ADVERTISEMENT

ಬೆಳಗಾವಿ: ಭಾಗಶಃ ಲಾಕ್‌ಡೌನ್‌ ದಿಢೀರ್ ಜಾರಿ

ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸಿದ್ದಕ್ಕೆ ವರ್ತಕರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 11:04 IST
Last Updated 22 ಏಪ್ರಿಲ್ 2021, 11:04 IST
ಬೆಳಗಾವಿಯಲ್ಲಿ ಗುರುವಾರ ಪೊಲೀಸರ ಸೂಚನೆಯಂತೆ ವರ್ತಕರೊಬ್ಬರು ತಮ್ಮ ಮಳಿಗೆ ಮುಚ್ಚಿದರುಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಗುರುವಾರ ಪೊಲೀಸರ ಸೂಚನೆಯಂತೆ ವರ್ತಕರೊಬ್ಬರು ತಮ್ಮ ಮಳಿಗೆ ಮುಚ್ಚಿದರುಪ್ರಜಾವಾಣಿ ಚಿತ್ರ   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಮಧ್ಯಾಹ್ನದಿಂದಲೇ ಜಾರಿಗೆ ಬರುವಂತೆ ಭಾಗಶಃ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಇದರ ಭಾಗವಾಗಿ ಪೊಲೀಸರು ಮಾರುಕಟ್ಟೆ ಪ್ರದೇಶಗಳಲ್ಲಿ ಅಂಗಡಿಗಳನ್ನು ದಿಢೀರನೆ ಬಂದ್ ಮಾಡಿಸಿದರು. ಇದರಿಂದ ವ್ಯಾಪಾರಿಗಳು, ಸಾರ್ವಜನಿಕರು ಆತಂಕಕ್ಕೆ ಒಳಗಾದರು.

ಸರ್ಕಾರದ ಆದೇಶದ ಅನ್ವಯ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ರಾತ್ರಿ ಕರ್ಫ್ಯೂ, ಶನಿವಾರ ಹಾಗೂ ಭಾನುವಾರ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗಿತ್ತು. ಆದರೆ, ಗುರುವಾರವೇ ಪೊಲೀಸರು ಕಾರ್ಯಚರಣೆ ನಡೆಸಿದ್ದು ಅಚ್ಚರಿ ಹಾಗೂ ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಯಿತು.

‘ಸರ್ಕಾರದಿಂದ ತುರ್ತು ಆದೇಶ ಬಂದಿದೆ. ಅದನ್ನು ಜಾರಿಗೊಳಿಸಲಾಗುತ್ತಿದೆ. ಮೆಡಿಕಲ್ ಸ್ಟೋರ್‌ಗಳು, ಹಾಲಿನ ಅಂಗಡಿಗಳು ಮೊದಲಾದ ಅವಶ್ಯ ಸಾಮಗ್ರಿಗಳ ಅಂಗಡಿಗಳನ್ನು ಬಿಟ್ಟು ಬೇರೆಲ್ಲ ಮಳಿಗೆಗಳನ್ನು ಬಂದ್ ಮಾಡಬೇಕು. ಹೋಟೆಲ್‌ ಮತ್ತು ಮದ್ಯದಂಗಡಿಗಳಲ್ಲಿ ಪಾರ್ಸೆಲ್‌ಗಷ್ಟೆ ಅವಕಾಶವಿದೆ’ ಎಂದು ಧ್ವನಿವರ್ಧಕದ ಮೂಲಕ ತಿಳಿಸುತ್ತಾ ಸಮಾದೇವಿ ಗಲ್ಲಿ, ಗಣಪತಿ ಗಲ್ಲಿ, ಖಡೇಬಜಾರ್‌, ರಾಮದೇವ್ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ್‌ ರಸ್ತೆ ಹೀಗೆ... ಮಾರುಕಟ್ಟೆ ಪ್ರದೇಶಗಳಲ್ಲಿನ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದರು.

ADVERTISEMENT
Caption

ಈ ವೇಳೆ, ಕೆಲವು ವರ್ತಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಕೆಲವರು ಆದೇಶದ ಪ್ರತಿ ತೋರಿಸುವಂತೆ ಪಟ್ಟು ಹಿಡಿದು ವಾಗ್ವದಕ್ಕಿಳಿದರು. ಅವರಿಗೆ ಮನವರಿಕೆ ಮಾಡಿಕೊಡಲು ಪೊಲೀಸರು ಹರಸಾಹಸಪಡಬೇಕಾಯಿತು.

