ADVERTISEMENT

ಪಾದಯಾತ್ರೆಗೆ ಮುನ್ನ ಬೇಡಿಕೆ ಈಡೇರಿಸಿ

ಸರ್ಕಾರಕ್ಕೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 17:06 IST
Last Updated 19 ಡಿಸೆಂಬರ್ 2020, 17:06 IST
ಬಸವ ಜಯ ಮೃತ್ಯುಂಜಯ ಸ್ವಾಮೀಜಿ
ಬಸವ ಜಯ ಮೃತ್ಯುಂಜಯ ಸ್ವಾಮೀಜಿ   

ಬೆಳಗಾವಿ: ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಜ. 14ರಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲಾಗುವುದು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

‘ಜ. 14ರಂದು ಕೂಡಲಸಂಗಮದಲ್ಲಿ ನಡೆಯುವ ಕೃಷಿ ಸಂಕ್ರಾತಿ ಕಾರ್ಯಕ್ರಮದ ವೇದಿಕೆಯಲ್ಲೇ ಪಾದಯಾತ್ರೆಗೆ ಚಾಲನೆ ನೀಡಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.

‘ಮತ್ತೊಮ್ಮೆ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡುತ್ತೇವೆ. ಸದ್ಯಕ್ಕೆ ಹೋರಾಟ ಬೇಡವೆಂದುಸಚಿವ ಸಿ.ಸಿ. ಪಾಟೀಲ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೋರಿದ್ದರಿಂದ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಯೂ ಬಂದಿದ್ದರಿಂದ ಪಾದಯಾತ್ರೆ ಮುಂದೂಡಿದ್ದೇವೆ. ಇಲ್ಲವಾಗಿದ್ದಲ್ಲಿ ಈ ವೇಳೆಗಾಗಲೇ ಹೋರಾಟ ಆರಂಭವಾಗಿರುತ್ತಿತ್ತು’ ಎಂದು ಹೇಳಿದರು.

ADVERTISEMENT

ರಕ್ತ ದಾನ ಚಳವಳಿ:

‘ಸಮಾಜದ ಯುವಕರು ಡಿ. 23ರಂದು ರಕ್ತ ದಾನ ಚಳವಳಿ ಮೂಲಕ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಗಮನಸೆಳೆಯಲಿದ್ದಾರೆ. ಡಿ.22ರಂದು ನಾನೂ ದಾವಣಗೆರೆಯಲ್ಲಿ ರಕ್ತ ದಾನ ಮಾಡಿ ಹೋರಾಟಕ್ಕೆ ಚಾಲನೆ ಕೊಡಲಿದ್ದೇನೆ. ಬಳಿಕ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ. ಅದಕ್ಕೆ ಮುನ್ನವೆ ಮುಖ್ಯಮಂತ್ರಿ ಸ್ಪಂದಿಸಬೇಕು. ಕೇಂದ್ರದಲ್ಲಿ ಒಬಿಸಿ ಪಟ್ಟಿಗೆ ಸೇರಿಸುವುದಕ್ಕೂ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಅಧ್ಯಯನ ಮಾಡಿ ಚರ್ಚಿಸಲಿ:‘ಅಧ್ಯಯನದ ಕೊರತೆ ಮತ್ತು ತಪ್ಪು ಮಾಹಿತಿಯಿಂದಾಗಿ ಕೆಲವರು ಲಿಂಗಾಯತ ಧರ್ಮ ಹೋರಾಟ ವಿರೋಧಿಸುತ್ತಿದ್ದಾರೆ. ಅಂಥವರು ವಚನ ಸಾಹಿತ್ಯ ಅಧ್ಯಯನ ಮಾಡಿ ಮತ್ತು ಸತ್ಯಾಸತ್ಯತೆ ತಿಳಿದು ಚರ್ಚಿಸಬೇಕು’ ಎಂದು ಸಲಹೆ ನೀಡಿದರು.

‘ಲಿಂಗಾಯತ ಧರ್ಮದ ಹೋರಾಟದಲ್ಲಿ ನಾವು ಪಾಲ್ಗೊಳ್ಳಬಾರದಿತ್ತು. ಅದಕ್ಕಾಗಿ ಈಗಾಗಲೇ ಕ್ಷಮೆ ಕೇಳಿದ್ದೇವೆ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಕ್ತಾರೆ ಲಕ್ಷ್ಮಿ ಹೆಬ್ಬಾಳಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅವರಿಗೆ ಅಧ್ಯಯನದ ಕೊರತೆ ಇರಬಹುದು. 12ನೇ ಶತಮಾನದಲ್ಲಿ ಬಸವಣ್ಣ ಅವರು ವೈದಿಕ ಧರ್ಮ ಮತ್ತು ವರ್ಣಾಶ್ರಮದ ವಿರುದ್ಧ ಹುಟ್ಟು ಹಾಕಿದ ಧರ್ಮವೇ ಲಿಂಗಾಯತ ಧರ್ಮ. ಹೊಸ ಧರ್ಮ ಕಟ್ಟುತ್ತಿದ್ದಾರೆ ಎಂದು ಬಹಳಷ್ಟು ಮಂದಿ ತಿಳಿದಿದ್ದರಿಂದ ಗೊಂದಲವಾಗಿದೆ. ನಾವು ಹೊಸದಾಗಿ ಧರ್ಮ ಕೇಳುತ್ತಿಲ್ಲ. ಹಿಂದೆಯೇ ಸ್ಥಾಪನೆಯಾಗಿರುವುದಕ್ಕೆ ಸಾಂವಿಧಾನಿಕ ಮಾನ್ಯತೆಗೆ ಆಗ್ರಹಿಸುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಮುಖಂಡ ಬಸವರಾಜ ರೊಟ್ಟಿ, ‘ಡಿ. 23ರಂದು ಬಸವ ಜಯ ಮೃತ್ಯುಂಜಯ ಶ್ರೀಗಳ ಜನ್ಮದಿನ ಮತ್ತು ರೈತ ದಿನದ ಅಂಗವಾಗಿ ವಿಜಯಾ ಆಸ್ಪತ್ರೆಯಲ್ಲಿ ರಕ್ತ ದಾನ ಶಿಬಿರ ನಡೆಸಲಾಗುವುದು’ ಎಂದು ತಿಳಿಸಿದರು.

ಮುಖಂಡ ರುದ್ರಣ್ಣ ಚಂದರಗಿ ಇದ್ದರು.

***

ಧರ್ಮದ ಮಾನ್ಯತೆಗಾಗಿ ಹಾಗೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಹೋರಾಟದಲ್ಲಿ ಗೊಂದಲವಿಲ್ಲ. ಎರಡೂ ಸಮಾಜದ ಒಳಿತಿಗಾಗಿಯೇ ನಡೆಯುತ್ತಿವೆ.ಕೆಲವರು ವಿನಾಕಾರಣ ಗೊಂದಲ ಸೃಷ್ಟಿಸುವುದನ್ನು ಬಿಡಬೇಕು
-ಬಸವ ಜಯ ಮೃತ್ಯುಂಜಯ ಸ್ವಾಮೀಜಿ,ಲಿಂಗಾಯತ ಪಂಚಮಸಾಲಿ ಪೀಠ, ಕೂಡಲಸಂಗಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.