ADVERTISEMENT

ಬೆಳಗಾವಿ: ಎಪಿಎಂಸಿ ಖಾಸಗೀಕರಣಕ್ಕೆ ವಿರೋಧ

ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 14 ಮೇ 2020, 12:45 IST
Last Updated 14 ಮೇ 2020, 12:45 IST
ಬೆಳಗಾವಿಯಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಮುಖಂಡರು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು
ಬೆಳಗಾವಿಯಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಮುಖಂಡರು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು   

ಬೆಳಗಾವಿ: ಎ‍ಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ರೈತ ಸಂಘಟನೆ ನೇತೃತ್ವದಲ್ಲಿ ಮುಖಂಡರು ಗುರುವಾರ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರಿಗೆ ಮನವಿ ಸಲ್ಲಿಸಿದರು.

‘ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಿ ರೈತರ ಹಿತವನ್ನು ಕಡೆಗಣಿಸಿ ಎಪಿಎಂಸಿಯ ಖಾಸಗೀಕರಣಕ್ಕೆ ಮುಂದಾಗಿರುವ ಔಚಿತ್ಯವೇನು? ಇದು ರೈತ ಸಮುದಾಯಕ್ಕೆ ಆಶ್ಚರ್ಯವಾಗಿದೆ. ಈಗಿರುವ 1966ರ ಎಪಿಎಂಸಿ ಕಾಯ್ದೆಯು ರೈತರ ಹಿತವನ್ನೇ ಪ್ರಧಾನವಾಗಿರಿಸಿಕೊಂಡಿದೆ. ತಿದ್ದುಪಡಿ ಮಾಡುವ ಮೂಲಕ ಖಾಸಗೀಕರಣ ಮಾಡಿದರೆ ಅವರು ತಮ್ಮ ಕಂಪನಿಯ ಲಾಭ ಪರಿಗಣಿಸುತ್ತಾರೆಯೇ ಹೊರತು ರೈತರ ಹಿತವನ್ನಲ್ಲ. ಹೀಗಾಗಿ, ರೈತರ ಹಿತಕ್ಕೆ ಧಕ್ಕೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಅಧಿನಿಯಮಗಳನ್ನು ಗಾಳಿಗೆ ತೂರಿ ಎಪಿಎಂಸಿ ಮಾರುಕಟ್ಟೆಯನ್ನು ಖಾಸಗೀಕರಣ ಮಾಡುವುದದರಿಂದ ಸಮಸ್ತ ರೈತ ಸಮುದಾಯ ಬೀದಿಗೆ ಬಂದು ಕೃಷಿ ವಲಯ ಬಿಕ್ಕಟ್ಟಿಗೆ ಸಿಲುಕುತ್ತದೆ. ಇದರಿಂದ ಆಹಾರ ಉತ್ಪಾದನೆ ಕುಂಠಿತವಾಗಿ ಆಹಾರ ಅಭದ್ರತೆ ಉಂಟಾಗುತ್ತದೆ. ರೈತರ ಮರಣ ಶಾಸನವನ್ನು ಸರ್ಕಾರವೇ ಬರೆದಂತಾಗುತ್ತದೆ. ರೈತರ ಹಕ್ಕು ಕಿತ್ತುಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹರಣ ಮಾಡಿದಂತಾಗುತ್ತದೆ. ಜೊತೆಗೆ ಮಾರುಕಟ್ಟೆಯಲ್ಲಿ ದುಡಿಯುವ ಸಾವಿರಾರು ಕೈಗಳ ಕೆಲಸ ಕಿತ್ತುಕೊಂಡತಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಈಗಾಗಲೇ ಕೃಷಿ ವಲಯ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಈ ಕಾನೂನು ಜಾರಿಯಾದರೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಭದ್ರತೆ ಇಲ್ಲದೆ ಸರ್ಕಾರವೆ ಆತ್ಮಹತ್ಯೆಗೆ ಪ್ರಚೋದನೆ ಕೊಟ್ಟಂತಾಗುತ್ತದೆ. ಇದನ್ನು ಪರಿಗಣಿಸದೆ ಖಾಸಗೀಕರಣಕ್ಕೆ ಮುಂದಾದರೆ ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆ ಅಧ್ಯಕ್ಷ ಸಿದಗೌಡ ಮೋದಗಿ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ರೈತ ಮುಖಂಡರಾದ ಪ್ರಕಾಶ ನಾಯಕ, ಅಡಿವೆಪ್ಪ ಕುಂದರಗಿ, ಉಮೇಶ ಕೊಣ್ಣೂರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.