ಮೂಡಲಗಿ: ತಾಲ್ಲೂಕಿನ ರಾಜಾಪುರ ಗ್ರಾಮದ ಚಿದಾನಂದ ಪರಸಪ್ಪ ಪವಾರ ಅವರ ತೋಟಕ್ಕೆ ಕಾಲಿಡುತ್ತಿದ್ದಂತೆ, ಒಂದೆಡೆ ಬಯೋಡೈಜಿಸ್ಟ್ ಘಟಕ, ಎರೆಹುಳು ತೊಟ್ಟಿ ಕಾಣುತ್ತದೆ. ಇನ್ನೊಂದೆಡೆ ಜೀವಾಮೃತ, ಗೋಕೃಪಾಮೃತ, ಪಂಚಗವ್ಯ, ಅಮೃತ ಪಾನಿ, ಗೊಬ್ಬರ ಎಲೆ, ಬೇವಿನ ಎಲೆ ಮತ್ತು ಚದರಂಗಿ ಎಲೆ ಕಷಾಯ ಶೇಖರಿಸಿದ ಡ್ರಮ್‌ಗಳ ಸಾಲು ಕಣ್ಣಿಗೆ ಬೀಳುತ್ತದೆ.
ಕಳೆದ 18 ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಿರುವ ಚಿದಾನಂದ ಮತ್ತು ಅವರ ಕುಟುಂಬದವರು, ಇದಕ್ಕೆ ಅಗತ್ಯವಿರುವ ಎಲ್ಲ ಪರಿಕರಗಳನ್ನು ತೋಟದಲ್ಲಿ ವ್ಯವಸ್ಥಿತವಾಗಿ ಸಿದ್ಧಪಡಿಸಿಕೊಂಡಿದ್ದಾರೆ. ಇದು ಸಾವಯವ ಕೃಷಿ ಮೇಲೆ ಅವರಿಗಿರುವ ಬದ್ಧತೆ ತೋರಿಸುತ್ತದೆ.
‘ಸಾವಯವ ಕೃಷಿಯ ಆರಂಭಿಕ ಎರಡು ವರ್ಷ ಉತ್ತಮ ಇಳುವರಿ ಇರಲಿಲ್ಲ. ಕುಟುಂಬದವರ ನಿಂದನೆ ಸಹಿಸಿಕೊಳ್ಳಬೇಕಾಯಿತು. ಮುಂದೆ ಉತ್ತಮ ಇಳುವರಿ ಜತೆಗೆ, ಉತ್ತಮ ಆದಾಯವೂ ಶುರುವಾಯಿತು. ಈಗ ಎಲ್ಲರಿಂದ ಮೆಚ್ಚುಗೆ ಸಿಗುತ್ತಿದೆ’ ಎಂದು ಚಿದಾನಂದ ಪವಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
9 ಎಕರೆ ಜಮೀನು ಹೊಂದಿರುವ ಅವರು, ಸಾಂಪ್ರದಾಯಿಕ ಬೆಳೆಗಳಾದ ಕಬ್ಬು, ಗೋವಿನಜೋಳಕ್ಕೆ ವಿದಾಯ ಹೇಳಿದ್ದಾರೆ. ಪಪ್ಪಾಯಿ, ಅರಿಸಿನ, ಪೇರು, ಮಾವಿನೊಂದಿಗೆ ವಿವಿಧ ಅಂತರ್ ಬೆಳೆ ಬೆಳೆದು ಪ್ರತಿ ಎಕರೆಗೆ ₹5 ಲಕ್ಷದಿಂದ ₹6 ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಇದಲ್ಲದೆ, ಇದೇ ವರ್ಷ ಒಂದು ಎಕರೆಯಲ್ಲಿ ಲೇಮನ್ ಟೀ ಗ್ರಾಸ್ ಬೆಳೆದಿದ್ದಾರೆ. ಐದೇ ತಿಂಗಳಲ್ಲಿ ಮೊದಲ ಹಂತದಲ್ಲಿ ಎರಡು ಟನ್ ಬೆಳೆದು, ₹2 ಲಕ್ಷ ಆದಾಯ ಪಡೆದಿದ್ದಾರೆ. ಎರಡನೇ ಹಂತದಲ್ಲಿ ಮತ್ತೆ 4 ಟನ್ ಬೆಳೆದಿದ್ದು, ₹4 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಕೈ ಹಿಡಿದ ಪಪ್ಪಾಯಿ: 2017ರಿಂದ ಎರಡು ಎಕರೆಯಲ್ಲಿ ತೈವಾನದ ರೆಡ್‌ಲೇಡಿ ತಳಿಯ ಪಪ್ಪಾಯಿ ಬೆಳೆದಿದ್ದಾರೆ. ಎಕರೆಗೆ 45ರಿಂದ 50 ಟನ್ ಇಳುವರಿ ಇದೆ. ಕಂಪನಿಯವರು ತೋಟಕ್ಕೇ ಬಂದು, ಟನ್‌ಗೆ ₹12 ಸಾವಿರ ದರದಲ್ಲಿ ಖರೀದಿಸುತ್ತಾರೆ. ಎಲ್ಲ ಖರ್ಚು ತೆಗೆದು, ಎಕರೆಗೆ ₹3.50 ಲಕ್ಷ ಆದಾಯ ಕೈಗೆಟುಕುತ್ತಿದೆ. ಪಪ್ಪಾಯಿ ಎಲೆಗೂ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಹಾಗಾಗಿ ಎಲೆ ಒಣಗಿಸಿ ಟನ್‌ಗೆ ₹1.50 ಲಕ್ಷ ದರದಲ್ಲಿ ಮಾರಲಾಗುತ್ತಿದೆ.
