
ಅಥಣಿ: ಕ್ಯಾಮ್ಸ ಸಂಘಟನೆಯ ಹಲವು ವರ್ಷಗಳ ಹೋರಾಟದ ಫಲವಾಗಿ ರಾಜ್ಯ ಸರ್ಕಾರದ ಪರಿಷ್ಕೃತ ಆದೇಶದಿಂದ ಎಸ್ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಬೇಕಿರುವ ಕನಿಷ್ಠ ಅಂಕವನ್ನು ಶೇ 33ಕ್ಕೆ ನಿಗದಿ ಮಾಡಿದ್ದು ಸ್ವಾಗತಾರ್ಹ ಎಂದು ಅಥಣಿ ತಾಲ್ಲೂಕು ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ಸುರೇಶ ಚಿಕ್ಕಟ್ಟಿ ಹೇಳಿದರು.
ಅಥಣಿ ಪಟ್ಟಣದಲ್ಲಿ ಮಂಗಳವಾರ ನಡೆದ ಅಥಣಿ ತಾಲೂಕಾ ಅನುದಾನ ರಹಿತ ಶಾಲೆಗಳ ಒಕ್ಕೂಟದ ಸಭೆಯಲ್ಲಿ ಮಾತನಾಡುತ್ತಾ ರಾಷ್ಟ್ರೀಯ ಮಟ್ಟದ, ಎಲ್ಲಾ ರಾಜ್ಯಗಳಲ್ಲಿಯೂ ಸಹ ಏಕರೂಪ ಪರೀಕ್ಷಾ ಪದ್ಧತಿ ಹಲವಾರು ವರ್ಷಗಳಿಂದ ಜಾರಿಯಲ್ಲಿದೆ ಆದರೆ ನಮ್ಮ ರಾಜ್ಯದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಮಕ್ಕಳಿಗೆ ಇಷ್ಟು ವರ್ಷ ಅನ್ಯಾಯವಾಗುತ್ತಿತ್ತು. ಹೊಸ ಶೈಕ್ಷಣಿಕ ಪರೀಕ್ಷಾ ನೀತಿಯಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದರು.
ಒಕ್ಕೂಟದ ಉಪಾಧ್ಯಕ್ಷರಾದ ಡಿ. ಡಿ. ಮೇಕನಮರಡಿ ಮಾತನಾಡಿ ಈ ಪರಿಷ್ಕೃತ ಆದೇಶ ಜಾರಿಗೆ ತರುವಲ್ಲಿ ನಮ್ಮ ಕ್ಯಾಮ್ಸ ಸಂಘದ ಗೌರವ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣಯ್ಯ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಡಿ. ಶಶಿಕುಮಾರ ಇವರ ಸತತ ಪರಿಶ್ರಮದ ಅಡಗಿದೆ ಎಂದರು.
ಶಾಲೆಗಳ ಮಾನ್ಯತೆ ನವೀಕರಣ, ಸ್ಥಳಾಂತರ, ಹಸ್ತಾಂತರ ಸಮಯದಲ್ಲಿ ಶಿಕ್ಷಣ ಇಲಾಖೆಗೆ ನೀಡಬೇಕಾದ ಭೂಪರಿವರ್ತನೆ, ಕಟ್ಟಡ ಹಾಗೂ ಅಗ್ನಿ ಸುರಕ್ಷತೆಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ನೀಡಲು ಕಷ್ಟಸಾಧ್ಯವಾಗಿದ್ದು ಆದಷ್ಟು ಬೇಗನೇ ಸರ್ಕಾರ ಗಮನಹರಿಸಿ ಮಾನ್ಯತೇ ನವೀಕರಣ ನಿಯಮಗಳನ್ನು ಸರಳೀಕರಣಗೊಳಿಸಬೇಕೆಂದು ಕೋರಲಾಯಿತು.
ಸಂಘದ ಖಜಾಂಚಿಯಾದ ಅನಂತರಾವ ಎಸ್. ಜೋಷಿ, ಸದಸ್ಯರಾದ ಎಮ್. ಎಮ್. ಬಡಿಗೇರ, ಅರುಣ ಮಾಳಿ, ರಾಯಗೊಂಡ ಪಾಟೀಲ, ಸದಾಶಿವ ಚಿಕ್ಕಟ್ಟಿ, ಹಣಮಂತ ಮಾಂಗ, ಮಹಮದ ಜಹಾಂಗೀರ್, ಶ್ರೀಶೈಲ ಇಂಚಗೇರಿ, ಜಗದೀಶ ಅವಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.