ADVERTISEMENT

ಬೆಳಗಾವಿ: ಕುಂದುಕೊರತೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 19:30 IST
Last Updated 12 ಜನವರಿ 2022, 19:30 IST
ಸವದತ್ತಿ ತಾಲ್ಲೂಕಿನ ಬಡ್ಲಿ ಗ್ರಾಮದಿಂದ ಮುನವಳ್ಳಿವರೆಗಿನ ರಸ್ತೆ ಹಾಳಾಗಿದೆ
ಸವದತ್ತಿ ತಾಲ್ಲೂಕಿನ ಬಡ್ಲಿ ಗ್ರಾಮದಿಂದ ಮುನವಳ್ಳಿವರೆಗಿನ ರಸ್ತೆ ಹಾಳಾಗಿದೆ   

ರಸ್ತೆ ದುರಸ್ತಿಪಡಿಸಿ

ಸವದತ್ತಿ: ತಾಲ್ಲೂಕಿನ ಬಡ್ಲಿ ಗ್ರಾಮದಿಂದ ಮುನವಳ್ಳಿವರೆಗಿನ ರಸ್ತೆ ಬಹಳ ಹಾಳಾಗಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಈ ರಸ್ತೆಯಲ್ಲಿ ಬಹಳಷ್ಟು ಗುಂಡಿಗಳು ಉಂಟಾಗಿವೆ. ದೂಳಿನ ಮಜ್ಜನವೂ ಆಗುತ್ತದೆ. ದ್ವಿಚಕ್ರವಾಹನ ಸವಾರಿ ಸರ್ಕಸ್‌ ಮಾಡಿದಂತೆ ಆಗುವ ಪರಿಸ್ಥಿತಿ ಇದೆ. ಹೀಗಾಗಿ, ಸಂಬಂಧಿಸಿದವರು ಇತ್ತ ಗಮನಹರಿಸಬೇಕು. ಜನರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.

ADVERTISEMENT

–ಶ್ರೀಶೈಲ ಹಿರೇಮಠ, ಚಂದ್ರು ಹಿರೇಮಠ, ಸವದತ್ತಿ

ತೊಂದರೆ ನಿವಾರಿಸಿ

ಅಥಣಿ: ಅಂಬೇಡ್ಕರ್ ವೃತ್ತದಿಂದ ಸತ್ತಿಗೆ ಸಂಪರ್ಕ ಕಲ್ಪಿಸುವ ಒಂದು ಮೈಲಿ ರಸ್ತೆ ಹಾಳಾಗಿದ್ದು, ಸುಗಮ ಸಂಚಾರಕ್ಕೆ ಸಂಚಕಾರ ಉಂಟು ಮಾಡುತ್ತಿದೆ. ಅಲ್ಲಲ್ಲಿ ಡಾಂಬರು ಕಿತ್ತು ಹೋಗಿದೆ. ಗುಂಡಿಗಳಿಂದಲೇ ತುಂಬಿ ಹೋಗಿದೆ. ಆಗಾಗ ವಾಹನಗಳು ಗುಂಡಿಗೆ ಇಳಿದು ನಿಂತುಬಿಡುತ್ತವೆ. ಈ ರಸ್ತೆಯ ಇಕ್ಕೆಲಗಳಲ್ಲಿ ಶಾಲೆ, ಕಾಲೇಜು, ಆಸ್ಪತ್ರೆ, ಬ್ಯಾಂಕ್ ಹಾಗೂ ವಿವಿಧ ಮಳಿಗೆಗಳು ಇವೆ. ಹೀಗಾಗಿ, ಇಲ್ಲಿ ಜನರ ಸಂಚಾರ ಜಾಸ್ತಿ ಇರುತ್ತದೆ. ಆದರೆ, ರಸ್ತೆ ಹಾಳಾಗಿರುವುದರಿಂದ ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ. ದೂಳಿನಿಂದಾಗಿ ಕೆಮ್ಮು, ಉಸಿರಾಟದ ತೊಂದರೆ, ಶೀತ ಮುಂತಾದ ಆರೋಗ್ಯ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಜನರ ಆರೋಗ್ಯದ ದೃಷ್ಟಿಯಿಂದ ರಸ್ತೆ ಸುಧಾರಣೆಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕು.

