ADVERTISEMENT

ಕಳಸಾ ಬಂಡೂರಿ ಯೋಜನೆಗೆ ಭೂಮಿ: ವಿರೋಧ

ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ರೈತರಿಂದ ಮನವಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 16:40 IST
Last Updated 31 ಆಗಸ್ಟ್ 2021, 16:40 IST
ಖಾನಾಪುರ ತಾಲ್ಲೂಕಿನಲ್ಲಿ ಕೃಷಿ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಹಾಗೂ ಸ್ಥಳೀಯರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು‍ಪ್ರಜಾವಾಣಿ ಚಿತ್ರ
ಖಾನಾಪುರ ತಾಲ್ಲೂಕಿನಲ್ಲಿ ಕೃಷಿ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಹಾಗೂ ಸ್ಥಳೀಯರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು‍ಪ್ರಜಾವಾಣಿ ಚಿತ್ರ   

ಬೆಳಗಾವಿ: ಕಳಸಾ ಬಂಡೂರಿ ನಾಲೆ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ ಭೂಮಿ ನೀಡಲು ಖಾನಾಪುರ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.

ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.

‘ಖಾನಾಪುರ ತಾಲ್ಲೂಕಿನ 6 ಹಳ್ಳಿಗಳ ಸಾವಿರಾರು ಎಕರೆ ಭೂಮಿಯನ್ನು ಈಗಾಗಲೇ ಸರ್ಕಾರ ವಿವಿಧ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗಿದೆ. ಈಗ ಕಳಸಾ ಬಂಡೂರಿ ಯೋಜನೆ ಸಂಬಂಧ ಮತ್ತೆ 400 ಎಕರೆ ಭೂಮಿ ಪಡೆಯಲು ಮುಂದಾಗಿರುವುದು ಸರಿಯಲ್ಲ. ಈ ರೀತಿ ಸರ್ಕಾರವು ಭೂಮಿಯನ್ನು ಕಸಿದುಕೊಳ್ಳುತ್ತಾ ಹೋದರೆ ಅಲ್ಲಿನ ಜನರು ಎಲ್ಲಿಗೆ ಹೋಗಿ ಬದುಕಬೇಕು?’ ಎಂದು ಅಂಜಲಿ ಪ್ರಶ್ನಿಸಿದರು.

ADVERTISEMENT

ಈ ವಿಷಯವಾಗಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದ ಅವರು ಮಾಧ್ಯಮ ಪ್ರತಿನಿಧಿಳೊಂದಿಗೆ ಮಾತನಾಡಿದರು.

‘ದೇವಾಚಿಹಟ್ಟಿ, ಗೊಲ್ಯಾಳಿ, ಬೈಲೂರು, ತೋರಾಳಿ, ಅಂಬೋಳಿ, ಹಬ್ಬಾನಟ್ಟಿ, ಮತ್ತು ಆಮಟೆ ಗ್ರಾಮಗಳಲ್ಲಿ ಸುಮಾರು 2ಸಾವಿರ ಎಕರೆ ಹೆಚ್ಚುವರಿ ಭೂಮಿ ಇದೆ. ಇದರಲ್ಲಿ ಕೌಂಟರ್ ಇನ್ಸರ್‌ಜೆನ್ಸಿ ಆಂಡ್ ಆ್ಯಂಟಿ ಟೆರರಿಸ್ಟ್ ಸ್ಕೂಲ್ ಸ್ಥಾಪಿಸಲು ಮತ್ತು ಸಿಆರ್‌ಪಿಎಫ್‌ನವರಿಗೆ ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಸಾವಿರಾರು ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಈಗ ಸಾವಿರ ಎಕರೆ ಭೂಮಿ ಮಾತ್ರ ಉಳಿದಿದೆ. ಈ ಜಮೀನಿನಲ್ಲಿ ರೈತರು ಉಳುಮೆ ಮಾಡಿಕೊಂಡು ಉಪ ಜೀವನ ಸಾಗಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಈಗ ಮತ್ತೆ ಕಳಸಾ ಬಂಡೂರಿ ಯೋಜನೆ ಸಂಬಂಧ ಅರಣ್ಯ ಇಲಾಖೆಗೆ 400ಕ್ಕೂ ಹೆಚ್ಚು ಎಕರೆ ಭೂಮಿಯನ್ನು ವರ್ಗಾವಣೆ ಮಾಡುವ ಸಂಬಂಧ ಸ್ಪಷ್ಟ ಅಭಿಪ್ರಾಯ ತಿಳಿಸುವಂತೆ ಜಿಲ್ಲಾಧಿಕಾರಿ ಕಚೇರಿಯಿಂದ ಖಾನಾಪುರ ತಹಶೀಲ್ದಾರ್‌ಗೆ ಪತ್ರ ಬಂದಿದೆ. ಇದರಿಂದ ಭೂಮಿ ಕಳೆದುಕೊಳ್ಳುವ ಭೀತಿಗೆ ಒಳಗಾಗಿದ್ದಾರೆ’ ಎಂದು ಹೇಳಿದರು.

