ADVERTISEMENT

ಕೋರೆ ಕೆರೆಗೆ ಪ್ರವೇಶ ಶುಲ್ಕ: ವಿರೋಧ, ಆದೇಶ ವಾಪಸ್ ಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಮೇ 2019, 12:37 IST
Last Updated 25 ಮೇ 2019, 12:37 IST
ಕೋಟೆ ಕೆರೆ ಪ್ರವೇಶಕ್ಕೆ ಶುಲ್ಕ ನಿಗದಿಪಡಿಸಿ ಹಾಕಿರುವ ಫಲಕ ಹಾಕಲಾಗಿದೆ
ಕೋಟೆ ಕೆರೆ ಪ್ರವೇಶಕ್ಕೆ ಶುಲ್ಕ ನಿಗದಿಪಡಿಸಿ ಹಾಕಿರುವ ಫಲಕ ಹಾಕಲಾಗಿದೆ   

ಬೆಳಗಾವಿ: ಇಲ್ಲಿನ ಕೋಟೆ ಕೆರೆ ದಂಡೆಯಲ್ಲಿ ವಾಯುವಿಹಾರಕ್ಕೆ ಹೋಗುವ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿ, ದಿಢೀರ್‌ ಪ್ರವೇಶ ಶುಲ್ಕ ನಿಗದಿಪಡಿಸಿರುವ ಜಿಲ್ಲಾಧಿಕಾರಿ ಆದೇಶಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಇಲ್ಲಿ ಈವರೆಗೆ ಪ್ರವೇಶ ಶುಲ್ಕವಿರಲಿಲ್ಲ. ಆದರೆ, ನಿಗದಿತ ಸಮಯದಲ್ಲಿ ಮಾತ್ರವೇ ಅವಕಾಶ ನೀಡಲಾಗುತ್ತಿತ್ತು. ನಿತ್ಯ ಸಾವಿರಾರು ಜನ ಇಲ್ಲಿ ವಾಯುವಿಹಾರಕ್ಕೆಂದು ಬರುತ್ತಾರೆ.

ಈಗ, ವಯಸ್ಕರಿಗೆ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ₹ 10, ಮಕ್ಕಳಿಗೆ ₹ 5, ವಾಯುವಿಹಾರಕ್ಕೆ ಹೋಗಲು ಮಾಸಿಕ ಪಾಸ್‌ಗೆ ₹ 100 ನಿಗದಿಪಡಿಸಲಾಗಿದೆ. ಈ ಪಾಸ್ ಪಡೆದವರಿಗೆ ಬೆಳಿಗ್ಗೆ 5ರಿಂದ ರಾತ್ರಿ 8ವರೆಗೆ ಪ್ರವೇಶವಿದೆ. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಈ ಆದೇಶ ಮಾಡಲಾಗಿದೆ ಎಂದು ಸೂಚನಾ ಫಲಕದಲ್ಲಿ ತಿಳಿಸಲಾಗಿದೆ.

ADVERTISEMENT

ಅಸಮಾಧಾನ:

