ADVERTISEMENT

ಸ್ಥಳೀಯವಾಗಿ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಲು ನಿರ್ಧಾರ

ಆರ್‌.ಸಿ. ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 16:18 IST
Last Updated 21 ಏಪ್ರಿಲ್ 2021, 16:18 IST

ಬೆಳಗಾವಿ: ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ಪತ್ತೆ ಹಚ್ಚಲು ಜನರಿಂದ ಸಂಗ್ರಹಿಸಲಾಗುವ ಮಾದರಿಯನ್ನು ಸಂಪೂರ್ಣವಾಗಿ ಇಲ್ಲಿಯೇ ಪರೀಕ್ಷಿಸಲು ಸಾಧ್ಯವಾಗುವಂತೆ ಸಾಮರ್ಥ್ಯ ಹೆಚ್ಚಿಸುವ ಕುರಿತು ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಇಲ್ಲಿನ ನೆಹರೂ ನಗರದ ಐ.ಸಿ.ಎಂ.ಆರ್-ರಾಷ್ಟ್ರೀಯ ಚಿಕಿತ್ಸಾ ವಿಜ್ಞಾನ ಸಂಸ್ಥೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಎನ್.ಐ.ಟಿ.ಎಂ. ಅಧಿಕಾರಿಗಳು ಪಾಲ್ಗೊಂಡಿದ್ದರು.

ಕೋವಿಡ್ ಪತ್ತೆಗಾಗಿ ಜಿಲ್ಲೆಯಲ್ಲಿ ಸಂಗ್ರಹಿಸಲಾಗುವ ಮಾದರಿಯ ಪರೀಕ್ಷೆಗೆ ಬೇರೆ ಜಿಲ್ಲೆಗಳ ಪ್ರಯೋಗಾಲಯಕ್ಕೆ‌ ಕಳಿಸುವ ಬದಲು ಎಲ್ಲವನ್ನೂ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಹಾಗೂ ಎನ್.ಐ.ಟಿ.ಎಂ. ಪ್ರಯೋಗಾಲಯಲ್ಲೇ ಪರೀಕ್ಷಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು.

ADVERTISEMENT

ಸದ್ಯಕ್ಕೆ ಜಿಲ್ಲೆಯಲ್ಲಿ ನಿತ್ಯ 6ಸಾವಿರ ಜನರಿಂದ ಮಾದರಿ ಸಂಗ್ರಹಿಸಲಾಗುತ್ತಿದೆ. ಅದರಲ್ಲಿ 3ಸಾವಿರ‌ ಮಾದರಿಗಳನ್ನು ಬಿಮ್ಸ್ ಹಾಗೂ ಎನ್.ಐ.ಟಿ.ಎಂ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತಿದ್ದು, ಇನ್ನುಳಿದವುಗಳನ್ನು ಬೇರೆ ಜಿಲ್ಲೆಗಳಿಗೆ ಕಳುಹಿಸಲಾಗುತ್ತಿದೆ. ಇದರಿಂದ ವರದಿ ಬರುವುದು ವಿಳಂಬವಾಗುತ್ತಿದೆ. ಈ ರೀತಿಯ ಅವಲಂಬನೆ ಮತ್ತು ವಿಳಂಬ ತಪ್ಪಿಸುವ ಬಗ್ಗೆ ಚರ್ಚಿಸಲಾಯಿತು.

‘ತಪಾಸಣಾ ಸಾಮರ್ಥ್ಯ ಹೆಚ್ಚಿಸಲು ಅಗತ್ಯವಿರುವ ವೈದ್ಯಕೀಯ ಪರಿಕರ ಹಾಗೂ ಆರ್ಥಿಕ ನೆರವು ಸೇರಿದಂತೆ ಎಲ್ಲ ರೀತಿಯ ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ತಿಳಿಸಿದರು.

ಇದಕ್ಕೆ ಅಗತ್ಯವಿರುವ ಸಿದ್ಧತೆಗಳನ್ನು ಕೂಡಲೇ ಮಾಡಿಕೊಂಡು ಮುಂಬರುವ ದಿನಗಳಲ್ಲಿ ಎಲ್ಲ ಮಾದರಿಗಳನ್ನು ಸ್ಥಳೀಯವಾಗಿಯೇ ಪರೀಕ್ಷಿಸಿ ಆದಷ್ಟು ಬೇಗನೇ ವರದಿ ನೀಡಲು ಅನುಕೂಲ ಆ‌ಗುವಂತೆ ವಾರದೊಳಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.

ಐ.ಸಿ.ಎಂ.ಆರ್-ರಾಷ್ಟ್ರೀಯ ಚಿಕಿತ್ಸಾ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಚಟ್ಟೋಪಾಧ್ಯಾಯ, ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ, ಎನ್.ಐ.ಟಿ.ಎಂ. ವಿಜ್ಞಾನಿ ಬನ್ನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.