ರಾಷ್ಡ್ರೀಯ ಹೆದ್ದಾರಿ ಬಂದ್ ಮಾಡಿ ಧರಣಿ
ಹಿರೇಬಾಗೇವಾಡಿ (ಬೆಳಗಾವಿ ಜಿಲ್ಲೆ): ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಿದ ಸರ್ಕಾರದ ಕ್ರಮ ಖಂಡಿಸಿ, ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಕೂಡ ಅರ್ಧ ತಾಸು ರಸ್ತೆ ತಡೆ ನಡೆಸಲಾಯಿತು.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ, ಹಿರೇಬಾಗೇವಾಡಿ ಟೋಲ್‌ಗೇಟ್ ಬಳಿ ಧರಣಿ ಕುಳಿತರು.
ಸ್ವಾಮೀಜಿ ಮೇಲೆ ಲಾಠಿ ಬೀಸಿದ ಸರ್ಕಾರಕ್ಕೆ ಧಿಕ್ಕಾರ, ಲಿಂಗಾಯತ ವಿರೋಧಿ ಸಿದ್ದರಾಮಯ್ಯಗೆ ಧಿಕ್ಕಾರ, ಕೊಲೆಗಡುಕ ಸರ್ಕಾರಕ್ಕೆ ಧಿಕ್ಕಾರ, ಲಾಠಿ ಬೀಸಿದ ಪೊಲೀಸರಿಗೆ ಧಿಕ್ಕಾರ, ಮುಖ್ಯಮಂತ್ರಿ ಕ್ಷಮೆ ಕೇಳಲೇಬೇಕು ಎಂದು ನಿರಂತರ ಘೋಷಣೆ ಕೂಗಿದರು.
ಸ್ವತಃ ಸ್ವಾಮೀಜಿ ಹೆದ್ದಾರಿ ಮಧ್ಯದಲ್ಲೇ ನೆಲದ ಮೇಲೆ ಕುಳಿತರು. ಆ ಕ್ಷಣಕ್ಕೆ ಧಾವಿಸಿ ಬಂದ ಕಾರ್ಯಕರ್ತರೆಲ್ಲರೂ ಸಾಲಾಗಿ ಕುಳಿತರು. ಇದರಿಂದ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಯಿತು. ಒಂದು ತಾಸಿಗೂ ಹೆಚ್ಚು ಸಮಯ ಬಂದ್ ಮಾಡಿದ್ದರಿಂದ ಕಿಲೋಮೀಟರ್ ಗಟ್ಟಲೇ ವಾಹನಗಳು ಸಾಲಾಗಿ ನಿಂತವು.
ಸಿದ್ದರಾಮಯ್ಯ ಕ್ಷಮೆ ಕೇಳಲೇಬೇಕು, ಹೋರಾಟಗಾರರ ಮೇಲೆನ ಹಾಕಿದ ಪ್ರಕರಣ ಹಿಂಪಡೆಯಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.
ಬಳಿಕ ಸ್ಥಳಕ್ಕೆ ಬಂದ ಡಿಸಿಪಿ ರೋಹನ್ ಜಗದೀಶ್ ಧರಣಿ ಕೈ ಬಿಡುವಂತೆ ಸ್ವಾಮೀಜಿ ಅವರಲ್ಲಿ ಮನವಿ ಮಾಡಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಷ್ಟು ವಾಹನಗಳಿಗೆ ತೊಂದರೆಯಾಗಿದೆ. ನಾಲ್ಕು ಆಂಬುಲೆನ್ಸ್‌ಗಳೂ ಮಾರ್ಗಮಧ್ಯೆ ಸಿಕ್ಕಿಕೊಂಡಿವೆ. ಅಂಗಾಂಗ ಸಾಗಣೆ ಮಾಡುವ ಆಂಬುಲೆನ್ಸ್ ಕೂಡ ನಿಂತಿದೆ. ಈಗ ಸಮಯ ಬಹಳ ಮಹತ್ವದ್ದು. ದಯವಿಟ್ಟು ಧರಣಿ ಬಿಟ್ಟು, ಸಂಚಾರಕ್ಕೆ ಅನುವು ಮಾಡಿ ಕೊಡಬೇಕು ಎಂದರು. ಅದಕ್ಕೆ ಸ್ವಂದಿಸಿದ ಸ್ವಾಮೀಜಿ ಧರಣಿ ಹಿಂಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.