‘ಪಪ್ಪಾಯಿಯೊಂದಿಗೆ ಮಿಶ್ರ ಬೆಳೆಯಾಗಿ ಕಲ್ಲಂಗಡಿ, ಚೆಂಡು ಹೂವು ಬೆಳೆದಿದ್ದೇನೆ. ಒಂದೇ ವರ್ಷದಲ್ಲಿ ಅವುಗಳಿಂದ ₹2 ಲಕ್ಷ ಆದಾಯ ಬಂದಿದೆ. ಸಾವಯವ ಪದ್ಧತಿಯಲ್ಲೇ ಅರಿಸಿನ ಬೆಳೆದಿದ್ದು, ಎಕರೆಗೆ 35 ಕ್ವಿಂಟಲ್ ಇಳುವರಿ ಬರುತ್ತಿದೆ’ ಎನ್ನುತ್ತಾರೆ ಚಿದಾನಂದ.
ಪಪ್ಪಾಯ ಕೃಷಿಯಲ್ಲಿ ಮಾಡಿದ ಸಾಧನೆಗಾಗಿ ಮುಂಬೈನ ‘ಆಸ್ಪೀ’ ಅಗ್ರಿಕಲ್ಚರ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಫೌಂಡೇಷನ್‌ನವರು ಚಿದಾನಂದ ಪವಾರ ಅವರಿಗೆ ಈಚೆಗೆ ‘ವರ್ಷದ ಕೃಷಿಕ’ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಸಾವಯವ ಕೃಷಿಯಲ್ಲಿನ ಸಾಧನೆಗಾಗಿ ಕೃಷಿ ಇಲಾಖೆ, ಧಾರವಾಡದ ಕೃಷಿ ವಿಶ್ವವಿದ್ಯಾಲಯ ಮತ್ತು ವಿವಿಧ ಸಂಘ–ಸಂಸ್ಥೆಯವರು ಪ್ರಶಸ್ತಿ ನೀಡಿದ್ದಾರೆ. ಸಂಪರ್ಕಕ್ಕೆ 7411857315.
ಕೃಷಿಯಲ್ಲಿ ಹೊಸ ಪ್ರಯೋಗದ ಮೂಲಕ ಹೆಚ್ಚಿನ ಆದಾಯ ಗಳಿಸುವುದು ಹೇಗೆ ಎಂಬ ಕಲೆ ಚಿದಾನಂದ ಅವರಿಗೆ ಒಲಿದಿದೆ.– ಪರುಶರಾಮ ಪಾಟೀಲ, ತೋಟಗಾರಿಕೆ ವಿಜ್ಞಾನಿ ಕೃಷಿ ವಿಜ್ಞಾನ ಕೇಂದ್ರ ತುಕ್ಕಾನಟ್ಟಿ
ವ್ಯವಸ್ಥಿತವಾದ ಕೊಟ್ಟಿಗೆ
ನಾಲ್ಕು ದೇಸಿಯ ಆಕಳು ಐದು ಎಮ್ಮೆ ನಾಲ್ಕು ಟಗರು ಸಾಕಿರುವ ಚಿದಾನಂದ ವ್ಯವಸ್ಥಿತವಾದ ಕೊಟ್ಟಿಗೆ ನಿರ್ಮಿಸಿದ್ದಾರೆ. ಅವುಗಳ ಸಗಣಿ ಗೆಂಜಲು ಜಾನುವಾರುಗಳ ಮೈತೊಳೆದ ನೀರನ್ನು ಹನಿ ನೀರಾವರಿ ಪದ್ಧತಿ ಮೂಲಕ ಬೆಳೆಗೆ ಉಣಿಸುತ್ತಾರೆ. 30ಕ್ಕೂ ಅಧಿಕ ಕೋಳಿ ಸಾಕಿದ್ದಾರೆ. ಪ್ರತಿಬಾರಿ ನಾಟಿ ಪೂರ್ವದಲ್ಲಿ ಎಕರೆಗೆ 15 ಡಬ್ಬಿ ಸಗಣಿ ಗೊಬ್ಬರ ಹಾಕಿ ಭೂಮಿ ಸಿದ್ಧಗೊಳಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.