
ಸವದತ್ತಿ: ನವದೆಹಲಿ ಕೇಂದ್ರ ಸಂಸ್ಕೃತಿ ಸಚಿವಾಲಯ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಗಳಿಂದ ಜ. 24ರಿಂದ ಫೆ. 2ರವರೆಗೆ ಸಂಜೆ 7 ಗಂಟೆಗೆ ಇಲ್ಲಿನ ಕೋಟೆ ಆವರಣದಲ್ಲಿ ಪರಸಗಡ ನಾಟಕೋತ್ಸವ ಜರುಗಲಿದೆ.
ರಂಗಾರಾಧನಾ ಸಂಸ್ಥೆಯ 29ನೇ ವರ್ಷಆಚರಣೆ ಅಂಗವಾಗಿ 10 ನಾಟಕಗಳು ರಂಗಾಸಕ್ತರನ್ನು ರಂಜಿಸಲಿವೆ. ಮೊದಲ ದಿನ ಜ.24ರಂದು ರಂಗ ಆರಾಧನದಿಂದ ಝಕೀರ ನದಾಫ ನಿರ್ದೇಶನದ ‘ಬಿರುಕು’, 25ಕ್ಕೆ ‘ಮಾಂತ ಮಲ್ಲಯ್ಯ ಘೇ’, 26ಕ್ಕೆ ಧಾರವಾಡ ರಂಗಾಯಣದಿಂದ ಡಾ.ಪ್ರಕಾಶ ಗರುಡ ನಿರ್ದೇಶಿಸಿದ ‘ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ ರಂಗ ರೂಪ’, 27 ಕ್ಕೆ ಬೆಳಗಾವಿಯ ವೇನಾಸಂದಿಂದ ಬಾಬಾಸಾಹೇಬ ಕಾಂಬಳೆ ನಿರ್ದೇಶಿಸಿದ ‘ಸಾಹೇಬರು ಸಾಕದ ನಾಯಿ’, 28 ಕ್ಕೆ ಉಡುಪಿಯ ಸುಮನಸಾ ಕೊಡವೂರು ಇವರಿಂದ ವಿದ್ದು ಉಚ್ಚಿಲ ನಿರ್ದೇಶಿಸಿದ ‘ಈದಿ’, 29 ಕ್ಕೆ ‘ಶಿಕಾರಿ’, 30 ಕ್ಕೆ ಧಾರವಾಡ ರಂಗ ಸಾಮ್ರಾಟದಿಂದ ಸಿಕಂದರ ದಂಡಿನ ನಿರ್ದೇಶನದ ‘ಅಪ್ಪಾ ಅವ್ವಾ ಡಾಟ್ ಕಾಮ್’, 31 ಕ್ಕೆ ಸಾಣೇಹಳ್ಳಿ ಶಿವಸಂಚಾರದಿಂದ ಜಗದೀಶ ಆರ್. ನಿರ್ದೇಶನದ ‘ಜಂಗಮದೆಡೆಗೆ’, ಫೆ. 1 ರಂದು ನಾಟ್ಯ ಭೂಷಣ ಏಣಗಿ ಬಾಳಪ್ಪ ಸ್ಮರಣಾರ್ಥ ವೈ.ಡಿ. ಬದಾಮಿ ನಿರ್ದೇಶಿಸಿದ ‘ಶಿವಯೋಗಿ ಸಿದ್ಧರಾಮೇಶ್ವರ’ ಮತ್ತು 2 ಕ್ಕೆ ಕೃಷ್ಣಮೂರ್ತಿ ಮೂಡಬಾಗಿಲು ನಿರ್ದೇಶಿಸಿದ ‘ಕಳ್ಳರ ಸಂತೆ’ ನಾಟಕಗಳು ಪ್ರದರ್ಶನಗೊಳ್ಳಲಿವೆ.
ನಾಟಕೋತ್ಸವದ ಮೊದಲ ದಿನ ಉದ್ಘಾಟನೆಯನ್ನು ಶಾಸಕ ವಿಶ್ವಾಸ್ ವೈದ್ಯ ನೆರವೇರಿಸಲಿದ್ದಾರೆ. ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರ, ಶಿರಸ್ತೇದಾರ ಶಶಿರಾಜ ವನಕೆ, ಸಿಡಿಪಿಓ ಅಮೃತ ಸಾಣಿಕೊಪ್ಪ, ಸಾಹಿತಿ ಯ.ರು. ಪಾಟೀಲ, ಚಂದ್ರಣ್ಣ ಶಾಮರಾಯನವರ, ಡಾ ಹೇಮಂತ ಭಸ್ಮೆ, ಅರುಣ ಸುಳ್ಳದ, ರುದ್ರಪ್ಪ ಶಿಂಧೆ ಹಾಗೂ ಪ್ರಮುಖರು ವೇದಿಕೆಯಲ್ಲಿ ಇರಲಿದ್ದಾರೆ. ದಿ. ಚಂದ್ರಕಾಂತ ಸುಳ್ಳದ ಅವರ ಸ್ಮರಣಾರ್ಥ ನೀಡುವ ‘ರಂಗ ಚಂದ್ರ ಪ್ರಶಸ್ತಿ’ ಧಾರವಾಡ ರಂಗಕರ್ಮಿ ವಿಶ್ವೇಶ್ವರಿ ಹಿರೇಮಠ, ದಿ. ವಿ.ಆರ್. ಕಾರದಗಿ ಅವರ ಸ್ಮರಣಾರ್ಥ ನೀಡುವ ‘ರಂಗ ಆರಾಧಕ ಪ್ರಶಸ್ತಿ’ ರಂಗಕರ್ಮಿ ರಜನಿ ಪ್ರಕಾಶ ಗರುಡ ಮತ್ತು ರುದ್ರಪ್ಪ ರಾಜಪ್ಪ ಶಿಂಧೆ ಇವರಿಂದ ‘ರಂಗ ಆರಾಧಕ ಪ್ರಶಸ್ತಿ’ ಡಾ. ಪ್ರಕಾಶ ಗರುಡ ಅವರಿಗೆ ನೀಡಲಾಗುವುದು.
ಫೆ. 1ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ, ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಬಿಡಿಸಿಸಿ ನಿರ್ದೇಶಕ ವಿರೂಪಾಕ್ಷ ಮಾಮನಿ, ಸುಭಾಸ ಏಣಗಿ, ಪಲ್ಲವಿ ಪದಕಿ, ಡಾ. ಸವಿತಾ ಸಬನೀಸ ಹಾಗೂ ಪ್ರಮುಖರು ಪಾಲ್ಗೊಳ್ಳಲಿದ್ದಾರೆಂದು ರಂಗ ಆರಾಧನಾ ಪ್ರಮುಖ ಝಕೀರ ನದಾಫ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.