ್ಚಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಐದಾರು ದಿನಗಳಿಂದ ಖಾನಾಪುರ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಮಂತುರ್ಗಾ, ಅಸೋಗಾ, ಸಾತನಳ್ಳಿ ಮತ್ತಿತರ ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಗ್ರಾಮಸ್ಥರಿಗೆ ಹಾಲಿನ ಪುಡಿ, ಔಷಧ ಸರಬರಾಜು ಮಾಡಿದ್ದೇವೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಯ 10 ಸದಸ್ಯರ ತಂಡ ತಹಶೀಲ್ದಾರ್ ಮೇಲ್ವಿಚಾರಣೆಯಲ್ಲಿ ಖಾನಾಪುರದಲ್ಲೇ ಬೀಡುಬಿಟ್ಟಿದೆ’ ಎಂದು ಹೇಳಿದರು.

‘ಬಳ್ಳಾರಿ ನಾಲೆ ನೀರು ನುಗ್ಗಿದ್ದರಿಂದ ಕುಂದರಗಿ ಗ್ರಾಮಸ್ಥರನ್ನು ಅಂಕಲಗಿಯ ಅಡವಿಸಿದ್ಧೇಶ್ವರ ಮಠಕ್ಕೆ ಸ್ಥಳಾಂತರಿಸಿದ್ದೇವೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣೆಗೆ ಹರಿಸುವ ನೀರಿನ ಪ್ರಮಾಣದ ಮೇಲೆ ನಿಗಾ ಇರಿಸಲು ಕಂದಾಯ ಇಲಾಖೆ ಸಿಬ್ಬಂದಿಯೊಬ್ಬರನ್ನು ಕೊಯ್ನಾಗೆ ನಿಯೋಜಿಸಲಾಗಿದೆ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ‘ಪ್ರವಾಹಪೀಡಿತ ಗ್ರಾಮಗಳಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಜನರಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಭೂಕುಸಿತ ತಡೆಯಲು ನಿಪ್ಪಾಣಿ ತಾಲ್ಲೂಕಿನ ಸ್ತವನಿಧಿ ಘಾಟ್ ಬಳಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಗಾಗಿ ಕಲ್ಲುಗಳನ್ನು ಸ್ಫೋಟಿಸುವುದನ್ನು ನಿಲ್ಲಿಸಿದ್ದೇವೆ. ಅಗತ್ಯಬಿದ್ದರೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್ ತಂಡವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ, ‘ಸತತ ಮಳೆ ಹಿನ್ನೆಲೆಯಲ್ಲಿ ಕುಡಿಯುವ ನೀರು ಕಲುಷಿತವಾಗುವ ಸಾಧ್ಯತೆಯಿದೆ. ಹಾಗಾಗಿ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕುದಿಸಿ, ಆರಿಸಿ ನೀರು ಕುಡಿಯಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.