
ಹುಕ್ಕೇರಿ: ಶತಮಾನಗಳ ಹಿಂದೆ ಸಹಕಾರ ಕ್ಷೇತ್ರ ಹುಟ್ಟು ಹಾಕಲು ಹಲವಾರು ಹಿರಿಯರು ಶ್ರಮಿಸಿದರು. ಆದರೆ, ಇದೀಗ ಸಹಕಾರ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ದುರ್ದೈವದ ಸಂಗತಿ ಎಂದು ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್ ಕತ್ತಿ ಹೇಳಿದರು.
ಪಟ್ಟಣದ ವಿಶ್ವರಾಜ ಭವನದಲ್ಲಿ ಗುರುವಾರ ತಾಲ್ಲೂಕಿನ ಪಿಕೆಪಿಎಸ್ ಸಂಘದವರು ಹಮ್ಮಿಕೊಂಡಿದ್ದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಸೇರ್ಪಡೆಯಾಗುತ್ತಿರುವುದು ವಿಷಾಧಕರ. ನಮ್ಮ ತಾಲ್ಲೂಕಿನ ಸಹಕಾರಿ ಕ್ಷೇತ್ರದಲ್ಲಿ ಹೊರಗಿನವರು ರಾಜಕಾರಣ ಮಾಡುತ್ತಿದ್ದಾರೆ. ಈಗಾಗಲೇ ನಡೆದ ವಿದ್ಯುತ್ ಸಹಕಾರ ಸಂಘ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಹೊರಗಿನವರು ನಮ್ಮ ತಾಲ್ಲೂಕಿನ ಜನರಿಗೆ, ಸಹಕಾರಿಗಳಿಗೆ ಒಡ್ಡಿದ ಆಸೆ ಆಮೀಷ ದಿಕ್ಕರಿಸಿ ಸ್ವಾಭಿಮಾನದ ಬಲ ಪ್ರದರ್ಶಿಸಿರುವುದಕ್ಕೆ ಸಹಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಮುಂಬರುವ ದಿನಗಳಲ್ಲಿ ನಡೆಯುವ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಪುರಸಭೆ ಚುನಾವಣೆಗಳಲ್ಲಿ ನಮ್ಮ ಮತ್ತು ಎ.ಬಿ.ಪಾಟೀಲ ಕುಟುಂಬ ಒಟ್ಟಾಗಿ ‘ಸ್ವಾಭಿಮಾನಿ ಪೆನಲ್ ’ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಾಗಿ ಘೋಷಿಸಿದರು.
1985ನೇ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ ₹580 ಕೋಟಿ ಬಂಡವಾಳ ಹೊಂದಿತ್ತು. ನಾನು ಅಧಿಕಾರ ಹಿಡಿದು ಇತ್ತೀಚೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಾಗ ₹6,800 ಕೋಟಿ ದುಡಿಯುವ ಬಂಡವಾಳ ಹೊಂದಿತ್ತು. ತಾಲ್ಲೂಕಿನ 54 ಸಾವಿರ ಸದಸ್ಯರಿಗೆ ₹400 ಕೋಟಿ ಶೂನ್ಯ ಬಡ್ಡಿದರದ ಸಾಲ ವಿತರಿಸಿದ್ದು, ₹380 ಕೋಟಿ ಸಾಲ ಬಡ್ಡಿ ಮನ್ನಾ ದೊರಕಿದೆ. ತಾಲ್ಲೂಕಿನ 92 ಪಿಕೆಪಿಎಸ್ ಗಳ ಪೈಕಿ 82 ಸಂಘಗಳು ಸ್ವಂತ ಕಟ್ಟಡ ಹೊಂದಿವೆ ಎಂದರು.
ಮಾಜಿ ಸಚಿವ ಎ.ಬಿ.ಪಾಟೀಲ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಸತ್ಯಪ್ಪ ನಾಯಿಕ, ಎಚ್.ಎಲ್.ಪೂಜೇರಿ, ಶ್ರೀಶೈಲ ಮಠಪತಿ ಮಾತನಾಡಿದರು. ರಮೇಶ ಕತ್ತಿ ಅವರನ್ನು ತಾಲ್ಲೂಕಿನ ಪಿಕೆಪಿಎಸ್ ಸಂಘಗಳ ಪರವಾಗಿ ಸತ್ಕರಿಸಲಾಯಿತು.
ಶಾಸಕ ನಿಖಿಲ್ ಕತ್ತಿ, ಬಾಗೇವಾಡಿ ಬ್ಯಾಂಕ್ ಅಧ್ಯಕ್ಷ ಪವನ್ ಕತ್ತಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಮಹಾದೇವ ಜಿನರಾಳಿ, ಪಿಕಾರ್ಡ್ ಬ್ಯಾಂಕ ಅಧ್ಯಕ್ಷ ದುರದುಂಡಿ ಪಾಟೀಲ, ಕೆಂಪಣ್ಣ ದೇಸಾಯಿ, ಗಜಾನನ ಕ್ವಳ್ಳಿ, ಬಸವರಾಜ ಹುಂದ್ರಿ, ಭೀಮಣ್ಣ ರಾಮಗೋನಟ್ಟಿ, ಬಿ.ಎಸ್.ಸುಲ್ತಾನಪುರಿ, ರಾಜು ಮುನ್ನೋಳಿ, ಎ.ಕೆ.ಪಾಟೀಲ, ಬಾಹುಬಲಿ ನಾಗನೂರಿ, ಆನಂದ ಲಕ್ಕುಂಡಿ ಇದ್ದರು. ಸತ್ಯಪ್ಪ ನಾಯಿಕ ಸ್ವಾಗತಿಸಿದರು. ಗುರುರಾಜ ಕುಲಕರ್ಣಿ ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.