ADVERTISEMENT

ಜಿಲ್ಲೆಯಲ್ಲಿ ‘ಸಿಕ್ಕಿದ್ದು’ ಆರೇ ಬಾಲಕಾರ್ಮಿಕರು!

ಅಚ್ಚರಿ ಮೂಡಿಸುವ ಕಾರ್ಮಿಕ ಇಲಾಖೆ ಅಧಿಕಾರಿಗಳ ಮಾಹಿತಿ

ಎಂ.ಮಹೇಶ
Published 11 ಜೂನ್ 2019, 13:46 IST
Last Updated 11 ಜೂನ್ 2019, 13:46 IST

ಬೆಳಗಾವಿ: ‘ಜಿಲ್ಲೆಯಲ್ಲಿ ಇಟ್ಟಿಗೆ ತಯಾರಿಕಾ ಘಟಕಗಳು ಬಹಳಷ್ಟಿವೆ. ನೂರಾರು ಹೋಟೆಲ್‌ಗಳಿವೆ, ಕೈಗಾರಿಕೆಗಳಿವೆ. ಗ್ಯಾರೇಜ್‌ಗಳ ಸಂಖ್ಯೆ ಕೂಡ ಕಡಿಮೆ ಏನಿಲ್ಲ. ಕಟ್ಟಡ ನಿರ್ಮಾಣ ಕಾಮಗಾರಿಗಳು ಸಾವಿರಾರು ಸಂಖ್ಯೆಯಲ್ಲಿ ನಡೆಯುತ್ತಿವೆ. ಆದರೆ, ಅಲ್ಲೆಲ್ಲೂ ಬಾಲಕಾರ್ಮಿಕ ಪದ್ಧತಿ ಕಂಡುಬಂದಿಲ್ಲ. 2018–19ನೇ ಸಾಲಿನಲ್ಲಿ ನಡೆಸಿದ ದಾಳಿಯಲ್ಲಿ 6 ಮಕ್ಕಳನ್ನಷ್ಟೇ ಬಾಲಕಾರ್ಮಿಕ ಪದ್ಧತಿಯಿಂದ ಮುಕ್ತಗೊಳಿಸಿ, ಸಂರಕ್ಷಿಸಲಾಗಿದೆ’.

– ಕಾರ್ಮಿಕ ಇಲಾಖೆಯ ಜಿಲ್ಲೆಯ ಅಧಿಕಾರಿಗಳು ನೀಡುವ ಈ ಮಾಹಿತಿ ಅಚ್ಚರಿಗೆ ಕಾರಣವಾಗಿದೆ.

‘ಹಾಗಾದರೆ ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ಕಡಿಮೆಯಾಗಿದೆಯೇ, ಶಾಲೆಗಳಿಂದ ಹೊರಗುಳಿದ ಮಕ್ಕಳು ಏನು ಮಾಡುತ್ತಿದ್ದಾರೆ, ನಿಯಮಿತವಾಗಿ ದಾಳಿಗಳು ನಡೆಯುತ್ತಿಲ್ಲವೇ, ಬಾಲಕಾರ್ಮಿಕ ಪದ್ಧತಿಗೆ ಒಳಗಾದ ಮಕ್ಕಳನ್ನು ಪತ್ತೆ ಹಚ್ಚಿ ಅವರಿಗೆ ಪುನರ್ವಸತಿ ಕಲ್ಪಿಸಿ ಮುಖ್ಯವಾಹಿನಿಗೆ ತರಲು ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಯೇ, ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆಯೇ’ ಎಂಬ ಪ್ರಶ್ನೆಗಳು ಪ್ರಜ್ಞಾವಂತರದಾಗಿವೆ.

