ADVERTISEMENT

ಹಳಗನ್ನಡ ಕಾವ್ಯಗಳು ಅನುಭಾವದ ಪಾಕ: ಪ್ರೊ.ಪುರುಷೋತ್ತಮ ಬಿಳಿಮಲೆ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 12:22 IST
Last Updated 24 ಜೂನ್ 2025, 12:22 IST
<div class="paragraphs"><p>ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರೊ.ಪುರುಷೋತ್ತಮ ಬಿಳಿಮಲೆ ಮಾತನಾಡಿದರು</p></div>

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರೊ.ಪುರುಷೋತ್ತಮ ಬಿಳಿಮಲೆ ಮಾತನಾಡಿದರು

   

ಬೆಳಗಾವಿ: ‘ಕಾವ್ಯದ ಭಾಷೆ ನೀಡಿದ ವಿವೇಕತೆ ನಮ್ಮನ್ನು ಮನುಷ್ಯರನ್ನಾಗಿ ರೂಪಿಸಿದೆ. ಹಳಗನ್ನಡ ಕಾವ್ಯಗಳು ಅನುಭಾವದ ಪಾಕ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯು ಪಿಎಂ ಉಷಾ ಮೇರು ಯೋಜನೆಯಡಿ ಮಂಗಳವಾರ ಹಮ್ಮಿಕೊಂಡಿದ್ದ ‘ಹಳಗನ್ನಡ ಕಾವ್ಯ ರಸಗ್ರಹಣ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಪಂಚೇಂದ್ರೀಯಗಳನ್ನು ಉದ್ದೀಪಿಸುವ, ಸಾಂಸ್ಕೃತಿಕವಾಗಿ ಭಿನ್ನವಾದ ಲೋಕ ಕಟ್ಟುವ ಹಾಗೂ ಮಾನವನ ಸೃಜನಶೀಲತೆಗೆ ಆಸರೆಯಾಗಿರುವ ಕನ್ನಡ ಭಾಷೆ, ಜಾಗತೀಕರಣದ ಭರಾಟೆ ಮಧ್ಯೆ ಇಂದು ಅವನತಿಯತ್ತ ಸಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಯುನೆಸ್ಕೋ ಇತ್ತೀಚೆಗೆ ಬಿಡುಗಡೆಗೊಳಿಸಿದ ವರದಿ ದಿಗಿಲು ಹುಟ್ಟಿಸುತ್ತದೆ. ವಿಶ್ವದ ಶೇ 92ರಷ್ಟು ಜನರು ಮುಂದಿನ ಆರು ದಶಕಗಳಲ್ಲಿ ತಾವು ಮಾತನಾಡುವ ಭಾಷೆ ಮರೆತು, ಶೇ 8ರಷ್ಟು ಜನರು ಮಾತನಾಡುವ ಭಾಷೆ ಮೇಲೆ ಅವಲಂಬಿತರಾಗುತ್ತಾರೆ. ಭಾಷೆ ಬಗ್ಗೆ ಎಚ್ಚರಿಕೆ ಇರದಿದ್ದರೆ ನಾವೂ ನಮ್ಮ ಭಾಷೆ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ನಮ್ಮ ಭಾಷೆ ನಾವು ಪ್ರೀತಿಸಿದರೆ, ಅದನ್ನು ಕೊಲ್ಲುವ ಶಕ್ತಿ ದೇವರಿಗೂ ಇಲ್ಲ . ಪರಭಾಷಿಕರು ನಮ್ಮ ನಾಡಿಗೆ ಬಂದು, ಅವರ ಭಾಷೆ ಕಲಿಸುತ್ತಾರೆ. ಆದರೆ, ನಾವು ಅವರಿಗೆ ನಮ್ಮ ಭಾಷೆ ಕಲಿಸುವುದಿಲ್ಲ. ಭಾಷೆ, ಸಾಹಿತ್ಯವನ್ನು ಜಾಹೀರಾತು ಮತ್ತು ಹಣದ ಉತ್ಪಾದನೆ ಸರಕಾಗಿ ನೋಡಬೇಡಿ. ಮಾನವೀಯ ಸರಕಾಗಿ ನೋಡಿ’ ಎಂದು ಸಲಹೆ ಕೊಟ್ಟರು.

