ADVERTISEMENT

ಪಿಪಿಇ ಕಿಟ್ ಸರಿ ಇಲ್ಲ: ಬಿಮ್ಸ್‌ ಸಿಬ್ಬಂದಿ ಅಳಲು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 14:25 IST
Last Updated 25 ಆಗಸ್ಟ್ 2020, 14:25 IST
ಪಿಪಿಇ ಕಿಟ್ ಧರಿಸಿದ್ದ ಸಿಬ್ಬಂದಿಯ ಅಳಲು
ಪಿಪಿಇ ಕಿಟ್ ಧರಿಸಿದ್ದ ಸಿಬ್ಬಂದಿಯ ಅಳಲು   

ಬೆಳಗಾವಿ: ‘ಹೊಸದಾಗಿ ನೀಡಿರುವ ಪಿಪಿಇ ಕಿಟ್ ಧರಿಸಿ ಕೆಲಸ ನಿರ್ವಹಿಸಲು ಆಗುತ್ತಿಲ್ಲ. ಅತಿಯಾದ ಬೆವರು ಬರುತ್ತಿದೆ’ ಎಂದು ಆರೋಪಿಸಿ ಇಲ್ಲಿನ ಬಿಮ್ಸ್‌ ಆಸ್ಪತ್ರೆಯ ಕೆಲವು ವೈದ್ಯಕೀಯ ಸಿಬ್ಬಂದಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

‘10 ತಾಸುಗಳವರೆಗೆ ಅವುಗಳನ್ನು ಧರಿಸಬೇಕು. ಆದರೆ, ಅವು ಅವೈಜ್ಞಾನಿಕವಾಗಿವೆ. ಬಹಳ ಕಿರಿಕಿರಿ ಆಗುತ್ತದೆ’ ಎಂದು ಹೇಳಿದ್ದಾರೆ.

‘ಗುಣಮಟ್ಟದ ಕಿಟ್‌ಗಳನ್ನು ನೀಡಿದರೆ ಕೆಲಸ ಮಾಡುತ್ತೇವೆ. ಇಲ್ಲವಾದಲ್ಲಿ ಮಾಡುವುದಿಲ್ಲ. ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಬೇಕು’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರತಿಕ್ರಿಯೆಗೆ ಬಿಮ್ಸ್‌ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ಲಭ್ಯವಾಗಲಿಲ್ಲ.

ತರಾಟೆಗೆ ತೆಗೆದುಕೊಂಡಿದ್ದೇನೆ:ಈ ಬಗ್ಗೆ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ಕೆಲವು ಕಂಪನಿಗಳ ಪಿಪಿಇ ಕಿಟ್‌ಗಳಲ್ಲಿ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಆರೋಗ್ಯ ಸಚಿವರ ಜೊತೆ ಚರ್ಚಿಸುತ್ತೇನೆ’ ಎಂದರು.

‘ಬಿಮ್ಸ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಇದ್ದು, ರೋಗಿಗಳು ಪರದಾಡುತ್ತಿರುವುದು ಗಮನಕ್ಕೆ ಬಂದಿದೆ. ಕ್ಷೇತ್ರದ ಜನರ ಬಳಿ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಡಿಎಚ್‌ಒ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ನನ್ನದೇ ಭಾಷೆಯಲ್ಲಿ ತರಾಟೆಗೆ ತಗೆದುಕೊಂಡಿದ್ದೇನೆ. ಜನರು ಆಸ್ಪತ್ರೆಗೆ ಜೀವ ಉಳಿಸಿಕೊಳ್ಳಲು ಬರುತ್ತಾರೆಯೇ ಹೊರತು ಕಳೆದುಕೊಳ್ಳಲಲ್ಲ ಎನ್ನುವುದನ್ನು ಮರೆಯಬೇಡಿ ಎಂದು ತಿಳಿಸಿದ್ದೇನೆ. ಜನರ ಪ್ರಾಣದೊಂದಿಗೆ ಚೆಲ್ಲಾಟ ಆಡಬೇಡಿ ಎಂದು ತಾಕೀತು ಮಾಡಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.