ADVERTISEMENT

ಜೀವಂತವಿದೆ:

ಕಾರ್ಮಿಕ ಇಲಾಖೆ ನೀಡುವ ಮಾಹಿತಿ ‍ಪ್ರಕಾರ, ಹೋದ ಸಾಲಿನಲ್ಲಿ 6 ಮಕ್ಕಳಷ್ಟೇ ಬಾಲಕಾರ್ಮಿಕರಾಗಿದ್ದರು. ಪ್ರಸಕ್ತ ಸಾಲಿನಲ್ಲಿ ಏಪ್ರಿಲ್‌ನಿಂದ ಇಲ್ಲಿವರೆಗೆ 6 ಮಕ್ಕಳನ್ನು ಮಾತ್ರ ಗುರುತಿಸಲಾಗಿದೆ. ಬಾಲಕಾರ್ಮಿಕ ಪದ್ಧತಿ ಜೀವಂತವಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆಯಾದರೂ, ಸಂಬಂಧಿಸಿದ ಇಲಾಖೆಯ ದಾಖಲೆಗಳಲ್ಲಿ ಮಾತ್ರ ಇವು ‘ದಾಖಲಾಗು’ತ್ತಿಲ್ಲ. ಹೀಗಾಗಿ, ಮಕ್ಕಳು ಕುಟುಂಬ ನಿರ್ವಹಣೆಯ ಜವಾಬ್ದಾರಿಯ ನೊಗ ಹೊರುವುದಕ್ಕೆ ದುಡಿಯುವುದು, ಬಾಲ್ಯವನ್ನು ದುಡಿಮೆಯಲ್ಲಿಯೇ ಕಳೆದುಕೊಳ್ಳುತ್ತಿರುವುದು ಹಾಗೂ ಶಿಕ್ಷಣದಿಂದ ದೂರವಾಗುತ್ತಿರುವುದು ಕಂಡುಬರುತ್ತಿದೆ. ಇದು, ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಕಾಣಿಸದಿರುವುದು ಸೋಜಿಗ ಮೂಡಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಮಿಕ ಆಯುಕ್ತ ನಾಗೇಶ್‌, ‘ನಾವು ದಾಳಿ ನಡೆಸಿದ ಸಂದರ್ಭದಲ್ಲಿ ದೊರೆತ ಅಂಕಿ–ಅಂಶವಿದು. ವ್ಯಾಪಕ ಜಾಗೃತಿ ಮೂಡಿದ ಪರಿಣಾಮ ಬಾಲಕಾರ್ಮಿಕ ಪದ್ಧತಿ ಕಂಡುಬರುತ್ತಿಲ್ಲ. ಇಟ್ಟಿಗೆಗೂಡುಗಳಿಗೆ ಹಲವು ಬಾರಿ ಭೇಟಿ ಕೊಟ್ಟು ಪರಿಶೀಲಿಸಿದ್ದೇವೆ. ಆದರೆ, ಮಕ್ಕಳು ದುಡಿಯುತ್ತಿರುವುದು ಪತ್ತೆಯಾಗಿಲ್ಲ. ಗ್ಯಾರೇಜ್, ಹೋಟೆಲ್‌ಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವ ಪ್ರಮಾಣ ಕಡಿಮೆಯಾಗಿದೆ’ ಎಂದು ಸಮರ್ಥಿಸಿಕೊಂಡರು. ‘ಬೇಸಿಗೆ ರಜೆ ಮುಗಿದು ಶಾಲೆಗಳು ಪುನರಾರಂಭವಾಗಿದ್ದು, ಶೀಘ್ರವೇ ಕಾರ್ಯಾಚರಣೆ ಆರಂಭಿಸಲಾಗುವುದು’ ಎಂದು ಸಮರ್ಥಿಸಿಕೊಂಡರು.

