ADVERTISEMENT

ಬೆಳಗಾವಿ | 6 ವರ್ಷದ ಬಾಲಕ ಸೇರಿ ಮೂವರಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 15:39 IST
Last Updated 16 ಜೂನ್ 2020, 15:39 IST

ಬೆಳಗಾವಿ: ಜಿಲ್ಲೆಯ 6 ವರ್ಷದ ಬಾಲಕ ಸೇರಿ ಮೂವರಿಗೆ ಕೋವಿಡ್–19 ದೃಢಪಟ್ಟಿದೆ. ಇದರೊಂದಿಗೆ ಇಲ್ಲಿನ ಸೋಂಕಿತರ ಸಂಖ್ಯೆ 301ಕ್ಕೆ ಏರಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಸಂಜೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಸೋಂಕಿತರು ನೆರೆಯ ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ ಹೊಂದಿದ್ದಾರೆ. ರೋಗಿ ಸಂಖ್ಯೆ 7390 ಆಗಿರುವ ಮಹಿಳೆ 21 ವರ್ಷದವರು. ಸಂಖ್ಯೆ 7391 ಆಗಿರುವ ವ್ಯಕ್ತಿ 51 ವರ್ಷದವರು. ಅವರನ್ನು ಚಿಕಿತ್ಸೆಗಾಗಿ ಇಲ್ಲಿನ ಬಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರಲ್ಲಿ ಒಬ್ಬರು ತಾಲ್ಲೂಕಿನ ಮರಣಹೋಳ ಗ್ರಾಮದ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರದಲ್ಲಿದ್ದವರು. ಇನ್ನೊಬ್ಬರು ನಿಪ್ಪಾಣಿ ಹಾಗೂ ಮತ್ತೊಬ್ಬರು ಕಾಗವಾಡ ಪಟ್ಟಣದವರು.

ADVERTISEMENT

ಮರಣಹೋಳದಲ್ಲಿ ಕ್ವಾರಂಟೈನ್‌ನಲ್ಲಿದ್ದವರು ಈಚೆಗೆ ಕೊರೊನಾ ಯೋಧರ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿತ್ತು.

ಮೋಳೆ ವರದಿ:ಮುಂಬೈನಲ್ಲಿ ಕೆಲಸಕ್ಕೆಂದು ಹೋಗಿದ್ದ ವ್ಯಕ್ತಿ ಜೂನ್‌ 6ರಂದು ಕಾಗವಾಡಕ್ಕೆ ಬಂದಿದ್ದರು. ಅವರಿಗೆ ಕೋವಿಡ್–19 ಸೋಂಕು ದೃಢಪಟ್ಟಿದ್ದರಿಂದ ಇಲ್ಲಿನ ಜನರಲ್ಲಿ ಆತಂಕ ಉಂಟಾಗಿದೆ.

ಕಾಗವಾಡಕ್ಕೆ ಬಂದ ಅವರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. 7 ದಿನಗಳ ಬಳಿಕ ಅವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ತಿಳಿಸಿ ಕಳುಹಿಸಲಾಗಿತ್ತು.

‘ಸೋಂಕಿತ 20 ಮಂದಿ ಜೊತೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ’ ಎಂದು ತಹಶೀಲ್ದಾರ್‌ ಪರಿಮಳಾ ದೇಶಪಾಂಡೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.