ಬೆಳಗಾವಿ:
ಭಾರಿ ಮಳೆ ಮತ್ತು ಬಿರುಗಾಳಿಯಿಂದ ಯರಗಟ್ಟಿ ತಾಲ್ಲೂಕಿನ ಗುಡುಮಕೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮೂರು ಕೊಠಡಿಗಳ ಚಾವಣಿಯ ತಗಡಿನ ಶೀಟುಗಳು ಹಾರಿ ಹೋಗಿವೆ.
ಇತ್ತೀಚೆಗೆ ಬೀಸಿದ ಭಾರಿ ಗಾಳಿಗೆ ಚನ್ನಮ್ಮನ ತಾಲ್ಲೂಕಿನ ಕಾದರವಳ್ಳಿ, ದೇಮಟ್ಟಿ ಮತ್ತು ದೇವಗಾಂವ ಶಾಲೆಗಳ ಚಾವಣಿ ಹಾರಿ ಹೋಗಿದ್ದು, ಅಂದಾಜು ₹27 ಲಕ್ಷ ಹಾನಿಯಾಗಿದೆ.
ಮಳೆ, ಗಾಳಿ ಅಬ್ಬರಕ್ಕೆ ರಾಮುದುರ್ಗ ತಾಲ್ಲೂಕಿನ ನರಸಾಪುರ ಶಾಲೆಯ ಮೂರು ಕೊಠಡಿ, ಬನ್ನೂರ, ಶಿವಪೇಟೆಯ ಶಾಲೆಗಳ ಎರಡು ಮತ್ತು ಸೊಪ್ಪಡ್ಲ ಶಾಲೆಯ ಒಂದು ಕೊಠಡಿಯ ಚಾವಣಿ ಹಾರಿ ಹೋಗಿವೆ.
ಮಳೆಗಾಲ ಆರಂಭಕ್ಕೂ ಒಂದು ತಿಂಗಳು ಮೊದಲೇ ವರುಣ ಅಬ್ಬರಿಸುತ್ತಿರುವ ಮತ್ತು ಜೋರಾಗಿ ಗಾಳಿ ಬೀಸುತ್ತಿರುವ ಕಾರಣ, ಜಿಲ್ಲೆಯಲ್ಲಿ ಇಂಥ ಅವಾಂತರ ಸೃಷ್ಟಿಯಾಗುತ್ತಲೇ ಇವೆ. ಇವು ಉದಾಹರಣೆಗಳಷ್ಟೇ. ಜಿಲ್ಲೆಯ ಹಲವು ಶಾಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಕೆಲವು ಶಾಲೆಗಳಲ್ಲಿ ದುರಸ್ತಿ ಮಾಡದಷ್ಟು ಕಟ್ಟಡಗಳು ಶಿಥಿಲ ಹಂತ ತಲುಪಿವೆ.
ಆದರೆ, ಬೇಸಿಗೆ ರಜೆ ಕಾರಣಕ್ಕೆ ಶಾಲೆಗಳಲ್ಲಿ ಮಕ್ಕಳಿಲ್ಲ. ಹಾಗಾಗಿ ಚಾವಣಿಗಳು ಮುರಿದುಬಿದ್ದರೂ ಯಾರ ಜೀವಕ್ಕೂ ಹಾನಿಯಾಗಿಲ್ಲ. ಒಂದುವೇಳೆ ಬೇಸಿಗೆ ರಜೆ ಮುಗಿಯುವ ಮುನ್ನ, ದುರಸ್ತಿಗೆ ಕಾದಿರುವ ಶಾಲೆಗಳ ಕೊಠಡಿಗಳನ್ನು ರಿಪೇರಿ ಮಾಡದಿದ್ದರೆ ಅನಾಹುತ ತಪ್ಪಿದ್ದಲ್ಲ.
