ADVERTISEMENT

ಮುಗಿದ ಬೇಸಿಗೆ ರಜೆ: ಶಾಲೆ ಪುನರಾರಂಭಕ್ಕೆ ಸ್ವಾಗತದ ಸಂಭ್ರಮ

ಇನ್ನೇನಿದ್ದರೂ ಕಲಿಕೆಯ ಸಮಯ

​ಪ್ರಜಾವಾಣಿ ವಾರ್ತೆ
Published 28 ಮೇ 2019, 9:10 IST
Last Updated 28 ಮೇ 2019, 9:10 IST
   

ಬೆಳಗಾವಿ: ತಿಂಗಳಿಗೂ ಹೆಚ್ಚು ಕಾಲ ‘ರಜಾ–ಮಜಾ’ ಮೂಡ್‌ನಲ್ಲಿದ್ದ ಮಕ್ಕಳು ಮೇ 29ರಿಂದ ಶಾಲೆಗಳಲ್ಲಿ ತರಗತಿಗಳಿಗೆ ಹಾಜರಾಗಲಿದ್ದಾರೆ. ಕನಸು ಕಂಗಳ ಚಿಣ್ಣರನ್ನು ಬರಮಾಡಿಕೊಳ್ಳಲು ವಿದ್ಯಾಮಂದಿರಗಳು ಸಜ್ಜಾಗಿವೆ.

ಶಾಲೆಗಳ ಪುನರಾರಂಭಕ್ಕೆ ಶಿಕ್ಷಣ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನುಉತ್ಸವವನ್ನಾಗಿ ಆಯೋಜಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಆಂದೋಲನ ಇನ್ನೂ ಒಂದು ತಿಂಗಳು ನಡೆಯಲಿದೆ.

‘ಮಕ್ಕಳ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಶಾಲೆಗಳ ಆವರಣವನ್ನು ತಳಿರು–ತೋರಣಗಳಿಂದ ಸಿಂಗರಿಸಿ, ಪ್ರಾರಂಭೋತ್ಸವ ನಡೆಸಬೇಕು. ಮಧ್ಯಾಹ್ನದ ಬಿಸಿಯೂಟದೊಂದಿಗೆ ಸಿಹಿ ಬಡಿಸಬೇಕು. ಶಾಲಾ ಬಂಡಿ ಕಾರ್ಯಕ್ರಮ ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ದಾಖಲಾತಿ ಹೆಚ್ಚಳದ ಕುರಿತೂ ಅರಿವು ಮೂಡಿಸಬೇಕು ಎಂದು ಸೂಚಿಸಲಾಗಿದೆ’ ಎಂದು ಡಿಡಿಪಿಐ ಆನಂದ ಬಿ. ಪುಂಡಲೀಕ ‘ಪ್ರಜಾವಾಣಿ’ ತಿಳಿಸಿದರು.

ADVERTISEMENT

‘ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 1,400ಕ್ಕೂ ಹೆಚ್ಚಿನ ಸರ್ಕಾರಿ ಶಾಲೆಗಳಿವೆ. ಅನುದಾನಿತ ಶಾಲೆಗಳೊಂದಿಗೆ ಅನುದಾನರಹಿತ ಶಾಲೆಗಳು ಕೂಡ ಬುಧವಾರದಿಂದಲೇ ಆರಂಭವಾಗಲಿವೆ. ಸರ್ಕಾರಿ ಶಾಲೆಗಳಿಗೆ ಶೇ 85ರಿಂದ 90ರಷ್ಟು ಪಠ್ಯಪುಸ್ತಕಗಳನ್ನು ತಲುಪಿಸಲಾಗಿದೆ. ಸಮವಸ್ತ್ರಗಳು ಕೂಡ ಬಂದಿವೆ. ಅವುಗಳನ್ನು ಮೊದಲನೇ ದಿನವೇ ಪೂರೈಸಲಾಗುವುದು. ಸದ್ಯ 3.70 ಲಕ್ಷ ಮಕ್ಕಳು ಶಾಲೆಗಳಿಗೆ ಹಾಜರಾಗಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಕಲಿಕೆ, ಆಟೋಟ, ಪರೀಕ್ಷೆ, ಫಲಿತಾಂಶದ ನಂತರ ದೊರೆತ ಬೇಸಿಗೆ ರಜೆ ಮುಗಿಸಿ ಶಾಲೆಗಳತ್ತ ಹೊರಡಲು ಮಕ್ಕಳು ಸಿದ್ಧವಾಗಿದ್ದಾರೆ. ಅವರನ್ನು ಸಜ್ಜುಗೊಳಿಸಲು ಪೋಷಕರೂ ಹಿಂದೆ ಬಿದ್ದಿಲ್ಲ. ಹೊಸ ಪಠ್ಯಪುಸ್ತಕಗಳನ್ನು ಪಡೆದು ಮತ್ತೆ ಕಲಿಕೆಯಲ್ಲಿ ಮಗ್ನರಾಗುವ ಸರದಿ ಮಕ್ಕಳದಾಗಿದೆ. ದಾಖಲಾತಿ ಆಂದೋಲನ ಪ್ರಗತಿಯಲ್ಲಿರುವುದರಿಂದ ಅಂತಿಮ ದಾಖಲಾತಿ ಪಟ್ಟಿ ಸಿದ್ಧಗೊಂಡಿಲ್ಲ.

