ADVERTISEMENT

ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ಅಭ್ಯರ್ಥಿಗಳ ಆಯ್ಕೆಗೆ ಮುಗಿಯದ ಕಸರತ್ತು

ಪ್ರಮುಖ ಪಕ್ಷಗಳಿಂದ ಇನ್ನೂ ‍ಪ್ರಕಟವಾಗದ ಪಟ್ಟಿ

ಎಂ.ಮಹೇಶ
Published 20 ಆಗಸ್ಟ್ 2021, 19:30 IST
Last Updated 20 ಆಗಸ್ಟ್ 2021, 19:30 IST
ಬೆಳಗಾವಿ ಮಹಾನಗರಪಾಲಿಕೆ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಮಹಾವೀರ ಭವನದಲ್ಲಿ ಶುಕ್ರವಾರ ನಡೆದ ಸಂದರ್ಶನಕ್ಕೆ ಹಾಜರಾಗಲು ಸರದಿಯಲ್ಲಿ ನಿಂತಿದ್ದರುಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿ ಮಹಾನಗರಪಾಲಿಕೆ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಮಹಾವೀರ ಭವನದಲ್ಲಿ ಶುಕ್ರವಾರ ನಡೆದ ಸಂದರ್ಶನಕ್ಕೆ ಹಾಜರಾಗಲು ಸರದಿಯಲ್ಲಿ ನಿಂತಿದ್ದರುಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಕ್ಕೆ ರಾಜಕೀಯ ಪಕ್ಷಗಳು ಕಸರತ್ತು ಮುಂದುವರಿಸಿವೆ.

ಇಲ್ಲಿ ಹಿಂದಿನ ಚುನಾವಣೆಗಳು ಭಾಷೆ ಆಧಾರದ ಮೇಲೆ ನಡೆಯುತ್ತಿದ್ದವು. ಅಂದರೆ, ಎಲ್ಲರೂ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದರು. ತಮಗೆ ‘ಒಲವಿರುವ’ ರಾಜಕೀಯ ಪಕ್ಷಗಳಿಂದ ಅಥವಾ ನಾಯಕರಿಂದ ಬೆಂಬಲ ಪಡೆಯುತ್ತಿದ್ದವು. ಆದರೆ, ಈ ಬಾರಿ ಬಿಜೆಪಿ ಸೇರಿದಂತೆ ಪ್ರಮುಖ ‍ಪಕ್ಷಗಳು ನಮ್ಮ ಕಾರ್ಯಕರ್ತರನ್ನು ಚಿಹ್ನೆಯಲ್ಲಿ ಕಣಕ್ಕಿಳಿಸುತ್ತೇವೆ ಎಂದು ಘೋಷಿಸಿವೆ. ಇದಾಗಿ ಹಲವು ದಿನಗಳು ಕಳೆದಿವೆ. ನಾಮಪತ್ರ ಸ್ವೀಕಾರ ಪ್ರಕ್ರಿಯೆ ಅರಂಭವಾಗಿಯೂ ನಾಲ್ಕು ದಿನಗಳು ಉರುಳಿವೆ. ಆದರೆ, ಕೆಲವೇ ಮಂದಿಯಷ್ಟೆ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅದರಲ್ಲೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಕಣಕ್ಕಿಳಿದಿಲ್ಲ.

ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನಗಳಷ್ಟೆ ಬಾಕಿ ಇದೆ. ಹೀಗಿದ್ದರೂ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಅಥವಾ ಪ್ರಕಟಿಸುವುದು ಯಾವುದೇ ರಾಜಕೀಯ ಪಕ್ಷದಿಂದಲೂ ಸಾಧ್ಯವಾಗಿಲ್ಲ. ಒಮ್ಮತಕ್ಕೆ ಬರುವುದು ಮುಖಂಡರಿಂದ ಇನ್ನೂ ಸಾಧ್ಯವಾಗಿಲ್ಲ. ಇನ್ನೂ ಲೆಕ್ಕಾಚಾರದಲ್ಲೆ ಅವರು ತೊಡಗಿರುವುದು ಕಂಡುಬಂದಿದೆ. ಕೆಲವರು ಯಾವುದೇ ಪಕ್ಷದಿಂದಲೂ ಸ್ಪರ್ಧಿಸಲು ಬಯಸದೆ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.

ADVERTISEMENT

ಬಹು ಬೇಡಿಕೆ:‌ಬಿಜೆಪಿಯಿಂದ ಸ್ಪರ್ಧಿಸಲು, ಆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಂದ ಬಹಳ ಬೇಡಿಕೆ ಬಂದಿದೆ. ಹೀಗಾಗಿ, ಮುಖಂಡರು ಆಕಾಂಕ್ಷಿಗಳ ಸಂದರ್ಶನ ನಡೆಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಮಹಾವೀರ ಭವನದಲ್ಲಿ ನಡೆದ ಸಂದರ್ಶನದಲ್ಲಿ ಆಕಾಂಕ್ಷಿಗಳು ಸರದಿ ಸಾಲಿನಲ್ಲಿ ಬಂದು ಪಾಲ್ಗೊಂಡಿದ್ದರು. ತಮ್ಮ ‘ಸಾಮರ್ಥ್ಯ’ವನ್ನು ಮುಖಂಡರ ಎದುರು ತಿಳಿಸಿದ್ದಾರೆ. ಸ್ವೀಕಾರವಾಗುವ ಅರ್ಜಿಗಳನ್ನು ಉಸ್ತುವಾರಿಗಳ ಮುಂದಿಟ್ಟು ಜಾತಿ, ಜನಸಂಪರ್ಕ ಹಾಗೂ ಗೆಲ್ಲುವ ಸಾಮರ್ಥ್ಯ ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈಗಾಗಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ನೇತೃತ್ವದಲ್ಲಿ ಸಭೆಯೂ ನಡೆದಿದೆ. ನಗರದ ಮುಖಂಡರೂ ಸರಣಿ ಸಭೆಗಳನ್ನು ನಡೆಸಿದ್ದಾರೆ. ಆದರೆ, ಟಿಕೆಟ್ ಯಾರಿಗೆ ಕೊಡಬೇಕು ಎನ್ನುವ ತೀರ್ಮಾನ ಕೈಗೊಳ್ಳುವುದು ಅವರಿಗೆ ಸಾಧ್ಯವಾಗಿಲ್ಲ. ಬೇಡಿಕೆ ಹೆಚ್ಚಿರುವುದು (ಪ್ರತಿ ವಾರ್ಡ್‌ನಲ್ಲಿ 4–5 ಮಂದಿ) ಮತ್ತು ಬಂಡಾಯದ ಸಾಧ್ಯತೆ ಇರುವುದು ಮುಖಂಡರ ತಲೆನೋವಿಗೆ ಕಾರಣವಾಗಿದೆ.

