
ಬೆಳಗಾವಿ: ‘ಬೆಳಗಾವಿ ಜಿಲ್ಲೆಯೂ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಲ್ಲೂ ಬಹಳಷ್ಟು ಇಲಾಖೆಗಳಲ್ಲಿ ಅರ್ಧದಷ್ಟು ಹುದ್ದೆಗಳು ಖಾಲಿ ಇವೆ. ಹೀಗಿದ್ದರೆ ಉತ್ತಮ ಆಡಳಿತ, ಅಭಿವೃದ್ಧಿ ಹೇಗೆ ಸಾಧ್ಯ? ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಕಾಟಾಚಾರಕ್ಕೆ ಅಧಿವೇಶನ ಮಾಡಬಾರದು’ ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ನೀರಾವರಿ ಇಲಾಖೆ, ಶಿಕ್ಷಣ ಇಲಾಖೆ, ಲೋಕೋಪಯೋಗಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಕಡೆಯೂ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಹಲವು ವರ್ಷಗಳಿಂದ ಸರ್ಕಾರ ಭರ್ತಿ ಮಾಡಿಲ್ಲ. ಇನ್ನೊಂದೆಡೆ ಈ ಭಾಗದ ಯುವಜನರು ನಿರುದ್ಯೋಗದಿಂದ ಬಳಲುತ್ತಿದ್ದಾರೆ’ ಎಂದರು.
‘ಸರ್ಕಾರ ಉತ್ತರ ಕರ್ನಾಟಕದ ಕೆಲಸಗಳಿಗೆ ಯಾವಾಗಲೂ ತಾರತಮ್ಯ ಮಾಡುತ್ತ ಬಂದಿದೆ. ದಕ್ಷಿಣ ಭಾಗದಲ್ಲಿ ಮೈಸೂರು ಅರಸರ ಕಾಲದಿಂದಲೂ ಅಭಿವೃದ್ಧಿ ಆಗಿದೆ. ನಂತರ ಬಂದ ಚುನಾಯಿತ ಸರ್ಕಾರಗಳಾದರೂ ಈ ತಾರತಮ್ಯ ನಿವಾರಣೆ ಮಾಡಬೇಕಿತ್ತು. ಇದೂವರೆಗೆ ಅಂಥ ಪ್ರಯತ್ನ ಮಾಡಿಲ್ಲ. ಹೀಗಾಗಿ, ಈ ಭಾಗದಲ್ಲಿ ಶಿಕ್ಷಣ, ನಿರುದ್ಯೋಗ, ಬಡತನ, ಅನಾರೋಗ್ಯದಂತ ದೊಡ್ಡ ಸಮಸ್ಯೆಗಳು ಇನ್ನೂ ಇವೆ. ದಕ್ಷಿಣ ಭಾಗದಲ್ಲಿ ಕೈಗಾರೀಕರಣಕ್ಕೆ ತೋರಿದ ಆಸಕ್ತಿಯನ್ನು ಸರ್ಕಾರ ಈ ಭಾಗದ ಸಕ್ಕರೆ ಕಾರ್ಖಾನೆಗಳ ಸುಧಾರಣೆಗೆ ತೋರಿಲ್ಲ’ ಎಂದು ಟೀಕಿಸಿದರು.
‘ಆಲಮಟ್ಟಿ ಎತ್ತರವನ್ನು 519ರಿಂದ 524 ಮೀಟರ್‌ಗೆ ಎತ್ತರಿಸುವ ಮತ್ತು ಹಿನ್ನೀರಿನಿಂದ ಬಾಧಿತವಾಗಿರುವ ಕ್ಷೇತ್ರಕ್ಕೆ ಪುನರ್ವಸತಿ ಕಲ್ಪಿಸುವ ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡುತ್ತಿಲ್ಲ. ಈ ಒಂದು ಯೋಜನೆಯಿಂದ ಹಲವು ಜಿಲ್ಲೆಗಳು ಹಿನ್ನಡೆ ಅನುಭವಿಸುತ್ತಿವೆ’ ಎಂದೂ ಕಿಡಿ ಕಾರಿದರು.
‘ಉತ್ತರ ಕರ್ನಾಟಕದ ಎಲ್ಲ ಸಮಸ್ಯೆಗಳನ್ನು ಆದ್ಯತೆ ಮೇಲೆ ನಿವಾರಣೆ ಮಾಡುವುದು ಹಾಗೂ ತಾರತಮ್ಯ ಮಾಡದಿರುವ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು’ ಎಂದೂ ಆಗ್ರಹಿಸಿದರು.
ಮಾಜಿ ಶಾಸಕರಾದ ಡಾ.ವಿ.ಐ.ಪಾಟೀಲ, ಸಂಜಯ ಪಾಟೀಲ, ಮುಖಂಡರಾದ ವಿರೂಪಾಕ್ಷ ಮಾಮನಿ, ಎಂ.ಬಿ.ಝಿರಲಿ ಇತರರು ಇದ್ದರು.
ಬೆಳಗಾವಿ ಬೇಕಿರುವುದು ಏನು?
* ಟೆಕ್ಸಟೈಲ್ ಪಾರ್ಕ್ * ಸಿಲ್ವರ್ ಪಾರ್ಕ್
* ಐಟಿ ಪಾರ್ಕ್
* ರಾಜಾ ಲಖಮನಗೌಡ ಜಲಾಶಯದ ಹತ್ತಿರ ಬೃಂದಾವನ
* ಗೋಕಾಕ ಪಾಲ್ಸ್ ಅಭಿವೃದ್ಧಿ * ಜಿಲ್ಲೆಯ ಪುನರ್ ವಿಂಗಡಣೆ ಮಾಡಿ 3 ಜಿಲ್ಲೆಗಳನ್ನಾಗಿ ಮಾಡುವುದು
* ಕೃಷ್ಣ ದೂಧಗಂಗಾ ವೇದಗಂಗಾ ಘಟಪ್ರಭಾ ಮಲಪ್ರಭಾ ಪ್ರವಾಹದಿಂದ ತೊಂದರೆಗೊಳಗಾಗಿರುವ ಗ್ರಾಮಗಳ ಪುನರ್ವಸತಿ
* ನಗರದ ರಿಂಗ್ ರಸ್ತೆ
* ಹೊಸ ಕೈಗಾರಿಕೆಗಳ ಸ್ಥಾಪನೆ
* ವಿ.ವಿಗಳಿಗೆ ಮೂಲ ಸೌಕರ್ಯ
ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳು ಇಲಾಖೆ;ಮಂಜೂರಾತಿ;ನೇಮಕಾತಿ;ಖಾಲಿ ನೀರಾವರಿ ನಿಗಮ;1322;666;656 ಜಿಲ್ಲಾ ಪಂಚಾಯಿತಿ;1207;993;214 ಪಿಡಬ್ಲ್ಯುಡಿ(ಚಿಕ್ಕೋಡಿ);101;87;14 ಪಿಡಬ್ಲ್ಯುಡಿ(ಬೆಳಗಾವಿ);142;116;26 ಪಂಚಾಯತ್‌ರಾಜ್;85;46;39 ಆರೋಗ್ಯ ಇಲಾಖೆ;2097;1006;1091 ಡಿಡಿಪಿಐ;315;120;195 ಪ್ರಾಥಮಿಕ ಶಿಕ್ಷಣ;9797;6510;3287 ಮಾಧ್ಯಮಿಕ ಶಿಕ್ಷಣ;1906;1357;549
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.