‘ಕೋಟೆ ಕೆರೆ ಬೆಳಗಾವಿಗರ ಹೆಮ್ಮೆಯ ತಾಣ. ಹಿಂದಿನ ಶಾಸಕ ಫಿರೋಜ್ ಸೇಠ್‌ ಅಲ್ಲಿ ಎತ್ತರದ ತ್ರಿವರ್ಣ ಧ್ವಜ ಸ್ತಂಭ ಸ್ಥಾಪನೆ ಮಾಡಿಸಿದ ನಂತರ ಸೌಂದರ್ಯ ಇಮ್ಮಡಿಯಾಗಿದೆ. ನಿತ್ಯ ಸಾವಿರಾರು ಜನರು ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಬರುತ್ತಾರೆ. ಪ್ರೇಮಿಗಳೂ ಅಲ್ಲಲ್ಲಿ ಕುಳಿತು ಹರಟೆ ಹೊಡೆಯುತ್ತಾರೆ. ಇಂತಹ ಕೆರೆ ಆವರಣ ಪ್ರವೇಶಕ್ಕೂ ಜಿಲ್ಲಾಡಳಿತವು ಏಕಾಏಕಿ ಪ್ರವೇಶ ಶುಲ್ಕ ವಿಧಿಸಿ, ಹಣವಂತರಷ್ಟೇ ಒಳಗೆ ಹೋಗಬೇಕು, ಸಮೀಪದ ಆಸ್ಪತ್ರೆಗಳಿಗೆ ಬರುವ ರೋಗಿಗಳು, ಸುತ್ತಲಿನ ಪ್ರದೇಶಗಳ ಸಾಮಾನ್ಯರು ಹೊರಗೇ ನಿಂತು ನೋಡಬೇಕು ಎಂಬ ಧೋರಣೆ ಅನುಸರಿಸಿರುವುದು ಸರಿಯಲ್ಲ’ ಎಂದು ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕೆರೆಗೆ ಇತಿಹಾಸವಿದೆ. 1991ಕ್ಕಿಂತಲೂ ಮೊದಲು ಇದೊಂದು ನಿಸರ್ಗದತ್ತ ಕೆರೆಯಾಗಿತ್ತು. ಸಣ್ಣ ನೀರಾವರಿ ಇಲಾಖೆಗೆ ಸೇರಿತ್ತು. ಮಳೆಗಾಲದಲ್ಲಿ ತುಂಬಿದ ನೀರನ್ನು ಬೇಸಿಗೆಯಲ್ಲಿ ಸಮೀಪದ ಹೊಲಗಳಿಗೆ ಬಿಡಲಾಗುತ್ತಿತ್ತು. 1991ರಲ್ಲಿ ಭರತಲಾಲ ಮೀನಾ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯದರ್ಶಿಯಾಗಿದ್ದಾಗ ಕೆರೆಗೆ ಕಾಯಕಲ್ಪ ದೊರಕಿಸಿದ್ದರು. 60ಕ್ಕೂ ಹೆಚ್ಚಿನ ಸ್ವಯಂ ಸಂಸ್ಥೆಗಳ ಸಾವಿರಾರು ಕಾರ್ಯಕರ್ತರನ್ನು ಒಗ್ಗೂಡಿಸಿದ್ದರು. ಬೇಸಿಗೆ ಸಂದರ್ಭದಲ್ಲಿ ಒಣಗಿದ್ದ ಕೆರೆಯ ಹೂಳು ತೆಗೆಸಿ, ನಡುಗಡ್ಡೆ ಮಾಡಿಸಿದ್ದರು. ಆ ಕೆಲಸದಲ್ಲಿ ನಾನೂ ಭಾಗಿಯಾಗಿದ್ದೆ. ಬಿ. ತಿಪ್ಪೇಸ್ವಾಮಿ, ಮಲ್ಲೇಶ ಚೌಗುಲೆ ಮೊದಲಾದವರೂ ಜೊತೆಗಿದ್ದರು. ನಂತರದ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒದಗಿಸಿದ ನಿಧಿಯಲ್ಲಿ ಕೆರೆಗೆ ಉತ್ತಮ ರೂಪ ಬಂದಿದೆ’ ಎಂದು ನೆನೆದಿದ್ದಾರೆ.

ಶಾಸಕರು ಯೋಚಿಸಬೇಕಿತ್ತು:

‘ಬೋಟಿಂಗ್‌ಗೆ ಶುಲ್ಕ ವಿಧಿಸುವುದು ತಪ್ಪಲ್ಲ. ಆದರೆ, ಕೆರೆಯ ದಂಡೆಯಲ್ಲಿ ಓಡಾಡುವವರಿಗೂ ಶುಲ್ಕವೇಕೆ? ಶಾಸಕ ಅನಿಲ ಬೆನಕೆ ಅವರಿಗೆ ಇಂತಹ ಜನವಿರೋಧಿ ವಿಚಾರ ಬಂದಿದ್ದಾದರೂ ಹೇಗೆ? ಶಾಸಕರು ಪ್ರಸ್ತಾವ ಸಲ್ಲಿಸಿದ್ದರೂ ಜಾರಿಗೆ ಮುನ್ನ ಜಿಲ್ಲಾಧಿಕಾರಿ ಯೋಚಿಸಬೇಕಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಶುಲ್ಕ ವಿಧಿಸುವ ಆದೇಶವನ್ನು ಜಿಲ್ಲಾಡಳಿತ ಕೂಡಲೇ ವಾಪಸ್ ಪಡೆಯಬೇಕು. ಶಾಸಕರು ತಮ್ಮಿಂದಾದ ತಪ್ಪು ತಿದ್ದಿಕೊಳ್ಳಬೇಕು. ಇಲ್ಲವಾದರೆ ಪ್ರತಿಭಟನೆಗಳಿಗೆ ಅವರೇ ಅವಕಾಶ ಕೊಟ್ಟಂತಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಕ್ರಿಯಿಸಿ...

ಕೋಟೆ ಕೆರೆಯ ಪ್ರವೇಶಕ್ಕೆ ಶುಲ್ಕ ವಿಧಿಸಿರುವ ಜಿಲ್ಲಾಡಳಿತದ ಕ್ರಮ ಸರಿಯೋ, ತಪ್ಪೋ? ಈ ಕುರಿತು ಓದುಗರು ಪ್ರತಿಕ್ರಿಯಿಸಬಹುದು. ಅಭಿಪ್ರಾಯಗಳನ್ನು 50 ಪದಗಳಲ್ಲಿ ಕನ್ನಡಲ್ಲಿ ಟೈಪಿಸಿ ನಿಮ್ಮ ಫೋಟೊ, ಹೆಸರು, ವಿಳಾಸದೊಂದಿಗೆ ಕಳುಹಿಸಿ. ಆಯ್ದ ಬರಹಗಳನ್ನು ‘ಪ್ರಜಾವಾಣಿ’ಯಲ್ಲಿ ಪ್ರಕಟಿಸಲಾಗುವುದು.

ಮೊಬೈಲ್:99802 04200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.