ADVERTISEMENT

‘ಭಾರತವನ್ನು ಸ್ವಾವಲಂಬಿಯಾಗಿಸಿದ ಬಿಜೆಪಿ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 14:00 IST
Last Updated 5 ಡಿಸೆಂಬರ್ 2021, 14:00 IST
ವಿಧಾನಪರಿಷತ್‌ ಚುನಾವಣೆ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಕುಡಚಿ ಮತಕ್ಷೇತ್ರದಲ್ಲಿ ಭಾನುವಾರ ಪ್ರಚಾರ ನಡೆಸಿದರು
ವಿಧಾನಪರಿಷತ್‌ ಚುನಾವಣೆ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಕುಡಚಿ ಮತಕ್ಷೇತ್ರದಲ್ಲಿ ಭಾನುವಾರ ಪ್ರಚಾರ ನಡೆಸಿದರು   

ಬೆಳಗಾವಿ: ‘ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ದೇಶವನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದೆ’ ಎಂದು ‍ಪಕ್ಷದ ನಾಯಕ ಹಾಗೂ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ವಿಧಾನಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರವಾಗಿ ಕುಡಚಿ ಮತಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡು ಮಾತನಾಡಿದರು.

‘ಜನಧನ್, ಫಸಲ್ ಭೀಮಾ ಯೋಜನೆ ಹೀಗೆ... ಹತ್ತು ಹಲವಾರು ಯೋಜನೆಗಳನ್ನು ರೈತರ ಪರವಾಗಿ ತಂದಿದ್ದಾರೆ. ಇದರಿಂದ ರೈತರ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ರೈತರ ಖಾತೆಗಳಿಗೆ ನೇರವಾಗಿ ಹಣ ಸಂದಾಯ ಮಾಡುವ ಮೂಲಕ ಹೊಸ ಕ್ರಾಂತಿಯನ್ನೇ ಉಂಟು ಮಾಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಕನದಾಳ, ಇಟ್ನಾಳ, ಸೌಸುದ್ದಿ, ನಿಡಗುಂದಿ, ಕಟಕಬಾವಿ, ಹಿಡಕಲ್, ಪಲಬಾವಿ, ಕಪ್ಪಳಗುದ್ದಿ, ಹಂದಿಗುಂದ, ಅಳಗವಾಡಿ, ಸುಟ್ಟಟ್ಟಿ, ಅಲಕನೂರ, ಬಸ್ತವಾಡ, ನಿಲಜಿ, ಬೆಕ್ಕೇರಿ ಮತ್ತು ಮೊರಬ ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ ಮತ ಯಾಚಿಸಿದರು.

‘ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಕವಟಗಿಮಠ ಅವರು ರೈತರ ಧ್ವನಿಯಾಗಿದ್ದಾರೆ. ಸರ್ಕಾರದ ಯೋಜನೆಗಳನ್ನು ರೈತರ ಮನೆ ಮನೆಗೆ ಮುಟ್ಟಿಸುವ ಮಹತ್ತರ ಕೆಲಸ ಮಾಡಿದ್ದಾರೆ. ಪಂಚಾಯ್ತಿಗಳ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಅವರು ಮತ್ತೊಮ್ಮೆ ಆಯ್ಕೆಯಾದರೆ, ಇನ್ನೂ ಹೆಚ್ಚಿನ ಕೊಡುಗೆ ನೀಡುವುದರಲ್ಲಿ ಸಂದೇಹವಿಲ್ಲ’ ಎಂದರು.

ಶಾಸಕರಾದ ಪಿ.ರಾಜೀವ್, ಡಿ.ಎಂ. ಐಹೊಳೆ, ಮುಖಂಡ ಅಮರಸಿಂಹ ಪಾಟೀಲ, ಚಿದಾನಂದ ಕೊರೆ ಸಕ್ಕರೆ ಕಾರ್ಖಾನೆ ಕಾರ್ಯಾಧ್ಯಕ್ಷರಾದ ಭರತೇಶ ಬನವನೆ, ತಾತ್ಯಾಸಾಹೇಬ ಕಾಟೆ, ಮಲ್ಲಪ್ಪ ಮಿಷಾಲೆ, ಮಹೇಶ್ ಬಾತೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.