ಜಾಗೃತಿ ಮೂಡಿಸುತ್ತಿದ್ದೇವೆ:

‘ಹೋಟೆಲ್‌ಗಳ ಮಾಲೀಕರು, ಗ್ಯಾರೇಜ್‌ಗಳವರಲ್ಲಿ ಅರಿವು ಮೂಡಿಸಲಾಗಿದೆ. ಶಾಲೆಗಳಿಗೆ ಮಕ್ಕಳನ್ನು ಕರೆತರಬೇಕೆಂದು ಇಲಾಖೆಯು ಶಿಕ್ಷಕರಿಗೆ ಜವಾಬ್ದಾರಿ ನೀಡಿದೆ. ಪರಿಣಾಮ, ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ, ಬಾಲಕಾರ್ಮಿಕರು ಇಲ್ಲವಾಗಿದ್ದಾರೆ. ಇಲ್ಲಿಂದ ಗುಳೇ ಹೋಗಿ ಬಾಲಕಾರ್ಮಿಕರಾದವರು ನಮ್ಮ ಜಿಲ್ಲೆಯ ಅಂಕಿ–ಅಂಶ ಪಟ್ಟಿಗೆ ಸೇರುವುದಿಲ್ಲ’ ಎನ್ನುತ್ತಾರೆ ಅವರು.

ಆದರೆ, ಹೋರಾಟಗಾರರು ನೀಡುವ ಕಾರಣವೇ ಬೇರೆ. ‘ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಜೀವಂತವಾಗಿದೆ. ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ. ಗೊತ್ತಿದ್ದರೂ ಸುಮ್ಮನಿದ್ದಾರೆ. ಗಣಿಗಾರಿಕೆ, ಇಟ್ಟಿಗೆಗೂಡುಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರೆ ವಾಸ್ತವ ಅರಿವಾಗುತ್ತದೆ. ಹೋಟೆಲ್‌ಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಸ್ವಚ್ಛತಾ ಕೆಲಸ ಮಾಡುವವರು ಯಾರು? ಕಾರ್ಮಿಕ ಇಲಾಖೆ ಅಧಿಕಾರಿಗಳು ವಾಸ್ತವ ಮರೆ ಮಾಚುತ್ತಿದ್ದಾರೆ. ಮಕ್ಕಳು ಅನಿಷ್ಟ ಪದ್ಧತಿಯಿಂದ ಹೊರಬರಲು ಕಾಳಜಿ ವಹಿಸುತ್ತಿಲ್ಲ’ ಎಂಬ ಆರೋಪಗಳು ಅವರಿಂದ ಕೇಳಿಬರುತ್ತಿವೆ.

‘14 ವರ್ಷಕ್ಕಿಂತ ಕಡಿಮೆ ಇರುವವರು ಬಾಲಕಾರ್ಮಿಕರು. ಅವರನ್ನು ಎಂಥಾದ್ದೇ ಅನಿವಾರ್ಯತೆ ಇದ್ದರೂ ಕೆಲಸಕ್ಕೆ ಸೇರಿಸಬಾರದು. ಆದರೆ, 1098 ಸಹಾಯವಾಣಿ ಬಗ್ಗೆ ‍ಹೆಚ್ಚಿನ ಜನರಿಗೆ ಮಾಹಿತಿ ಇಲ್ಲ; ಪ್ರಚಾರ ಕೊಡುವ ಕೆಲಸವನ್ನು ಇಲಾಖೆಯವರು ಮಾಡುತ್ತಿಲ್ಲ. ತಡೆಯುವ ಕೆಲಸವನ್ನು ಅಧಿಕಾರಿಗಳು ಸರಿಯಾಗಿ ಮಾಡುತ್ತಿಲ್ಲ. ಜೀವಕ್ಕೆ ಹಾನಿ ಉಂಟು ಮಾಡುವ ಕೈಗಾರಿಕೆಗಳಲ್ಲೂ ಬಾಲಕಾರ್ಮಿಕರು ಇದ್ದಾರೆ. ಅಂಥವರು ನೂರಾರು ಸಂಖ್ಯೆಯಲ್ಲಿದ್ದರೂ ಅಧಿಕಾರಿಗಳು ಗಮನಿಸುತ್ತಿಲ್ಲ’ ಎಂದು ಕಾರ್ಮಿಕರ ಪರ ಹೋರಾಟಗಾರ ಎನ್.ಆರ್. ಲಾತೂರ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.