ADVERTISEMENT

ಚುನಾವಣೆಗೆ ಸ್ಪರ್ಧೆ: ತಂದೆ ಹೇಳಿದಂತೆ ನಡೆಯುವೆ ಎಂದ ರಾಹುಲ್‌ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 10:43 IST
Last Updated 10 ಏಪ್ರಿಲ್ 2022, 10:43 IST
ರಾಹುಲ್‌ ಜಾರಕಿಹೊಳಿ
ರಾಹುಲ್‌ ಜಾರಕಿಹೊಳಿ   

ಬೆಳಗಾವಿ: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಸಂಬಂಧಿಸಿದಂತೆ ತಂದೆ ನಿರ್ದೇಶನದಂತೆ ಮುಂದುವರಿಯುತ್ತೇನೆ. ಸದ್ಯಕ್ಕೆ ಸಮಾಜಸೇವೆಯಲ್ಲಿ ತೊಡಗಿದ್ದೇನೆ’ ಎಂದು ಕೆ‍ಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪುತ್ರರಾಹುಲ್‌ ಜಾರಕಿಹೊಳಿ ಹೇಳಿದರು.

ಇಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ‘ತಂದೆ ಏನು ಹೇಳುತ್ತಾರೆಯೋ ಅದರಂತೆ ಮಾಡುತ್ತೇನೆ. ಪಕ್ಷ ಕೂಡ ಒಪ್ಪಿಗೆ ಕೊಡಬೇಕಾಗುತ್ತದೆ. ಇನ್ನೂ ಸಾಕಷ್ಟು ಅಂಶಗಳು ಇರುತ್ತವೆ’ ಎಂದರು.

‘ರಾಜಕೀಯ ಹಾಗೂ ಸಾಮಾಜಿಕ ಜೀವನ ಬೇರೆ ಬೇರೆಯಾಗಿ ನಡೆಯುತ್ತಿರುತ್ತದೆ. ಜನರಿಗಾಗಿ ನಾವು ಸಾಕಷ್ಟು ಸಮಯ ಕೊಡಬೇಕಾಗುತ್ತದೆ. ವೈಯಕ್ತಿಕ ಜೀವನವನ್ನು ತ್ಯಾಗ ಮಾಡಬೇಕಾಗುತ್ತದೆ. ಎಲ್ಲವನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕಾಗುತ್ತದೆ. ಸಾಮಾಜಿಕ ಜೀವನದಲ್ಲಿದ್ದ ಮೇಲೆ ನಮ್ಮನ್ನು ಪ್ರೀತಿಸುವವರೂ ಇರುತ್ತಾರೆ; ವಿರೋಧಿಸುವ ಜನರೂ ಇರುತ್ತಾರೆ. ಎಲ್ಲವನ್ನೂ ನೋಡಿಕೊಂಡು ಮುಂದುವರಿಯಬೇಕಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಸ್ವಂತ ನಿರ್ಧಾರದಿಂದ ಸಾಮಾಜಿಕ ಜೀವನದಲ್ಲಿದ್ದೇನೆ. ಜನಸೇವೆ ಮುಂದುವರಿಸಿಕೊಂಡು ಹೋಗುತ್ತೇನೆ. 2023ರ ಚುನಾವಣೆಗೆ ನಾನು ಇನ್ನೂ ತಯಾರಾಗಿಲ್ಲ. ಸ್ಪರ್ಧಿಸುವಂತೆ ಜನರು ಹೇಳುತ್ತಿದ್ದಾರೆ. ತಂದೆಯವರ ಮಾರ್ಗದರ್ಶನಕ್ಕೆ ಕಾಯುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.