ಚಿಕ್ಕೋಡಿ: ‘ಚಿಕ್ಕೋಡಿ ಸದಲಗಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಅಲ್ಪಸಂಖ್ಯಾತರ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಈಡೇರಿಸಲಾಗುತ್ತಿದೆ. ಹಿರೇಕೋಡಿ ಗ್ರಾಮದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿ ಪ್ರೌಢಶಾಲೆಯನ್ನಾಗಿ ಶೀಘ್ರದಲ್ಲಿಯೇ ಮಾಡಲಾಗುವುದು’ ಎಂದು ಶಾಸಕ ಗಣೇಶ ಹುಕ್ಕೇರಿ ಭರವಸೆ ನೀಡಿದರು.
ತಾಲ್ಲೂಕಿನ ಹಿರೇಕೋಡಿ ಗ್ರಾಮದಲ್ಲಿ ಶನಿವಾರ ಮುಸ್ಲಿಂ ಸಮುದಾಯದವರಿಗಾಗಿ ₹20 ಲಕ್ಷ ವೆಚ್ಚದ ಶಾದಿ ಮಹಲ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಮುಸ್ಲಿಂ ಸಮುದಾಯದ ಜನರಿಗೆ ಶುಭ ಕಾರ್ಯಗಳನ್ನು ಮಾಡಲು ಅನುಕೂಲವಾಗಲಿ ಎಂಬ ಕಾರಣದಿಂದ ಶಾದಿಮಹಲ್ ನಿರ್ಮಾಣ ಮಾಡಲಾಗುತ್ತಿದೆ. ದೇಸಾಯಿ ಅವರ ತೋಟದ ಬಳಿ ಕಿರು ಸೇತುವೆ ನಿರ್ಮಾಣ ಮಾಡಲಾಗುವುದು’ ಎಂದರು.
ಮುಖಂಡ ಶಾನೂರ ಜಮಾದಾರ ಮಾತನಾಡಿ, ‘ಉರ್ದು ಶಾಲಾ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಅವಶ್ಯತೆ ಇದ್ದು, ಕೂಡಲೇ ಕ್ರಮ ಕೈಗೊಂಡು ಶಾಲಾ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು’ ಎಂದರು.
ಮುಖಂಡರಾದ ಸುರೇಶ ಚೌಗಲಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ದಾಮನ್ನವರ, ಉಪಾಧ್ಯಕ್ಷ ರಾಮದಾಸ ಬಂಡಗರ, ಬಾಬಾಸಾಬ ಗುಡಿಮನಿ, ನಿಜಾಮ ಪಟೇಲ, ಅನಿತಾ ಬನಗೆ, ಚಿಕ್ಕೋಡಿ ಪುರಸಭೆ ಸದಸ್ಯ ಅನಿಲ ಮಾನೆ, ದಾದಾ ಪಟೇಲ, ಬಾಬರ್ ಪಟೇಲ, ಅನ್ವರ್ ಮುಜಾವಾರ, ರಿಯಾಜ್ ಮುಜಾವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.