ADVERTISEMENT

ಕೇಂದ್ರ ಬಜೆಟ್‌: ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 13:13 IST
Last Updated 1 ಫೆಬ್ರುವರಿ 2021, 13:13 IST
ಪ್ರಶಾಂತ ಅರಳಿಕಟ್ಟಿ
ಪ್ರಶಾಂತ ಅರಳಿಕಟ್ಟಿ   

ಕೇಂದ್ರ ಸರ್ಕಾರ ಮಂಡಿಸಿರುವ ಆಯವ್ಯಯ ಪತ್ರ ರೈತ ವಿರೋಧಿಯಾಗಿದೆ. ಭರವಸೆಯಂತೆ ರೈತರ ಸಾಲ ಮನ್ನಾ ಮಾಡಲಿಲ್ಲ. ಕೊರೊನಾ ಕಂಟಕದ ಹೆಸರಿನಲ್ಲಿ ಬಜೆಟ್‍ನಲ್ಲಿ ಕೃಷಿ ವಲಯವನ್ನು ಕಡೆಗಣಿಸಲಾಗಿದೆ. ಇದು ಕೃಷಿಕರಲ್ಲಿ ಖುಷಿ ತಂದಿಲ್ಲ. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿಸುವುದನ್ನು ಮಾತ್ರ ಮರೆತಿಲ್ಲ. ಕೇಂದ್ರ ಬಜೆಟ್ ಜನಸಾಮಾನ್ಯರ ಪರವಾಗಿಲ್ಲ.

**
ರೈತ ವಿರೋಧಿ ಬಜೆಟ್

ಕೇಂದ್ರ ಸರ್ಕಾರ ಮಂಡಿಸಿರುವ ಆಯವ್ಯಯ ಪತ್ರ ರೈತ ವಿರೋಧಿಯಾಗಿದೆ. ಭರವಸೆಯಂತೆ ರೈತರ ಸಾಲ ಮನ್ನಾ ಮಾಡಲಿಲ್ಲ. ಕೊರೊನಾ ಕಂಟಕದ ಹೆಸರಿನಲ್ಲಿ ಬಜೆಟ್‍ನಲ್ಲಿ ಕೃಷಿ ವಲಯವನ್ನು ಕಡೆಗಣಿಸಲಾಗಿದೆ. ಇದು ಕೃಷಿಕರಲ್ಲಿ ಖುಷಿ ತಂದಿಲ್ಲ. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿಸುವುದನ್ನು ಮಾತ್ರ ಮರೆತಿಲ್ಲ. ಕೇಂದ್ರ ಬಜೆಟ್ ಜನಸಾಮಾನ್ಯರ ಪರವಾಗಿಲ್ಲ.
-ಕಾಡಗೌಡ ಆರ್. ಪಾಟೀಲ, ಜೆಡಿಎಸ್‍ ಯುವ ಮುಖಂಡ, ಚಿಕ್ಕೋಡಿ

**

ADVERTISEMENT

ನಿರಾಶಾದಾಯಕವಾಗಿದೆ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ನಿರಾಶದಾಯಕವಾಗಿದೆ. ದಿನ ಬಳಕೆ ವಸ್ತುಗಳು, ಪೆಟ್ರೋಲ್ ಹಾಗೂ ಡೀಸೆಲ್‌ ಮೇಲೆ ಸೆಸ್ ಹೇರುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಬರೆ ಎಳೆದಿದೆ. ಇದರಿಂದ ಬಡ ಕುಟುಂಬಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ.
-ಪ್ರಶಾಂತ ಅರಳಿಕಟ್ಟಿ, ಗೋಕಾಕ

