ಬೆಳಗಾವಿ: ‘ಖಾನಾಪುರ ತಾಲ್ಲೂಕಿನ ನಿಟ್ಟೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪ್ರಭು ನಗರದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ಹಂಚಿಕೆಯಾಗಿದ್ದ ಜಾಗವನ್ನು ತಕ್ಷಣವೇ ನೀಡಬೇಕು’ ಎಂದು ಒತ್ತಾಯಿಸಿ ಯುವ ಕರ್ನಾಟಕ ಭೀಮ್‌ಸೇನೆ ಯುವಶಕ್ತಿ ಸಂಘದ ಕಾರ್ಯಕರ್ತರು ನಗರದಲ್ಲಿ ಬುಧವಾರ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು.
ಇಲ್ಲಿನ ರಾಣಿ ಚನ್ನಮ್ಮನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಕಾರರು ಮೆರವಣಿಗೆ ನಡೆಸಿ, ನಿಟ್ಟೂರ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
‘2007–08ನೇ ಸಾಲಿನಲ್ಲಿ ಆಸ್ತಿ ಸಂಖ್ಯೆ 510ರಲ್ಲಿನ ಜಾಗವನ್ನು ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ನೀಡಿ, ಗ್ರಾಮ ಪಂಚಾಯಿತಿಯವರು ಉತಾರ ನೀಡಿದ್ದರು. ಈಗ ಅಲ್ಲಿ ಭವನ ನಿರ್ಮಿಸಲು ಜಾಗ ನೀಡದೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ದೂರಿದರು.
‘ಪರಿಶಿಷ್ಟರ ಸ್ಮಶಾನಭೂಮಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿನ ಒತ್ತುವರಿ ತಡೆಯಬೇಕು. ಒತ್ತುವರಿ ಮಾಡಿದವರ ವಿರುದ್ಧ ಕ್ರಮವಾಗಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.