ADVERTISEMENT

ಮೂಡಲಗಿ: ಅಡವಿಸಿದ್ಧೇಶ್ವರ ಮಠಕ್ಕೆ ಪೊಲೀಸ್‌ ಕಾವಲು

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 15:49 IST
Last Updated 25 ಜೂನ್ 2025, 15:49 IST
ಬುಧವಾರ ಪೊಲೀಸ್‌ ಕಾವಲಿನಲ್ಲಿ  ಮೂಡಲಗಿ ತಾಲ್ಲೂಕಿನ ಶಿವಾಪುರ (ಹ) ಗ್ರಾಮ ಅಡವಿಸಿದ್ಧೇಶ್ವರ ಮಠದ ಪ್ರವೇಶ ದ್ವಾರದ ದೃಶ್ಯ 
ಬುಧವಾರ ಪೊಲೀಸ್‌ ಕಾವಲಿನಲ್ಲಿ  ಮೂಡಲಗಿ ತಾಲ್ಲೂಕಿನ ಶಿವಾಪುರ (ಹ) ಗ್ರಾಮ ಅಡವಿಸಿದ್ಧೇಶ್ವರ ಮಠದ ಪ್ರವೇಶ ದ್ವಾರದ ದೃಶ್ಯ    

ಮೂಡಲಗಿ: ತಾಲ್ಲೂಕಿನ ಶಿವಾಪುರ (ಹ) ಗ್ರಾಮದ ಅಡವಿಸಿದ್ಧೇಶ್ವರ ಶಾಖಾ ಮಠವು ಬುಧವಾರ ಬೆಳಿಗ್ಗೆಯಿಂದ ಪೊಲೀಸ್‌ ಕಾವಲಿನಲ್ಲಿದ್ದರಿಂದ ಭಕ್ತರು ಗೇಟ್‌ ಬಳಿಯಲ್ಲಿ ನಿಂತು ಅಡವಿಸಿದ್ಧೇಶ್ವರ ಸನ್ನಿಧಿಗೆ ನಮಸ್ಕರಿಸಿದರು.

ಮಠದಲ್ಲಿ ಮಹಿಳೆಯೊಬ್ಬರನ್ನು ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾಮದ ಕೆಲವರು ಭಾನುವಾರ (ಜೂನ್‌ 22) ಅಡವಿಸಿದ್ಧರಾಮ ಸ್ವಾಮೀಜಿಯನ್ನು ಹೊರಹಾಕಿದ್ದರು.

ಸ್ವಾಮೀಜಿ ಯಾವುದೇ ತಪ್ಪು ಮಾಡಿಲ್ಲ ಎಂದು ಗ್ರಾಮದ ನೂರಾರು ಭಕ್ತರು ಬೆಂಬಲಕ್ಕೆ ನಿಂತಿದ್ದಾರೆ. ಸ್ವಾಮೀಜಿ ಮತ್ತೆ ಮಠಕ್ಕೆ ಮರಳಿ ಬರಬೇಕು ಎಂದು ಭಕ್ತರು ಪಟ್ಟು ಹಿಡಿದಿದ್ದಾರೆ. ಈ ಕುರಿತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಧಸ್ಥಿಕೆಯಲ್ಲಿ ಇತ್ಯರ್ಥಗೊಳಿಸಲು ಭಕ್ತರೆಲ್ಲ ಗೋಕಾಕ ಎನ್‌ಎಸ್‌ಎಫ್ ಕಚೇರಿಗೆ ಮಂಗಳವಾರವೂ ತೆರಳಿ ಶಾಸಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಶಾಸಕರು ಮಠದಲ್ಲಿ ಆಗಿರುವ ಘಟನೆ ಬಗ್ಗೆ ಪ್ರಮುಖ ಮಠಾಧೀಶರ ಮಧ್ಯಸ್ಥಿಕೆಯಲ್ಲಿ ಚರ್ಚಿಸಿ ಜೂನ್‌ 26 (ಗುರುವಾರ) ನಿರ್ಣಯಿಸುವ ಬಗ್ಗೆ ಭರವಸೆ ನೀಡಿರುವ ಬಗ್ಗೆ ತಿಳಿದು ಬಂದಿದೆ.

ADVERTISEMENT

ಮೂರು ದಿನಗಳ ಬೆಳವಣಿಗೆಯಲ್ಲಿ ಕೆಲವು ಭಕ್ತರು ಸ್ವಾಮೀಜಿ ಮರಳಿ ಮಠಕ್ಕೆ ಬರಬೇಕು ಎಂದು ಪಟ್ಟು ಹಿಡಿದರೆ, ಇನ್ನು ಕೆಲವರು ಬರಬಾರದು ಎಂದು ಪಟ್ಟು ಹಿಡಿದಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಸ್ವಾಮೀಜಿ ಪರ ಮತ್ತು ವಿರೋಧವಾಗಿ ಹೇಳಿಕೆಗಳ ವಿಡಿಯೊಗಳು ಟ್ರೋಲ್‌ ಆಗುತ್ತಿರುವುದರಿಂದ ಗ್ರಾಮದಲ್ಲಿ ಸೂಕ್ಷ್ಮ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಇತ್ಯರ್ಥವಾಗುವ ವರೆಗೆ ಮಠದ ಆವರಣಕ್ಕೆ ಪೊಲೀಸ್‌ ಕಾವಲು ಇಟ್ಟು ಪ್ರವೇಶ ನಿಷೇಧಿಸಲಾಗಿದೆ ಎಂದು ಪಿಎಸ್‌ಐ ರಾಜು ಪೂಜೇರಿ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.