**
ಸುಧಾರಣೆಗೆ ದಿಕ್ಸೂಚಿ
ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಕೇಂದ್ರ ಬಜೆಟ್‌ ಸುಧಾರಣೆ, ಪರಿವರ್ತನೆಗೆ ದಿಕ್ಸೂಚಿಯಂತಾಗಿದೆ. ಬದಲಾವಣೆಯನ್ನು ಒಂದೇ ರಾತ್ರಿಯಲ್ಲಿ ತರುವುದಕ್ಕೆ ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ನೋಡಿ ಸರ್ಕಾರವು ಮೂಲಸೌಲಭ್ಯ, ಆರೋಗ್ಯ ಕ್ಷೇತ್ರ, ಸಣ್ಣ ಕೈಗಾರಿಕೆ, ಗೃಹ ನಿರ್ಮಾಣ ಕ್ಷೇತ್ರ ಮೊದಲಾದವುಗಳಿಗೆ ಆದ್ಯತೆ ನೀಡಲಾಗಿದೆ. ಹಂತ ಹಂತವಾಗಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಮಧ್ಯಮ ವರ್ಗದ ತೆರಿಗೆದಾರರು ಹಾಗೂ ವೇತನದಾರರಿಗೆ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ, ನಿರಾಶೆಗೊಂಡಿದ್ದಾರೆ.
-ಸತೀಶ ತೆಂಡುಲ್ಕರ್, ಉದ್ಯಮಿ

**
ಬಡವರ ಬೆನ್ನಿಗೆ ಚಿನ್ನದ ಚೂರಿ
ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಬಡವರ ಬೆನ್ನಿಗೆ ಚಿನ್ನದ ಚೂರಿ ಹಾಕಿದಂತಿದೆ. ಬಡವರು ಬಳಸುವ ಬಹುತೇಕ ಉತ್ಪನ್ನಗಳ ಮೇಲೆ ಸೆಸ್ ವಿಧಿಸಲಾಗಿದೆ. ಕೊರೊನಾದಿಂದ ಕಂಗೆಟ್ಟಿರುವ ರೈತರು, ಜನಸಾಮಾನ್ಯರಿಗೆ ವಿಶೇಷ ಪ್ಯಾಕೇಜ್ ಘೋಷಿಸಬಹುದು ಮತ್ತು ಮುಳುಗಿರುವ ಬಡವರನ್ನು ಮೇಲೆತ್ತುವ ಯೋಜನೆ ಜಾರಿಗೊಳಿಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಈಡೇರಿಲ್ಲ. ಈ ಹಿಂದೆ ಘೋಷಿಸಿದ್ದ ₹ 20 ಲಕ್ಷ ಕೋಟಿ ಪ್ಯಾಕೇಜ್ ಎನ್ನುವ ಕನ್ನಡಿಯೊಳಗಿನ ಗಂಟು ಸರಿದೂಗಿಸಲು ಪೆಟ್ರೋಲ್, ಡೀಸೆಲ್, ಧಾನ್ಯ, ರಸಗೊಬ್ಬರದ ಮೇಲೆ ಸೆಸ್ ಹಾಕಲಾಗಿದೆ. ಇವೆಲ್ಲ ನೇರವಾಗಿ ಬಡವರ ಮೇಲಿನ ಗದಾಪ್ರಹಾರವಾಗಿದೆ ಎಂದು ಹೆಬ್ಬಾಳಕರ್ ಹೇಳಿದ್ದಾರೆ. ಬಡವರ ವಿರೋಧಿ ಸರ್ಕಾರ ಎನ್ನುವುದು ಸಾಬೀತಾಗಿದೆ.
-ಲಕ್ಷ್ಮಿ ಹೆಬ್ಬಾಳಕರ, ಶಾಸಕಿ