ಗೊಂದಲದಲ್ಲಿ ಕಾಂಗ್ರೆಸ್!:ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲಾಗುವುದು ಎಂದು ಆರಂಭದಲ್ಲಿ ಘೋಷಿಸಿದ್ದ ಕಾಂಗ್ರೆಸ್‌ ನಾಯಕರು, ನಂತರ ವರಿಷ್ಠರ ಅಂಗಳದಲ್ಲಿದೆ ಎಂದು ಹೇಳುತ್ತಿದ್ದಾರೆ. ಚಿಹ್ನೆಯಡಿ ಸ್ಪರ್ಧಿಸಬೇಕೋ ಬೇಡವೋ ಎನ್ನುವ ವಿಷಯವೇ ಕಾಂಗ್ರೆಸ್‌ ಪಕ್ಷದ ಮಟ್ಟದಲ್ಲಿ ತೀರ್ಮಾನವಾಗಿಲ್ಲ. ಎಲ್ಲ 58 ವಾರ್ಡ್‌ಗಳಲ್ಲೂ ಸ್ಪರ್ಧಿಸಲಾಗುವುದು ಎಂದು ಘೋಷಿಸಿರುವ ಜೆಡಿಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನೂ ಪ್ರಕಟಿಸಿಲ್ಲ.

ಆಮ್‌ ಆದ್ಮಿ ಪಕ್ಷವು (ಎಎಪಿ) ಬೆಳಗಾವಿಯಲ್ಲಿ ಬದಲಾವಣೆಗೆ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದೆ. 20 ಮಂದಿಯ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಇನ್ನೊಂದೆಡೆ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯು ತನ್ನ ಬೆಂಬಲಿಗರನ್ನು ‘ಸಜ್ಜು’ಗೊಳಿಸುತ್ತಿದೆ. ಹೊಸಬರಿಗೆ ಅವಕಾಶ ಕೊಡಬೇಕು ಎಂಬ ಆಗ್ರಹವೂ ಸಮಿತಿಯಲ್ಲಿನ ಮುಖಂಡರಿಂದ ಕೇಳಿಬರುತ್ತಿದೆ. ಶಿವಸೇನೆ–ಎಂಇಎಸ್ ಜಂಟಿ ಕಾರ್ಯಾಚರಣೆ ನಡೆಸಲು ಸಜ್ಜಾಗಿವೆ.

ಮೀಸಲಾತಿ ತಮ್ಮ ಪರವಾಗಿರುವವರು ಮತ್ತೊಮ್ಮೆ ಸ್ಪರ್ಧೆಗೆ ಒಲವು ತೋರಿದ್ದಾರೆ. ಕ್ಷೇತ್ರ ತಪ್ಪಿದವರು ‘ತಮ್ಮವರನ್ನು’ ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಅಧ್ಯಕ್ಷರೇನಂತಾರೆ?
ಪಕ್ಷದ ಚಿಹ್ನೆಯಲ್ಲಿ ಸ್ಪರ್ಧಿಸುವುದು ಶನಿವಾರ ಸಂಜೆ ವೇಳೆಗೆ ನಿರ್ಧಾರವಾಗಲಿದೆ. ಶುಕ್ರವಾರ ಸಭೆ ನಡೆಸಿ ಚರ್ಚಿಸಿದ್ದೇವೆ. ವರಿಷ್ಠರಿಂದ ಸೂಚನೆ ಬರುತ್ತಿದ್ದಂತೆಯೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು.
– ರಾಜು ಸೇಠ್, ಅಧ್ಯಕ್ಷ, ನಗರ ಘಟಕ, ಕಾಂಗ್ರೆಸ್

*

ಪಕ್ಷದ ಟಿಕೆಟ್‌ ಕೋರಿ 250 ಅರ್ಜಿಗಳು ಬಂದಿವೆ. ಪ್ರತಿ ವಾರ್ಡ್‌ಗೆ ಸರಾಸರಿ ನಾಲ್ವರು ಆಕಾಂಕ್ಷಿಗಳಿದ್ದಾರೆ. ಅವರೆಲ್ಲರ ಸಂದರ್ಶನ ನಡೆಸುತ್ತಿದ್ದೇವೆ. ಶನಿವಾರ ಸಂಜೆ ಮೊದಲ ಪಟ್ಟಿ ಹಾಗೂ ಭಾನುವಾರ 2ನೇ ಪಟ್ಟಿ ಪ್ರಕಟಿಸಲಾಗುವುದು.
– ಶಶಿಕಾಂತ ಪಾಟೀಲ, ಅಧ್ಯಕ್ಷ, ನಗರ ಘಟಕ, ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.