ADVERTISEMENT

ಸಿಬ್ಬಂದಿ ವೇತನಾನುದಾನ ಮಂಜೂರು: ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 11:43 IST
Last Updated 14 ಡಿಸೆಂಬರ್ 2018, 11:43 IST

ಬೆಳಗಾವಿ: ಖಾಸಗಿ ಐಟಿಐಗಳಿಗೆ ವಿದ್ಯಾರ್ಥಿ ಕೇಂದ್ರೀಕೃತ ಅನುದಾನ ರದ್ದುಪಡಿಸಿ, ಸಿಬ್ಬಂದಿ ವೇತನಾನುದಾನ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಖಾಸಗಿ ಐಟಿಐ ಆಡಳಿತ ಮಂಡಳಿಗಳ ಸಂಘದವರು ಶುಕ್ರವಾರ ತಾಲ್ಲೂಕಿನ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸಿದರು.

‘ರಾಜ್ಯದಲ್ಲಿ 1,300 ಖಾಸಗಿ ಐಟಿಐಗಳು ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ 75ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿವೆ. ನಿರುದ್ಯೋಗಿ ಯುವಕ, ಯುವತಿಯರು ಸ್ವ ಉದ್ಯೋಗ ಕಂಡುಕೊಳ್ಳಲು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಹೊಂದುವಂತಾಗಲು ಶ್ರಮಿಸುತ್ತಿವೆ. ಔದ್ಯೋಗಿಕ ಕ್ಷೇತ್ರಕ್ಕೆ ಬೇಕಾದ ಕೌಶಲಗಳನ್ನು ಕಲಿಸುತ್ತಿವೆ. ಆದರೆ, ಈ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿಗೆ ಉದ್ಯೋಗದ ಭದ್ರತೆ ಇಲ್ಲವಾಗಿದೆ. ಆತಂಕದಲ್ಲಿ ಬದುಕು ನಡೆಸುತ್ತಿದ್ದಾರೆ’ ಎಂದು ತಿಳಿಸಿದರು.

‘ಇದುವರೆಗೆ 199 ಕಾಲೇಜುಗಳನ್ನು ಮಾತ್ರ ಅನುದಾನಕ್ಕೆ ಒಳಪಡಿಸಲಾಗಿದೆ. ಉಳಿದ ಸಂಸ್ಥೆಗಳಿಗೆ 2010ರವರೆಗೆ ಅನುದಾನ ನೀಡಿದರೆ, 3040 ಸಿಬ್ಬಂದಿಗೆ ನೇಮಕಾತಿ ಅವಕಾಶ ದೊರೆಯುತ್ತದೆ. ಇದಕ್ಕೆ ವಾರ್ಷಿಕ ₹ 112 ಕೋಟಿ ಬೇಕಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಎನ್‌ಸಿವಿಟಿಯಿಂದ ಸಂಯೋಜನೆಗೊಂಡ, ಏಳು ವರ್ಷ ಪೂರೈಸಿದ ಐಟಿಐ ಸಿಬ್ಬಂದಿಯನ್ನು ವೇತನಾನುದಾನಕ್ಕೆ ಒಳಪಡಿಸಬೇಕು. ಎನ್‌ಸಿವಿಟಿ ಸಂಯೋಜನೆಗೆ ಶಿಫಾರಸು ಮಾಡಬೇಕು. ಡಿಜಿಟಿ ನಿಗದಿಪಡಿಸಿರುವ ಖಾಸಗಿ ಐಟಿಐಗಳ ಪ್ರವೇಶ ಶುಲ್ಕವನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಜಾರಿಗೊಳಿಸಬೇಕು. ಕ್ಯುಸಿಐನಿಂದ ಪರಿವೀಕ್ಷಣೆಗೊಂಡು ಎನ್‌ಸಿವಿಟಿ ಸಂಯೋಜನೆ ಹೊಂದಿದ ಐಟಿಐಗಳನ್ನು ಶಾಶ್ವತವಾಗಿ ಸಂಯೋಜನೆಗೊಳಿಸಬೇಕು. ಕೈಗಾರಿಕೆಗಳು ಖಾಸಗಿ ಐಟಿಐಗಳನ್ನು ದತ್ತು ಪಡೆದು ಕೌಶಲ ಅಭಿವೃದ್ಧಿಯ ಬೆಳವಣಿಗೆಗೆ ಸಹಕಾರ ನೀಡಬೇಕು. ಆನ್‌ಲೈನ್‌ ಪರೀಕ್ಷೆ ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಮಂಜುನಾಥ, ಪ್ರಧಾನ ಕಾರ್ಯದರ್ಶಿ ಸಿ. ನಾರಾಯಣಪ್ಪ, ಕಾರ್ಯದರ್ಶಿ ಅಡಿವೇಶ ಇಟಗಿ ಹಾಗೂ ಖಜಾಂಚಿ ಸಂತೋಷ್ ಪಟ್ಟಣಶೆಟ್ಟಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.