**
ಅಭಿವೃದ್ಧಿಗೆ ಒತ್ತು ಕೊಟ್ಟಿದೆ
ಕೇಂದ್ರ ಮಂಡಿಸಿರುವ 2021-22ನೇ ಸಾಲಿನ ಬಜೆಟ್ ರಾಷ್ಟ್ರೀಯ ಭದ್ರತೆ, ಜನತೆಯ ಸುರಕ್ಷತೆ, ಆರೋಗ್ಯ, ಶಿಕ್ಷಣ, ಕೃಷಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ಕೊಟ್ಟಿದೆ. ಈ ಮೂಲಕ ಪ್ರಪಂಚದಲ್ಲಿ‌ ಬಲಿಷ್ಠ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಲಿದೆ. ಕೃಷಿಗೆ ₹ 16 ಲಕ್ಷ ಕೋಟಿ ಸಾಲಕ್ಕೆ ಕ್ರಮ, ರೈತರ ಆದಾಯ ದ್ವಿಗುಣಗೊಳಿಸುವ ಮೂಲಕ ಕೃಷಿ ವಲಯಕ್ಕೆ ಮಹತ್ವದ ಕೊಡುಗೆ ನೀಡಲಾಗಿದೆ. ರೈತರಿಂದ ಕೃಷಿ ಉತ್ಪನ್ನ ಖರೀದಿಗಾಗಿ ₹ 1.72 ಲಕ್ಷ ಕೋಟಿ ಮೀಸಲಿಡುವುದಾಗಿ ಘೋಷಿಸಿರುವುದು ಶ್ಲಾಘನೀಯ.
-ಸಂಜಯ ಪಾಟೀಲ, ಅಧ್ಯಕ್ಷ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕ

**
ರೈತರ ವಿರುದ್ಧ ಜನರನ್ನು ಎತ್ತಿಕಟ್ಟುವ ಕುತಂತ್ರ
ನಿರ್ಮಲಾ ಸೀತರಾಮನ್ ಅವರು ಮಂಡಿಸಿರುವ ಕೇಂದ್ರ ಬಜೆಟ್ ನಿರಾಶಾದಾಯಕವಾಗಿದೆ. ದೇಶದ ಜನರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಎಲ್ಲರನ್ನೂ ನಿರಾಶರನ್ನಾಗಿ ಮಾಡಲಾಗಿದೆ. ಪೆಟ್ರೋಲ್, ಡೀಸೆಲ್, ರಸಗೊಬ್ಬರ, ಕಲ್ಲಿದ್ದಲು, ಪಾಮ್ ಆಯಿಲ್, ಕಡಲೆ, ಬಟಾಣಿ, ಹತ್ತಿಯಿಂದ ಹಿಡಿದು ಮದ್ಯ, ಆಪಲ್‌ವರೆಗೆ ಎಲ್ಲದ್ದಕ್ಕೂ ರೈತರ ಹೆಸರಲ್ಲಿ ಹೊಸದಾಗಿ ಕೃಷಿ ಸೆಸ್ ಹೇರಲಾಗಿದೆ. ಕೃಷಿ ಉತ್ಪನ್ನಗಳ ಬೆಲೆ ಸ್ಥಿರವಾಗಲು ಯಾವುದೇ ಕ್ರಮ ಕೈಗೊಂಡಿಲ್ಲ. ಕೃಷಿ ಉತ್ತೇಜನ ಯೋಜನೆಗಳಿಲ್ಲದ ಬಜೆಟ್ ಇದ್ದೂ ಇಲ್ಲದಂತಾಗಿದೆ. ಅಬಕಾರಿ ಸುಂಕವನ್ನೂ ಹೆಚ್ಚಿಸಲಾಗಿದೆ. ಈ ಮೂಲಕ ಬೆಲೆ ಏರಿಕೆಗೆ ರೈತರನ್ನು ಹೊಣೆಗಾರರನ್ನಾಗಿ ಮಾಡಿ, ಅವರ ವಿರುದ್ಧ ಜನರನ್ನು ಎತ್ತಿಕಟ್ಟುವ ಕುತಂತ್ರ ಮಾಡಲಾಗಿದೆ.
-ಲಕ್ಕಣ್ಣ ಸವಸುದ್ದಿ, ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.