ADVERTISEMENT

ಬೆಳಗಾವಿ: ಲಂಚ ಪಡೆಯುತ್ತಿದ್ದ ಪಿಡಿಒ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 16:26 IST
Last Updated 12 ಆಗಸ್ಟ್ 2020, 16:26 IST

ಬೆಳಗಾವಿ: ಉತಾರದಲ್ಲಿ ಹೆಸರು ಹಚ್ಚಲು ₹ 5 ಸಾವಿರ ಲಂಚ ಪಡೆಯುತ್ತಿದ್ದ ತಾಲ್ಲೂಕಿನ ಕಲಕಾಂಬ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ದೇವೇಂದ್ರ ನಾಗಠಾಣ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಬುಧವಾರ ಬಲೆಗೆ ಕೆಡವಿದ್ದಾರೆ.

ತಮ್ಮ ತಂದೆ ಹಾಗೂ ದೊಡ್ಡಪ್ಪನ ಹೆಸರಿನಲ್ಲಿ ಜಂಟಿಯಾಗಿರುವ ಮನೆ ಆಸ್ತಿಯನ್ನು ವಾಟ್ನಿ ಮಾಡಿ, ಉತಾರದಲ್ಲಿ ಪ್ರತ್ಯೇಕ ಹೆಸರುಗಳನ್ನು ಹಚ್ಚುವಂತೆ ಗ್ರಾಮದ ರೋಹಣ ಚಂದ್ರಕಾಂತ ಪಾಟೀಲ ಕೋರಿದ್ದರು. ಈ ಕೆಲಸ ಮಾಡಿಕೊಡಲು ತಮಗೆ ₹ 5 ಸಾವಿರ ಲಂಚ ನೀಡಬೇಕೆಂದು ಶ್ರೀಶೈಲ ಬೇಡಿಕೆ ಇಟ್ಟಿದ್ದರು. ಇದರ ವಿರುದ್ಧ ರೋಹಣ ಅವರು ಎಸಿಬಿಗೆ ದೂರು ನೀಡಿದ್ದರು.

ಉತ್ತರ ವಲಯದ ಎಸಿಬಿ ಎಸ್ಪಿ ಬಿ.ಎಸ್‌. ನೇಮಗೌಡ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶರಣಪ್ಪ, ಪೊಲೀಸ್‌ ಇನ್‌ಸ್ಪೆಕ್ಟರ್‌ ಎ.ಎಸ್‌ಗೂದಿಗೊಪ್ಪ, ಎಚ್.ಸುನೀಲ್‌ಕುಮಾರ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.