2019ರಲ್ಲಿ ಭೀಕರ ಪ್ರವಾಹದಿಂದ ಮಲಪ್ರಭಾ, ಘಟಪ್ರಭಾ, ಕೃಷ್ಣಾ, ಹಿರಣ್ಯಕೇಶಿ, ಮಾರ್ಕಂಡೇಯ, ಧೂದಗಂಗಾ, ವೇದಗಂಗಾ ನದಿಗಳು ಉಕ್ಕಿ ಹರಿದಿದ್ದವು. ಇದರಿಂದ ನದಿ ಸಮೀಪದಲ್ಲಿನ ಶಾಲೆಗಳು ಮುಳುಗಡೆಯಾಗಿದ್ದವು. ಕೆಲ ಶಾಲೆಗಳು ಹಾನಿಗೀಡಾದವು. ಅದಾದ ನಂತರ ಪ್ರತಿವರ್ಷ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಸರ್ಕಾರಿ ಶಾಲೆಗಳಿಗೆ ಹಾನಿಯಾಗುತ್ತಲೇ ಇದೆ. ಆದರೆ, ಅವುಗಳ ದುರಸ್ತಿಗೆ ಸರ್ಕಾರ ಮುಂದಾಗದ್ದರಿಂದ ಆ ಕಟ್ಟಡಗಳಲ್ಲಿ ಮಕ್ಕಳು ಆತಂಕದಿಂದಲೇ ಓದಬೇಕಾದ ಪರಿಸ್ಥಿತಿ ಇದೆ.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 1,354 ಪ್ರಾಥಮಿಕ, 137 ಪ್ರೌಢ ಸೇರಿದಂತೆ 1,491 ಸರ್ಕಾರಿ ಶಾಲೆಗಳಿವೆ. ಈ ಪೈಕಿ ಮಾರ್ಚ್ 31ರ ಅಂತ್ಯಕ್ಕೆ, 503 ತರಗತಿ ಕೊಠಡಿ ದುರಸ್ತಿಗೆ ಕಾದಿದ್ದವು. ಏಪ್ರಿಲ್‌ನಲ್ಲಿ ಸುರಿದ ಮಳೆಯಿಂದ ಮತ್ತೆ ಹಲವು ಕೊಠಡಿಗಳಿಗೆ ಹಾನಿಯಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 1,737 ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಿದ್ದು, 331 ಶಾಲೆಗಳ 917 ಕೊಠಡಿಗಳು ದುರಸ್ತಿಗಾಗಿ ಕಾದುನಿಂತಿವೆ.
ಜಿಟಿಜಿಟಿ ಮಳೆಯಾದರೂ ಚಾವಣಿಗಳು ಸೋರುತ್ತಿದ್ದು, ಕಿಟಕಿ, ಬಾಗಿಲು, ನೆಲಹಾಸು ಹಾಳಾಗಿವೆ. ಗೋಡೆಗಳು ಬಿರುಕು ಬಿಟ್ಟಿವೆ. ಕೆಲವೆಡೆಯಂತೂ ಚಾವಣಿ ಬೀಳುವ ಹಂತದಲ್ಲಿವೆ. ಹಲವು ಶಾಲೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ.
‘ಸವದತ್ತಿ ತಾಲ್ಲೂಕಿನಲ್ಲಿ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಸುಮಾರು 40 ಶಾಲೆಗಳ ದುರಸ್ತಿ ಕಾರ್ಯ ನಡೆದಿದೆ. 160 ಹೊಸ ಕೊಠಡಿಗಳಿಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ತಿಳಿಸಿದ್ದಾರೆ.
‘ಈಗ ಎಲ್ಲ ಶಾಲೆಗಳಿಗೂ ಬೇಸಿಗೆ ಇದೆ. ಈ ಬಿಡುವಿನ ಅವಧಿಯಲ್ಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಮಳೆಗಾಲಕ್ಕೂ ಮುನ್ನ ಎಲ್ಲ ಶಾಲೆಗಳು ಸಿದ್ಧವಾಗಿ, ಮಕ್ಕಳಲ್ಲಿ ಸುರಕ್ಷಾ ಭಾವ ಮೂಡಿಸಬೇಕು’ ಎಂಬ ಒತ್ತಾಯ ಪಾಲಕರಿಂದ ಕೇಳಿಬರುತ್ತಿದೆ.