ಕೆಲವು ಗ್ರಾಮಗಳಲ್ಲಿ ‘ಶಾಲಾ ಬಂಡಿ’ ಕಾರ್ಯಕ್ರಮದ ಮೂಲಕ ಮಕ್ಕಳನ್ನು ಎತ್ತಿನಗಾಡಿಗಳಲ್ಲಿ ಮೆರವಣಿಗೆಯಲ್ಲಿ ಕರೆತರುವುದು ಕಂಡುಬರುತ್ತದೆ. ಇದು ಈ ಬಾರಿಯೂ ಮುಂದುವರಿಯುವ ನಿರೀಕ್ಷೆ ಇದೆ.

1ರಿಂದ 10ನೇ ತರಗತಿವರೆಗಿನ ಮಕ್ಕಳಿಗಾಗಿ ಕನ್ನಡ, ಇಂಗ್ಲಿಷ್, ಉರ್ದು ಹಾಗೂ ಮರಾಠಿ ಮಾಧ್ಯಮದ ಮಕ್ಕಳಿಗೆ ಬೇಕಾಗುವ ಪುಸ್ತಕಗಳನ್ನು ಶಾಲೆಗಳಿಗೆ ರವಾನಿಸಲಾಗಿದೆ. ಅಲ್ಲಿ ಮಕ್ಕಳಿಗೆ ವಿತರಿಸಲಾಗುವುದು. ಇಲಾಖೆಯ ಇಲ್ಲಿನ ಅಧಿಕಾರಿಗಳು ಮಾರ್ಚ್‌ನಲ್ಲಿ ಸಲ್ಲಿಸಿದ್ದ ಬೇಡಿಕೆ ಪ್ರಕಾರ ಪುಸ್ತಕಗಳನ್ನು ಪೂರೈಸಲಾಗಿದೆ.

ಜಿಲ್ಲೆಯ 73 ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಆರಂಭವಾಗುತ್ತಿರುವುದು ಈ ಬಾರಿಯ ವಿಶೇಷಗಳಲ್ಲೊಂದು. ಇದಕ್ಕೂ ತಯಾರಿ ಮಾಡಿಕೊಳ್ಳಲಾಗಿದೆ. ಇಲಾಖೆಯ ವತಿಯಿಂದ ಶಿಕ್ಷಕರಿಗೆ ತರಬೇತಿ ಕೊಡಿಸಲಾಗಿದೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆ ಪಠ್ಯಪುಸ್ತಕ ಪೂರೈಕೆ ಮಾಹಿತಿ
ವಲಯ; ಬೇಡಿಕೆ; ಪೂರೈಕೆಯಾಗಿರುವುದು

ಬೈಲಹೊಂಗಲ; 3,26,875;2,90,875
ಬೆಳಗಾವಿ ನಗರ; 6,35,250;5,17,000
ಬೆಳಗಾವಿ ಗ್ರಾಮೀಣ; 4,74,645;3,77,00
ಖಾನಾಪುರ; 32,642;26,000
ಕಿತ್ತೂರು; 1,48,258;1,38,255
ರಾಮದುರ್ಗ; 3,45,958;2,99,953
ಸವದತ್ತಿ; 4,35,812; 3,80,612

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.