– ಸ್ಟ್ಯಾನಿ ಆರ್., ಅಥಣಿ

ಚರಂಡಿ ನಿರ್ಮಿಸಿ

ಚನ್ನಮ್ಮನ ಕಿತ್ತೂರು: ಪಟ್ಟಣದ ಗುರುವಾರ ಪೇಟೆಯ ಸಾವಿರ ಮಠದಿಂದ ದೇಮಟ್ಟಿ ಅವರ ಓಣಿಗೆ ಹೋಗುವ ರಸ್ತೆ ಬದಿಗೆ ಚರಂಡಿ ನಿರ್ಮಾಣವಿಲ್ಲದೆ ಜನತೆ ತಾಪತ್ರಯ ಪಡುವಂತಾಗಿದೆ. ಮಲಿನ ನೀರು ರಸ್ತೆಯಲ್ಲಿ ಹರಿದು ಹೋಗುವಂತಾಗಿದೆ. ಇದರಿಂದ ಸಾರ್ವಜನಿಕರು ಅಸಹನೀಯ ವೇದನೆ ಅನುಭವಿಸುತ್ತಿದ್ದಾರೆ.

ಈ ತೊಂದರೆಯನ್ನು ಪಟ್ಟಣ ಪಂಚಾಯ್ತಿ ಸದಸ್ಯರು ಮತ್ತು ಅಧಿಕಾರಿಗಳ ಗಮನಕ್ಕೆ ಅನೇಕ ಬಾರಿ ತರಲಾಗಿದೆ. ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಈ ಸಮಸ್ಯೆ ಬಗೆಹರಿಸಿಕೊಡಬೇಕು.

– ಶಿವರುದ್ರಪ್ಪ ನಾಗಲಾಪುರ, ರಮೇಶ ಯಮ್ಮಿ, ನಾಗೇಶ ಭಂಡಾರಿ, ನಿವಾಸಿಗಳು, ಚನ್ನಮ್ಮನ ಕಿತ್ತೂರು

ಚುಂಚನೂರ ರಸ್ತೆ ಸರಿಪಡಿಸಿ

ಬೆಳಗಾವಿ: ರಾಮದುರ್ಗ ತಾಲ್ಲೂಕಿನ ಚುಂಚನೂರ ಗ್ರಾಮದ ಮುಖ್ಯ ರಸ್ತೆ ಬಹಳ ಹದೆಗೆಟ್ಟಿದೆ. ಗುಂಡಿಗಳು ಉಂಟಾಗಿವೆ. ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ. ಗಟಾರಗಳಿಲ್ಲಿ ನೀರು ರಸ್ತೆಯ ಗುಂಡಿಯಲ್ಲಿ ಸಂಗ್ರಹವಾಗುತ್ತಿದೆ. ಇದರಿಂದ ಪಾದಚಾರಿಗಳಿಗೂ ಕೂಡ ತೊಂದರೆ ಆಗುತ್ತಿದೆ. ಅಧಿಕಾರಿಗಳು ಇತ್ತ ಗಮನಹರಿಸಬೇಕು. ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.

– ಕಿರಣ ಯಲಿಗಾರ, ಮುನವಳ್ಳಿ

ಮುನವಳ್ಳಿ ಸಂತೆ ಸ್ಥಳ ಬದಲಿಸಿ

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿಯಲ್ಲಿ ಗುರುವಾರ ಹಾಗೂ ಸೋಮವಾರ ಸಂತೆ ನಡೆಯುತ್ತದೆ. ತೀರಾ ಇಕ್ಕಟ್ಟಿನ ರಸ್ತೆ ಪ್ರದೇಶದಲ್ಲಿ ಜಾಗ ನಿಗದಿಪಡಿಸಲಾಗಿದೆ. ಸುತ್ತಮುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿನ ರೈತರು ತರಕಾರಿಗಳನ್ನು ತಂದು ದುರ್ನಾತದಿಂದ ಕೂಡಿದ ಚರಂಡಿಯ ಸಮೀಪ ಕುಳಿತು ಮಾರುತ್ತಾರೆ. ತ್ಯಾಜ್ಯದಿಂದಾಗಿ ಪರಿಸರವು ಮತ್ತಷ್ಟು ಹಾಳಾಗುತ್ತಿದೆ. ಚರಂಡಿಯನ್ನು ನಿರ್ವಹಣೆ ಮಾಡುವುದು ಕೂಡ ನಡೆಯುತ್ತಿಲ್ಲ. ಹೀಗಾಗಿ, ಸಂತೆಯನ್ನು ವಿಶಾಲವಾದ ಜಾಗಕ್ಕೆ ಸ್ಥಳಾಂತರಿಸಿ, ವ್ಯಾಪಾರಿಗಳು ಮತ್ತು ಸಾರ್ವಜನಿಕರೆಲ್ಲರಿಗೂ ಅನುಕೂಲ ಮಾಡಿಕೊಡಬೇಕು.

– ಸುರೇಶ ಜಂಬಗಿ, ಗೊರವನಕೊಳ್ಳ, ಸವದತ್ತಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.