(ಪ್ರಜಾವಾಣಿ ತಂಡ: ಚಂದ್ರಶೇಖರ ಎಸ್.ಚಿನಕೇಕರ, ಚನ್ನಪ್ಪ ಮಾದರ, ಪ್ರದೀಪ ಮೇಲಿನಮನಿ, ಪ್ರಸನ್ನ ಕುಲಕರ್ಣಿ, ಬಸವರಾಜ ಶಿರಸಂಗಿ, ರವಿಕುಮಾರ ಹುಲಕುಂದ)
ಸತತ ಮಳೆ ಗಾಳಿಯಿಂದ ಕೆಲವು ಶಾಲೆಗಳ ಚಾವಣಿ ಹಾರಿಹೋಗಿದ್ದು ದುರಸ್ತಿ ಮಾಡುತ್ತಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನ ಎಲ್ಲ ಶಾಲೆಗಳನ್ನು ಕಲಿಕೆಗೆ ಸನ್ನದ್ಧಗೊಳಿಸುತ್ತೇವೆ. ಮಕ್ಕಳ ಸುರಕ್ಷತೆಗೆ ಒತ್ತು ಕೊಡುತ್ತೇವೆ
ಲೀಲಾವತಿ ಹಿರೇಮಠ ಡಿಡಿಪಿಐ ಬೆಳಗಾವಿ
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 917 ಕೊಠಡಿಗಳನ್ನು ದುರಸ್ತಿಗೆ ಗುರುತಿಸಿದ್ದೇವೆ. ಶಾಲೆಗಳ ಪುನರರಾಂಭಕ್ಕೂ ಮುನ್ನ ಎಲ್ಲ ಕಾಮಗಾರಿ ಪೂರ್ಣಗೊಳಿಸಲಾಗುವುದು
ಆರ್.ಎಸ್.ಸೀತಾರಾಮು ಡಿಡಿಪಿಐ ಚಿಕ್ಕೋಡಿ
ಮಳೆಯಿಂದ ಹಾನಿಗೀಡಾದ ಕೊಠಡಿಗಳ ದುರಸ್ತಿಗೆ ಕ್ರಮ ವಹಿಸಲಾಗುತ್ತಿದೆ. ಶಿಥಿಲಗೊಂಡ ಯಾವ ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ ಮಾಡದಂತೆ ಸೂಚಿಸಲಾಗಿದೆ.
ಆರ್.ಟಿ.ಬಳಿಗಾರ ಕ್ಷೇತ್ರ ಶಿಕ್ಷಣಾಧಿಕಾರಿ ರಾಮದುರ್ಗ
ಹಾನಿಗೀಡಾದ ಶಾಲೆಗಳ ಚಾವಣಿ ದುರಸ್ತಿಗಾಗಿ ಶಾಲಾ ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದೇವೆ. ತಾಲ್ಲೂಕಿನ 24 ಶಾಲೆಗಳ ಚಾವಣಿ ದುರಸ್ತಿ ಕೆಲಸ ನಡೆದಿವೆ. ಮಳೆಗಾಲ ಆರಂಭಕ್ಕೂ ಮುನ್ನ ಎಲ್ಲ ಶಾಲೆ ದುರಸ್ತಿ ಆಗಲಿವೆ.
-ಚನ್ನಬಸಪ್ಪ ತುಬಾಕಿ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಮ್ಮನ ಕಿತ್ತೂರು
ಮಾರ್ಚ್ ಏಪ್ರಿಲ್‌ನಲ್ಲಿ ಬೀಸಿದ ಬಿರುಗಾಳಿ ಮಳೆಯಿಂದ 6 ಶಾಲೆಗಳ ಚಾವಣಿ 12 ಕೊಠಡಿಗಳಿಗೆ ಹಾನಿಯಾಗಿದೆ.
ಎ.ಎನ್.ಪ್ಯಾಟಿ ಕ್ಷೇತ್ರ ಶಿಕ್ಷಣಾಧಿಕಾರಿ ಬೈಲಹೊಂಗಲ****
ಒಂದು ತಿಂಗಳಲ್ಲಿ ಶಾಲೆ ಪುನರಾರಂಭವಾಗುತ್ತವೆ. ಮಳೆಗಾಲವೂ ಶುರುವಾಗುತ್ತದೆ. ಅಷ್ಟರೊಳಗೆ ದುರಸ್ತಿಗೆ ಕಾದಿರುವ ಕೊಠಡಿಗಳನ್ನು ರಿಪೇರಿ ಮಾಡಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆ.
ಶೋಭಾ ಗಸ್ತಿ ಸಾಮಾಜಿಕ ಕಾರ್ಯಕರ್ತೆ ಚಿಕ್ಕೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.