ಕಾರ್ಯಕ್ರಮದ ಸಂಯೋಜಕಿ ಶೋಭಾ ನಾಯಕ ಪ್ರಾಸ್ತಾವಿಕ ಮಾತನಾಡಿ, ವರ್ತಮಾನದಲ್ಲಿ ಹಳಗನ್ನಡದ ಪ್ರಸ್ತುತತೆ ಬಗ್ಗೆ ತಿಳಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥ ಮಹೇಶ ಗಾಜಪ್ಪನವರ ಇದ್ದರು. ಆಫ್ರಿನ್‌ಭಾನು ಮತ್ತು ಪೂಜಾ ಕಾಂಬಳೆ ಪ್ರಾರ್ಥಿಸಿದರು. ಪಿಎಂ ಉಷಾ ಮೇರು ಯೋಜನೆ ನೋಡಲ್ ಅಧಿಕಾರಿ ನಂದಿನಿ ದೇವರಮನಿ ಸ್ವಾಗತಿಸಿದರು. ಗಜಾನನ ನಾಯ್ಕ ನಿರೂಪಿಸಿದರು. ಪಿ.ನಾಗರಾಜ ವಂದಿಸಿದರು.

‘ಹಳಗನ್ನಡ ಕಾವ್ಯಗಳನ್ನು ಓದಿ’

‘ಶಿಕ್ಷಕರು ಹಳಗನ್ನಡ ಕಾವ್ಯಗಳನ್ನು ಓದಬೇಕು. ಜತೆಗೆ ವಿದ್ಯಾರ್ಥಿಗಳಿಗೂ ಬೋಧಿಸಬೇಕು. ಹಳಗನ್ನಡ ಸಾಹಿತ್ಯದ ಪರಂಪರೆಯಲ್ಲೇ ಇಂದಿನ ಸಾಹಿತ್ಯ ರೂಪುಗೊಂಡಿದೆ. ಅದರಲ್ಲಿ ನಾಡಿನ ಚರಿತ್ರೆ ಇದೆ, ಮೌಲ್ಯವಿದೆ’ ಎಂದು ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಹೇಳಿದರು.

‘ಶಿಕ್ಷಕರು ತಮ್ಮ ಬೌದ್ಧಿಕ ಶಕ್ತಿಯಿಂದ ವಿದ್ಯಾರ್ಥಿಗಳನ್ನು ಬೆಳೆಸಬೇಕು, ಬೆಳಗಿಸಬೇಕು. ಒಂದು ಮಗು ಅರಳಿಸುವ ಶಕ್ತಿ ಭಾಷೆಗಷ್ಟೇ ಇದೆ. ಆ ಶಕ್ತಿಯಿಂದಲೇ ಸಮಾಜ ಕಟ್ಟಬಹುದು’ ಎಂದರು.

‘ಪ್ರಾಥಮಿಕ ತಿಳಿವಳಿಕೆ ಇರಲಿ’

‘ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡದ ಪರಂಪರೆ ಹಾಗೂ ಅದರ ಪ್ರಾಥಮಿಕ ತಿಳಿವಳಿಕೆ ಶಿಕ್ಷಕರಿಗೆ ಇರಬೇಕು. ಇಲ್ಲದಿದ್ದರೆ ಉತ್ತಮ ಶಿಕ್ಷಕನಾಗುವುದು ಕಷ್ಟ. ಶಿಕ್ಷಣ ಸಂಸ್ಥೆಗಳು ನೆಪ ಹೇಳುವುದನ್ನು ಬಿಟ್ಟು, ಹಳಗನ್ನಡ ಮತ್ತು ನಡುಗನ್ನಡದ ಸಾಹಿತ್ಯಿಕ ಸೌರಭ, ಸಾಂಸ್ಕೃತಿಕ ಸಂಪತ್ತನ್ನು ವಿದ್ಯಾರ್ಥಿಗಳಿಗೆ ಉಣಬಡಿಸಬೇಕು’ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.