‘ಈ ಗ್ರಾಮಗಳ ಸುತ್ತಲಿನ ಅರಣ್ಯ ಪ್ರದೇಶದ ರೈತರು ಕಾಡುಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಮತ್ತು ತಮ್ಮ ಜಮೀನುಗಳಿಗೆ ಅರಣ್ಯ ಪ್ರದೇಶದಲ್ಲಿ ಓಡಾಡಲು ಕಷ್ಟಪಡುತ್ತಿದ್ದಾರೆ. ಹೀಗಿರುವಾಗ ಕೃಷಿ ಮಾಡುತ್ತಿರುವ ಜಮೀನುಗಳನ್ನು ಕಸಿದುಕೊಂಡು ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸದರೆ ಇಲಾಖೆಯವರೊಂದಿಗೆ ಪ್ರತಿ ನಿತ್ಯವೂ ಸೆಣಸಬೇಕಾಗುತ್ತದೆ. ಇಲ್ಲವಾದಲ್ಲಿ ಊರುಗಳನ್ನು ತೊರೆಯಬೇಕಾದ ಪರಿಸ್ಥಿತಿ ಬಂದೊದಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಹೀಗಾಗಿ, ಯಾವುದೇ ಕಾರಣಕ್ಕೂ ಭೂಮಿಯನ್ನು ಪಡೆಯಬಾರದು. ಈ ಸರ್ಕಾರ ಭೂಮಿಯನ್ನು ದಶಕಗಳಿಂದ ಉಳುಮೆ ಮಾಡುತ್ತಿರುವ ರೈತರಿಗೇ ಮಂಜೂರು ಮಾಡಿಕೊಡಬೇಕು. ಉಳುಮೆ ಮಾಡದಿರುವ ಜಾಗವನ್ನು ಅರಣ್ಯ ಇಲಾಖೆಗೆ ವಹಿಸುವ ಬದಲಿಗೆ ಶಾಲೆ, ಕಾಲೇಜು, ಸ್ಮಶಾನ, ಆಟದ ಮೈದಾನದ ಮೊದಲಾದ ಮೂಲಸೌಕರ್ಯ ಅಭಿವೃದ್ಧಿಪಡಿಸುವುದಕ್ಕಾಗಿ ಮೀಸಲಿಡಬೇಕು’ ಎಂದು ಕೋರಿದರು.

‘ಈಗಾಗಲೇ ತಾಲ್ಲೂಕಿನ ಜಾಂಬೋಟಿ ಭಾಗದ ಹಳ್ಳಿಗಳಲ್ಲಿ ರಸ್ತೆ, ವಿದ್ಯುತ್, ಸೇತುವೆಗಳನ್ನು ನಿರ್ಮಾಣ ಮಾಡಲು ನಮಗೆ ಕಷ್ಟ ಆಗುತ್ತಿದೆ. ಸರ್ಕಾರದಿಂದ ಮಂಜೂರಾದ ಅನುದಾನದಲ್ಲಿ ಕೆಲಸ ಮಾಡುವುದಕ್ಕೂ ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ಕೊಡುತ್ತಿಲ್ಲ. ಈ ರೀತಿ ಭೂಮಿಯನ್ನು ವಶಕ್ಕೆ ಪಡೆದರೆ ಜನರು ಎಲ್ಲಿಗೆ ಹೋಗಬೇಕು?’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.