ADVERTISEMENT

ಎಲ್ಲ ಆಟಗಾರರಿಗೂ ಫಿಜಿಯೊಥೆರಪಿಸ್ಟ್‌ ಅಗತ್ಯವಿದೆ: ಡಯನಾ ಎಡುಲ್ಜಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 4:07 IST
Last Updated 22 ನವೆಂಬರ್ 2025, 4:07 IST
ಬೆಳಗಾವಿಯಲ್ಲಿ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಫಿಜಿಯೊಥೆರಪಿ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು
ಬೆಳಗಾವಿಯಲ್ಲಿ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಫಿಜಿಯೊಥೆರಪಿ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು   

ಬೆಳಗಾವಿ: ‘ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲ ವಯೋಮಾನದ ಮತ್ತು ರಾಷ್ಟ್ರಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದವರೆಗಿನ ಆಟಗಾರರಿಗೆ ಫಿಜಿಯೊಥೆರಪಿಸ್ಟ್‌ಗಳ ಅಗತ್ಯವಿದೆ’ ಎಂದು ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಅಭಿಪ್ರಾಯಪಟ್ಟರು.

ನಗರದಲ್ಲಿ ಕೆಎಲ್‌ಇ ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಷನ್‌ ಆ್ಯಂಡ್‌ ರಿಸರ್ಚ್‌ನ (ಕಾಹೇರ್‌) ಇನ್‌ಸ್ಟಿಟ್ಯೂಟ್‌ ಆಫ್‌ ಫಿಜಿಯೊಥೆರಪಿ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಫಿಜಿಯೊಥೆರಪಿ ಸಮ್ಮೇಳನ(ಪರ್ಲ್‌ ಫಿಜಿಯೊಕಾನ್‌–2025) ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಹಿಂದೆ ಫಿಜಿಯೊಥೆರಪಿ ವ್ಯವಸ್ಥೆ ಇಲ್ಲದ ಕಾಲದಲ್ಲಿ ಆಟಗಾರರಿಗೆ ಬಹಳ ತೊಂದರೆ ಇದ್ದವು. ಈಗ ಫಿಜಿಯೊಥೆರಪಿ ಸಾಕಷ್ಟು ಆಧುನೀಕರಣಗೊಂಡಿದ್ದು, ಕ್ರೀಡೆಗಳಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ’ ಎಂದರು. 

ADVERTISEMENT

‘ಇಂದು ಪ್ರತಿ ಆಟಗಾರರು ಫಿಜಿಯೊಥೆರಪಿ ಚಿಕಿತ್ಸೆ ಪಡೆಯುತ್ತಾರೆ. ಭಾರತೀಯ ಮಹಿಳಾ ಕ್ರಿಕೆಟ್‌ ತಂಡದಲ್ಲಿ 15 ಆಟಗಾರರಿದ್ದು, ಅವರನ್ನು ಸದೃಢಗೊಳಿಸಲು ತೆರೆಮರೆಯಲ್ಲಿ 15ರಿಂದ 20 ಮಂದಿ ಕೆಲಸ ಮಾಡುತ್ತಾರೆ. ಆಟಗಾರರನ್ನು ಸಿದ್ಧಗೊಳಿಸಿ ಮೈದಾನಕ್ಕೆ ತರುವಲ್ಲಿ ಫಿಜಿಯೊಥೆರಪಿಸ್ಟ್‌ಗಳ ಪಾತ್ರವೂ ಮಹತ್ತರವಾಗಿದೆ’ ಎಂದು ಹೇಳಿದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ‘ನಾನು ರಾಜ್ಯಸಭಾ ಸದಸ್ಯನಾಗಿದ್ದ ಸಂದರ್ಭ ನ್ಯಾಷನಲ್‌ ಮೆಡಿಕಲ್‌ ಕೌನ್ಸಿಲ್‌ ಸ್ಥಾಪಿಸಬೇಕು ಎಂದು ಹೋರಾಡಿದ್ದೆ. ಈಗ ಅದು ಕಾರ್ಯರೂಪಕ್ಕೆ ಬಂದಿದೆ’ ಎಂದು ಹೇಳಿದರು. 

‘ಕೃಷಿ, ಸಂಶೋಧನೆ, ಆರೋಗ್ಯ, ಶಿಕ್ಷಣದ ಮೂಲಕ ಸಮಾಜದ ಏಳ್ಗೆಗೆ ಶ್ರಮಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ಲಭಿಸಬೇಕು ಎಂಬ ಸಂಕಲ್ಪದೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ’ ಎಂದರು.

ಕರ್ನಾಟಕ ರಾಜ್ಯ ಅಲೈಡ್‌ ಮತ್ತು ಹೆಲ್ತ್‌ಕೇರ್‌ ಕೌನ್ಸಿಲ್‌ನ ಚೇರ್ಮನ್‌ ಡಾ.ಇಫ್ತಿಕರ್‌ಅಲಿ, ಕೇಂದ್ರ ಸರ್ಕಾರದ ಫಿಜಿಯೊಥೆರಪಿ ಪ್ರೊಫೆಷನಲ್‌ ಕೌನ್ಸಿಲ್‌ನ ಸದಸ್ಯರಾದ ಡಾ.ಅಲಿ ಇರಾನಿ, ಡಾ. ವಿ.ಪಿ.ಗುಪ್ತಾ, ಡಾ.ಆಶಿಶ್‌ ಕಕ್ಕಡ, ಡಾ.ಕೇತನ ಭಾಟಿಕರ ಮಾತನಾಡಿದರು.

ಕಾಹೇರ್‌ ಕುಲಸಚಿವ ಡಾ.ವಿ.ಎಂ.ಪಟ್ಟಣಶೆಟ್ಟಿ, ಡಾ.ಸಂಜೀವಕುಮಾರ, ಡಾ.ವಿಜಯ ಕಾಗೆ, ಡಾ.ದೀಪಾ ಮೆಟಗುಡ್ಡ ಉಪಸ್ಥಿತರಿದ್ದರು. ಡಾ.ಸಂತೋಷ ಮೆಟಗುಡ್ಡ ಸ್ವಾಗತಿಸಿದರು. ಡಾ. ಗಣೇಶ ಬಿ.ಆರ್‌. ವಂದಿಸಿದರು.

‘ಗೋವಾದಲ್ಲಿ ಫಿಜಿಯೊಥೆರಪಿ ಮಹಾವಿದ್ಯಾಲಯ’

‘ಗೋವಾದಲ್ಲಿ ಶೀಘ್ರ ಫಿಜಿಯೊಥೆರಪಿ ಮಹಾವಿದ್ಯಾಲಯ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕೆ ಅಗತ್ಯವಿರುವ ಆಸ್ಪತ್ರೆ ತರಬೇತಿ ಕೇಂದ್ರದ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ಚಿಕಿತ್ಸೆ ತರಬೇತಿ ನೀಡುವುದು ನಮ್ಮ ಧ್ಯೇಯ’ ಎಂದು ಕೋರೆ ಹೇಳಿದರು.

ಹುಬ್ಬಳ್ಳಿಯಲ್ಲಿ ನಿರ್ಮಿಸಿದ 1 ಸಾವಿರ ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ಶೀಘ್ರವೇ ಜನಸೇವೆಗೆ ಅರ್ಪಿಸಲಾಗುವುದು
-ಪ್ರಭಾಕರ ಕೋರೆ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.