ಕ್ರಮೇಣ ನಗರದಾದ್ಯಂತ ಬಹುತೇಕ ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸಲಾಯಿತು. ಪರಿಣಾಮ, ವಿವಿಧೆಡೆಯಿಂದ ಸಾಮಗ್ರಿಗಳ ಖರೀದಿಗೆ ಬಂದಿದ್ದವರು ಬರಿಗೈಲಿ ವಾಪಸಾಗಬೇಕಾಯಿತು. ಅಂಗಡಿಗಳನ್ನು ಮುಚ್ಚಿಸಿದ್ದರಿಂದಾಗಿ, ಸಂಜೆ ವೇಳೆಗೆ ಮಾರುಕಟ್ಟೆ ಪ್ರದೇಶಗಳಲ್ಲಿ ಜನರ ಸಂಚಾರವೂ ವಿರಳವಾಯಿತು. ಬೀದಿ ಬದಿ ವ್ಯಾಪಾರಿಗಳು ಗಂಟು ಮೂಟೆಗಳನ್ನು ಕಟ್ಟಿಕೊಂಡು ಅಲ್ಲಿಂದ ತೆರಳುತ್ತಿದ್ದ ದೃಶ್ಯ ಕಂಡುಬಂತು. ಮೇ 4ರವರೆಗೂ ಭಾಗಶಃ ಲಾಕ್‌ಡೌನ್‌ ಜಾರಿಯಲ್ಲಿರಲಿದೆ ಎಂದು ಪೊಲೀಸರು ತಿಳಿಸಿದರು.

ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆಸ್ಪತ್ರೆಗಳು, ಮೆಡಿಕಲ್‌ಗಳು, ಕಿರಾಣಿ ಅಂಗಡಿಗಳು, ಬೇಕರಿ, ಉತ್ಪಾದನಾ ಕ್ಷೇತ್ರದ ಕಂಪನಿಗಳು ಹಾಗೂ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ವಿನಾಯಿತಿ ನೀಡಲಾಗಿದೆ ಎಂದರು.

‘ಸರ್ಕಾರದ ಆದೇಶದ ಪ್ರಕಾರ ಬುಧವಾರ ರಾತ್ರಿ ಅಂಗಡಿಗಳನ್ನು ಮುಚ್ಚಿದ್ದೆವು. ಬೆಳಿಗ್ಗೆ 10.30ರ ಸುಮಾರಿಗೆ ತೆಗೆದಿದ್ದೇವೆ. ಕೆಲವೇ ಗಂಟೆಗಳಲ್ಲಿ ಪೊಲೀಸರು ಮುಚ್ಚಿಸಿದರು. ಸರ್ಕಾರದ ಮುಂದಿನ ಆದೇಶದವರೆಗೆ ನಿಮ್ಮ ಮಳಿಗೆಗಳನ್ನು ತೆರೆಯುವಂತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹೋದ ವರ್ಷದ ಲಾಕ್‌ಡೌನ್‌ ಸಂದರ್ಭದಲ್ಲೂ ಬಹಳ ನಷ್ಟ ಅನುಭವಿಸಿದ್ದೇವೆ. ಇನ್ನೂ ಸುಧಾರಿಸಿಕೊಂಡಿಲ್ಲ. ಹೀಗಿರುವಾಗ, ಮದುವೆ ಮೊದಲಾದ ಶುಭ ಕಾರ್ಯಗಳು ನಡೆಯುವ ಸೀಸನ್‌ನಲ್ಲೇ ಅಂಗಡಿಗಳನ್ನು ಮುಚ್ಚಿಸಲಾಗುತ್ತಿದೆ. ಹೀಗಾದರೆ, ಜೀವನ ನಡೆಸುವುದು ಹೇಗೆ? ಕೆಲಸಗಾರರಿಗೆ ಕೂಲಿ ಕೊಡುವುದು ಹೇಗೆ?’ ಎಂದು ಬಟ್ಟೆ ಅಂಗಡಿಯೊಂದರ ಮಾಲೀಕ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.